Poetry: ಅವಿತಕವಿತೆ; ‘ತೊಂಬತ್ತಾದರೂ ಅಪ್ಪ ಸಾಯುತ್ತಿಲ್ಲ!’ ಆಸ್ತಿಗಾಗಿ ಕೋರ್ಟ್​ ಮೊರೆ ಹೋಗಿದ್ದ ಸೋಫೊಕ್ಲಿಸ್​ನ ಮಕ್ಕಳು | AvithaKavithe Column by Kannada Poet Dr R Tarini Shubhadayini


Poetry: ಅವಿತಕವಿತೆ; ‘ತೊಂಬತ್ತಾದರೂ ಅಪ್ಪ ಸಾಯುತ್ತಿಲ್ಲ!’ ಆಸ್ತಿಗಾಗಿ ಕೋರ್ಟ್​ ಮೊರೆ ಹೋಗಿದ್ದ ಸೋಫೊಕ್ಲಿಸ್​ನ ಮಕ್ಕಳು

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’ (AvithaKavithe) ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ; ಕವಿ, ಅನುವಾದಕಿ ಡಾ. ಆರ್. ತಾರಿಣಿ ಶುಭದಾಯಿನಿ (Dr. R. Tarini Shubhadayini) ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್​ ಪ್ರಾಧ್ಯಾಪಕಿ. ಇವರ ಪಿಎಚ್.ಡಿ ಪ್ರಬಂಧ Cultural Politics of Translation; A Study of Attitude and Form. ಇವರ ಪ್ರಕಟಿತ ಕೃತಿಗಳು ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ, ಪೂರ್ವಭಾಷಿ, ಹೆಡೆಯಂತಾಡುವ ಸೊಡರು, ಗಳಿಗೆ ಬಟ್ಟಲು, ಸಾಮಯಿಕ, ಸನ್ನೆಗೋಲು, ಅಂಗುಲಹುಳುವಿನ ಇಂಚುಪಟ್ಟಿ, ಡಯಾಸ್ಪೊರಾ ಮಾನೋಗ್ರಾಫ್, ಸ್ತ್ರೀ ಶಿಕ್ಷಣ ಚಾರಿತ್ರಿಕ ಹೆಜ್ಜೆಗಳು. 2021ನೇ ಸಾಲಿನ ಕಾಂತಾವರ ಕನ್ನಡ ಸಂಘದ ಮುದ್ದಣ ಪ್ರಶಸ್ತಿ  ಪಡೆದ ‘ವಿವೇಕಿಯ ಸ್ವಗತ’ ಇಂದು ಬಿಡುಗಡೆಯಾಗಲಿದೆ. ಕೆಲ ಕವನಗಳು ನಿಮ್ಮ ಓದಿಗೆ. 

*

ಪ್ರತಿ ಕವಿಯೂ ನಿರಂತರವಾಗಿ ದಿಕ್ಚ್ಯುತಿಗಳನ್ನು ಮಾಡುತ್ತಿರುತ್ತಾಳೆ/ನೆ. ಬರವಣಿಗೆಯು ತುಂಬ ಬುದ್ಧಿಪೂರ್ವಕ ಅನ್ನಿಸುವಾಗ ಅದರಿಂದ ಹೊರಳಿ ಭಾವತೀವ್ರ ಕವಿತೆಗಳೆಡೆಗೆ ನಡೆಯುವುದು ಅಥವಾ ಬರೀ ಭಾವನೆಗಳೇ ತುಂಬಿದ ಅಭಿವ್ಯಕ್ತಿಯಿಂದ ಮತ್ತೊಂದೆಡೆಗೆ ಚಲಿಸುವುದು ಇತ್ಯಾದಿ. ಆದರೆ ಯಾವುದೇ ಒಂದು ಬಗೆಯ ಪ್ರಜ್ಞಾಪೂರ್ವಕ ನಿರಾಕರಣೆಯಿಂದಾಗಲೀ, ಸ್ವೀಕರಣೆಯಿಂದಾಗಲೀ ಕವಿತೆ ಸಾಧ್ಯವಿಲ್ಲ ಎನ್ನುವ ಎಚ್ಚರವೂ ತಾರಿಣಿಯವರ ಕವಿತೆಗಳಲ್ಲಿ ಇದೆ. ಒಂದು ಕವಿತೆಯಲ್ಲಿ ಒಮ್ಮೆ ಬಳಸಿದ ಭಾಷೆಯು ಮತ್ತೊಂದು ಕವಿತೆ ಬರೆಯುವ ಹೊತ್ತಿಗೆ ‘ಸ್ಥಾಪಿತ’ವಾದದ್ದಾಗುತ್ತದೆ. ಹಾಗಾಗಿ, ಪ್ರತಿ ಕವಿತೆಯೂ ಹೊಸ ಕನ್ನಡವನ್ನು ಬಳಸಿದಾಗ ಮಾತ್ರ ಹಳೆಯ ಕನ್ನಡವನ್ನು ಮುರಿದು ಕಟ್ಟುವ ಪ್ರಯತ್ನ ನಿರಂತರವಾಗಿರುತ್ತದೆ. ಅಂತಹ ಯತ್ನ ಈ ಸಂಕಲನದಲ್ಲಿ ಕಾಣುತ್ತದೆ.

