PM Modi: ಉಜ್ಬೆಕಿಸ್ತಾನಕ್ಕೆ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಜೊತೆಗೆ ಮಾತುಕತೆ ಸಾಧ್ಯತೆ | PM Narendra Modi to Visit Uzbekistan on 14th Sep to attend SCO Summit 2022 in Samarkand Uzbekistan: details in Kannada


SCO Summit 2022: ಮೋದಿ ಮತ್ತು ಷಿ ಜಿನ್​ಪಿಂಗ್ ನಡುವಣ ಮೊದಲ ಮುಖಾಮುಖಿಯು ದ್ವಿಪಕ್ಷೀಯ ಮಾತುಕತೆಯ ಸಾಧ್ಯತೆಯ ಬಗ್ಗೆ ನಿರೀಕ್ಷೆ ಹುಟ್ಟುಹಾಕಿವೆ.

PM Modi: ಉಜ್ಬೆಕಿಸ್ತಾನಕ್ಕೆ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಜೊತೆಗೆ ಮಾತುಕತೆ ಸಾಧ್ಯತೆ

ನರೇಂದ್ರ ಮೋದಿ

ದೆಹಲಿ: ಉಜ್ಬೆಕಿಸ್ತಾನದ ಸಮರ್​ಖಂಡ್​​ದಲ್ಲಿ ನಾಳೆ ಮತ್ತು ನಾಡಿದ್ದು (ಸೆ 15-16) ನಡೆಯಲಿರುವ ‘ಶಾಂಘೈ ಸಹಕಾರ ಸಂಘಟನೆ’ಯ ಶೃಂಗಸಭೆಯಲ್ಲಿ (Shanghai Cooperation Organisation Summit) ಭಾರತ, ರಷ್ಯಾ ಮತ್ತು ಚೀನಾ ಸರ್ಕಾರಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಹೊಸ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ವಿಶ್ವ ಆರ್ಥಿಕ ವ್ಯವಸ್ಥೆಗೆ ಚೀನಾ ಮತ್ತು ರಷ್ಯಾದ ಪ್ರತಿಕ್ರಿಯೆ ಹೇಗಿರಬಹುದು ಎಂಬ ಬಗ್ಗೆ ಈ ಸಮಾವೇಶದಲ್ಲಿ ಇಣುಕುನೋಟ ಸಿಗಬಹುದು ಎಂದು ವಿಶ್ಲೇಷಕರು ನಿರೀಕ್ಷಿಸಿದ್ದಾರೆ. ಸಮಾವೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ. ಆದರೆ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಹಾಗೂ ಮೋದಿ ನಡುವಣ ಮಾತುಕತೆ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

‘ವ್ಯಾಪಾರ-ವ್ಯವಹಾರಗಳ ಸಂಬಂಧ, ರಸಗೊಬ್ಬರ ಪೂರೈಕೆ ಮತ್ತು ಆಹಾರ ಧಾನ್ಯಗಳ ಸರಬರಾಜು ಬಗ್ಗೆ ಪುಟಿನ್ ಮತ್ತು ಮೋದಿ ಪರಸ್ಪರ ಚರ್ಚಿಸಲಿದ್ದಾರೆ’ ಎಂದು ರಾಯಿಟರ್ಸ್​ ಸುದ್ದಿಸಂಸ್ಥೆ ವರದಿ ಮಾಡಿದೆ.

ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡೂ ದೇಶಗಳು ತಮ್ಮ ಸೇನೆಗಳನ್ನು ಹಿಂಪಡೆಯುವ ಬಗ್ಗೆ ಇತ್ತೀಚೆಗಷ್ಟೇ ನಿರ್ಧಾರ ತೆಗೆದುಕೊಂಡವು. ಈ ಹಿನ್ನೆಲೆಯಲ್ಲಿ ಮೋದಿ ಮತ್ತು ಷಿ ಜಿನ್​ಪಿಂಗ್ ನಡುವಣ ಮೊದಲು ಮುಖಾಮುಖಿಯು ದ್ವಿಪಕ್ಷೀಯ ಮಾತುಕತೆಯ ಸಾಧ್ಯತೆಯ ಬಗ್ಗೆ ನಿರೀಕ್ಷೆ ಹುಟ್ಟುಹಾಕಿವೆ.

