PM Modi Speech: ಜೈಪುರದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ: ಚುನಾವಣೆ ಸಿದ್ಧತೆಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ | PM Narendra Modi virtually address to party workers in BJP national office bearers meeting at Jaipur Rajasthan details in Kannada


PM Modi Speech: ಜೈಪುರದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ: ಚುನಾವಣೆ ಸಿದ್ಧತೆಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿ

BJP National Meet 2022: ನಾವು ತಕ್ಷಣದ ಗುರಿಯ ಬಗ್ಗೆ ಅಷ್ಟೇ ಅಲ್ಲ, ಮುಂದಿನ 25 ವರ್ಷಗಳ ಗುರಿಯನ್ನೂ ಇರಿಸಿಕೊಂಡು ಯೋಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಶುಕ್ರವಾರ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಮುಂಬರುವ ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳಿ. ಪಕ್ಷದ ಸಂಘಟನೆಗೆ ಆದ್ಯತೆ ಕೊಡಿ ಎಂದು ಮೋದಿ ಕರೆ ನೀಡಿದರು. ನಾವು ತಕ್ಷಣದ ಗುರಿಯ ಬಗ್ಗೆ ಅಷ್ಟೇ ಅಲ್ಲ, ಮುಂದಿನ 25 ವರ್ಷಗಳ ಗುರಿಯನ್ನೂ ಇರಿಸಿಕೊಂಡು ಯೋಚಿಸಬೇಕು. ಸಮಯದ ಅಗತ್ಯಕ್ಕೆ ತಕ್ಕಂತೆ ಎಲ್ಲ ರೀತಯ ಸವಾಲುಗಳನ್ನು ಎದುರಿಸಬೇಕಿದೆ. ಭಾರತದ ಜನರ ಆಕಾಂಕ್ಷೆಗಳನ್ನು ಪೂರೈಸಲು ನಾವು ನಿರಂತರವಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ದೇಶದ ಸರ್ಕಾರದ ಬಗ್ಗೆ ಜನರು ನಂಬಿಕೆ ಕಳೆದುಕೊಂಡಿದ್ದರು. 2014ರ ನಂತರ ಈ ನಂಬಿಕೆಯನ್ನು ಪುನರ್ ಸ್ಥಾಪಿಸಿದ್ದು ಬಿಜೆಪಿ ಸರ್ಕಾರದ ದೊಡ್ಡ ಸಾಧನೆ. ಕಳೆದ 8 ವರ್ಷಗಳಲ್ಲಿ ದೇಶದ ಮಹಿಳೆಯರ ಘನತೆ ಹೆಚ್ಚಿಸುವ ಹಲವು ಉಪಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಆಶಯಗಳನ್ನು ನೆಲೆಗೊಳಿಸಲು ಸತತ ಪ್ರಯತ್ನ ನಡೆಸಿದ್ದೇವೆ. ಬಡ ಮತ್ತು ಮಧ್ಯವರ್ಗದ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಮೋದಿ ಹೇಳಿದರು.

ಇದೇ ತಿಂಗಳಲ್ಲಿ ಎನ್​ಡಿಎ ಸರ್ಕಾರವು ಅಧಿಕಾರಕ್ಕೆ ಬಂದು 8 ವರ್ಷ ಪೂರ್ಣಗೊಳಿಸಲಿದೆ. ಈಗ ದೇಶದಲ್ಲಿ ಎನ್​ಡಿಎ ಒಕ್ಕೂಟದ 400 ಸಂಸದರು ಮತ್ತು 1,300 ಶಾಸಕರು ಇದ್ದಾರೆ. ಇದನ್ನು ನಮ್ಮ ಸಾಧನೆ ಎಂದು ಕರೆದುಕೊಳ್ಳಲು ಇಷ್ಟಪಡುವುದಿಲ್ಲ. ನಮ್ಮ ದೇಶದ ಸಾಧಕರು ತೋರಿಸಿಕೊಟ್ಟ ಹಾದಿಯಲ್ಲಿ ನಾವು ಮುನ್ನಡೆಯಬೇಕಿದೆ. ಜನರ ಅಭ್ಯುದಯಕ್ಕೆ ಸತತ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು. ಬಡವರು, ಹಿಂದುಳಿದವರು ಮತ್ತು ಸವಲತ್ತುಗಳನ್ನು ಪಡೆಯಲು ಅರ್ಹತೆ ಇರುವವರಿಗೆ ನೆರವಾಗುವ ಯೋಜನೆಗಳನ್ನು ರೂಪಿಸಿ. ದೇಶದ ಅಭಿವೃದ್ಧಿಗೆ ಹೊರತಾದ ಇತರ ವಿಚಾರಗಳತ್ತ ಗಮನ ಹರಿಸುವಂತೆ ಮಾಡುವ ಹುನ್ನಾರಗಳು ನಡೆಯುತ್ತವೆ. ಇವುಗಳ ಬಗ್ಗೆ ಗಮನ ನೀಡಬೇಡಿ. ಇಂದು ನಮ್ಮ ದೇಶದ ಅತ್ಯಂತ ಕಡು ಬಡವರಿಗೂ ಸರ್ಕಾರದ ಸವಲತ್ತುಗಳು ಸಿಗುತ್ತಿವೆ. ಇಂಥವರೇ ಸರ್ಕಾರದ ಸಾಧನೆಯ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತಾರೆ ಎಂದರು.

TV9 Kannada


Leave a Reply

Your email address will not be published. Required fields are marked *