ಕಾವ್ಯ, ಸಂಶೋಧನೆ, ಅನುವಾದ, ವಿಮರ್ಶೆ, ಸಂಪಾದನೆ- ಹೀಗೆ ಭಿನ್ನ ಬಗೆಗಳಲ್ಲಿ ತಾರಿಣಿ ಅವರು ಕ್ರಮಿಸಿರುವ, ಅಭಿವ್ಯಕ್ತಿಗೆ ಕಂಡುಕೊಂಡ ಸಾಹಿತ್ಯ ಮಾರ್ಗಗಳ ಒಳಗೆ ಅವರ ಸಾಹಿತ್ಯ ಕ್ಷೇತ್ರದ ಹೆಜ್ಜೆಗಳು ಮತ್ತು ಅದನ್ನು ಪ್ರೇರಿಸಿರುವ ಲೋಕದ ಕಡೆಗೆ ನನ್ನ ಮನಸ್ಸು ಹೊರಳುತ್ತದೆ. ಅಧ್ಯಾಪನ, ಸಂಶೋಧನೆಯ ಒಳಗೆ ಸುಲಭವಾಗಿ ಶುಷ್ಕವಾಗಿ ಬಿಡಬಹುದಾದ ಮನಸ್ಸನ್ನು ತೇವವಾಗಿಟ್ಟುಕೊಳ್ಳಲು ತಾರಿಣಿ ಆಸರೆ ಪಡೆದಿರುವುದು ಕಾವ್ಯದಲ್ಲಿ ಅಂತಲೂ ಅನ್ನಿಸುತ್ತದೆ. ಇಲ್ಲಿನ ಹಲವು ಕವಿತೆಗಳಲ್ಲಿ ಕಂಡು ಬರುವ ಮನುಷ್ಯ ಸ್ವಭಾವದ ಸತ್ಯಾನ್ವೇಷಣೆಯ ನೆಲೆಗಳು, ಸಂಬಂಧಗಳ ಸುಖ, ಅದು ಒಡ್ಡುವ ಸಂಘರ್ಷ, ಸವಾಲುಗಳು, ಇದನ್ನು ನಿಭಾಯಿಸಲು ಅಗತ್ಯವಿರುವ ಮನಸ್ಥಿತಿ, ಇವನ್ನೆಲ್ಲ ಅಭಿವ್ಯಕ್ತಿಗೊಳಿಸುವಾಗ ಮಾತು-ಅರ್ಥಗಳ ನಡುವಿನ ತಾಕಲಾಟದಲ್ಲಿ ಕೇಳುವ ಭಿನ್ನ ಕಾವ್ಯದನಿಯಿಂದ ಇದು ವಿದಿತ. ‘ಹೊಳೆಯಬಹುದು ಅರ್ಥ ಮಾತಿನ ಒಳಗು’ ಅನ್ನುವ ಈ ಕವಿಗೆ, ‘ಅಕ್ಷರಗಳಲ್ಲಿ ಸಕಲೆಂಟನ್ನೂ ಮೂಡಿಸುವೆನೆಂದಿಲ್ಲ’ ಎನ್ನುವ ಎಚ್ಚರವೂ ಇದೆ.
ಜ.ನಾ ತೇಜಶ್ರೀ, ಕವಿ, ಅನುವಾದಕಿ