ಶೃಂಗಸಭೆಯಲ್ಲಿ ಕನಿಷ್ಠ ಎರಡು ಅಧಿವೇಶನಗಳಲ್ಲಿ ಮೋದಿ ಮತ್ತು ಷಿ ಒಂದೇ ಕೊಠಡಿಯಲ್ಲಿ ಇರುತ್ತಾರೆ. ಈ ವೇಳೆ ಉಭಯ ನಾಯಕರು ಪರಸ್ಪರ ಸೌಹಾರ್ದದ ಮಾತುಗಳನ್ನು ಆಡಬಹುದು. ಆದರೆ ನಿರ್ದಿಷ್ಟ ವಿಷಯದ ಬಗ್ಗೆ ಇಬ್ಬರ ನಡುವೆ ಮಾತುಕತೆ ನಡೆಯುವ ಸಾಧ್ಯತೆಯ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಶೃಂಗಸಭೆಯ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಇಲಾಖೆಯು, ‘ಉಜ್ಬೆಕಿಸ್ತಾನದ ಅಧ್ಯಕ್ಷ ಶೌಕತ್ ಮಿರಿಝಿಯೊಯೆವ್ ಮತ್ತು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿದಂತೆ ಹಲವರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ’ ಎಂದು ಹೇಳಿದೆ. ಪುಟಿನ್ ಮತ್ತು ಷಿ ಜಿನ್​ಪಿಂಗ್ ಸಹ ಶೃಂಗಸಭೆಯ ವೇಳೆ ಪರಸ್ಪರ ಭೇಟಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

‘ಶಾಂಘೈ ಸಹಕಾರ ಸಂಘಟನೆ’ಯು ಚೀನಾ, ರಷ್ಯಾ, ಪಾಕಿಸ್ತಾನ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ದೇಶಗಳ ನಡುವೆ ವ್ಯಾಪಾರ ಮತ್ತು ಇತರ ಬಾಂಧವ್ಯ ವೃದ್ಧಿಗೆ ನೆರವಾಗಲೆಂದು ರೂಪಿಸಲಾಗಿದೆ. ಭಾರತವು ಈ ಸಮಾವೇಶದ ಮೂಲಕ ಮಧ್ಯ ಏಷ್ಯಾದೊಂದಿಗೆ ಸೌಹಾರ್ದ ಸಂಬಂಧ ಕಾಪಾಡಲು ಹಾಗೂ ಭಯೋತ್ಪಾದನೆ ನಿಗ್ರಹಕ್ಕಾಗಿ ವಿವಿಧ ದೇಶಗಳ ಸಹಕಾರ ಪಡೆದುಕೊಳ್ಳಲು ಯತ್ನಿಸುತ್ತಿದೆ. ಈ ಬಾರಿಯ ಶೃಂಗಸಭೆಯ ಮೂಲಕ ಇರಾನ್ ದೇಶವು ‘ಶಾಂಘೈ ಸಹಕಾರ ಸಂಘಟನೆ’ಯ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆದುಕೊಳ್ಳುವ ಸಾಧ್ಯತೆಯಿದೆ.

ಕೊವಿಡ್-19 ಪಿಡುಗು ಜಗತ್ತನ್ನು ಆವರಿಸುವ ಮೊದಲು ಚೀನಾ ಅಧ್ಯಕ್ಷ ಷಿ-ಜಿನ್​ಪಿಂಗ್ ವ್ಯಾಪಕವಾಗಿ ವಿದೇಶ ಪ್ರವಾಸ ನಡೆಸುತ್ತಿದ್ದರು. ನಂತರದ ದಿನಗಳಲ್ಲಿ ವರ್ಚುವಲ್ ಸಭೆಗಳ ಮೂಲಕವಷ್ಟೇ ವಿದೇಶಗಳು ಪ್ರಧಾನಿ-ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲು ಆರಂಭಿಸಿದರು. ಇಂದು (ಸೆಪ್ಟೆಂಬರ್ 14) ಕಜಕಿಸ್ತಾನಕ್ಕೆ ಪ್ರಯಾಣಿಸುವ ಮೂಲಕ ಕೊವಿಡ್ ನಂತರ ಮತ್ತೆ ತಮ್ಮ ವಿದೇಶ ಪ್ರವಾಸ ಆರಂಭಿಸಲಿದ್ದಾರೆ. 2019ರ ನವೆಂಬರ್​ನಲ್ಲಿ ಬ್ರೆಸಿಲಿಯಾದಲ್ಲಿ ನಡೆದಿದ್ದ ಬ್ರಿಕ್ಸ್​ ಶೃಂಗಸಭೆಯಲ್ಲಿ ಮೋದಿ ಮತ್ತು ಷಿ-ಜಿನ್​ಪಿಂಗ್ ಭೇಟಿಯಾಗಿದ್ದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.