*

AvithaKavithe Column by Kannada Poet Dr R Tarini Shubhadayini

ಇಂದು ಬಿಡುಗಡೆಯಾಗುತ್ತಿರುವ ‘ವಿವೇಕಿಯ ಸ್ವಗತ’

*

ಗೋಡೆ

ಗೋಡೆ ಕೆಲವರಿಗೆ
ಪ್ರಾರ್ಥನೆಯ ಜಾಗ
ಕೆಲವರಿಗೆ ತಲೆಯಾನಿಸಿ
ಭುಜವೆಂದು ಸಂತೈಕೆ
ಅರಸುವ ತಾಣ

ಕೆಲವರಿಗೆ ಒಂಟಿ ಕಾಲಲ್ಲಿ
ಒರಗಿ ಸಿಗರೇಟುಗಿಗರೇಟು
ಸೇದುತ್ತಲೊ ಫೋನಿನಲ್ಲಿ ಮಾತಾಡುತ್ತಲೊ
ಮೈಮರೆಯಲು ಇರುವ ಹಿತದ ತಾವು

ಹಳೇದುರ್ಗದ ಬೀದಿಗಳಲ್ಲಿ ಸೆಗಣಿ ತಟ್ಟಿರದ
ಗೋಡೆಗಳೇ ಕಾಣೆ
ಇಂತವರ ಮನೆ ಹೀಗೇ ಎನ್ನುವ ಗುರುತು
ಹಚ್ಚಿಕೊಡುವ ಬೊಟ್ಟುಗಳುಳ್ಳ ಮಣ್ಣಿನ ಕಲ್ಲಿನ
ಗೋಡೆ

ಪೋಸ್ಟರ್ ಹಚ್ಚುವ ಹುಡುಗರು
ನಡುರಾತ್ರಿಯಲಿ ಕನಸ ಒತ್ತಿ ಮೆತ್ತಿ
ನಾಳೆಗೆ ನೋಡಿಕೊಳ್ಳಿರೋ ಎಂದು
ಕೈಯೆತ್ತಿ ಸೈಕಲ್ ಹತ್ತಿ ಹೋಗೇ ಬಿಟ್ಟ
ವರಿಗೆ ತಡೆ ಎಲ್ಲಿ? ಗೋಡೆ ಮಾತ್ರ!

ವಾಟ್ಸಾಪ್ ಗೋಡೆಯಂತೂ ಬಿಡಿ
ನಮ್ಮನಮ್ಮದನ್ನ ಎತ್ತಿ
ಒತ್ತಿ ಒತ್ತಿ ಹೇಳಿಕೊಳ್ಳುವ
ತಾವಿದ್ದೇವೆಂಬುದನ್ನ ಸತ್ತ ಮೇಲೂ
ನೆನಪಿಸಬಹುದಾದ ತಾವು

ಎದ್ದವರಿಗೊಂದು ಬಿದ್ದವರಿಗೊಂದು
ಮರೆಗೊಂದು ಕೊರೆಗೊಂದು
ಇದ್ದಾಗ ಮನೆಮನೆ ಕತೆಗಳ ಹಂಚಿಕೆ
ವರ್ತಮಾನಕ್ಕೆ ತಕ್ಕಂತೆ ಗೋಡೆ ಗೀಚಿದರೆ
ಗಲಭೆ, ಕ್ಷೋಭೆ. ಬಿದ್ದರೆ ತಲೆದಂಡ
ಕೆಡವಿದರೆ ಅನಾಹುತ

ಗೋಡೆ ಅಂದರೆ ಇತಿಹಾಸ
ಗೋಡೆ ಅಂದರೆ ಜರ್ಮನಿ
ಗೋಡೆ ಅಂದರೆ ಜನ
ದಾಟಬಲ್ಲ ಅಡೆತಡೆ

*

ಪುಷ್ಪ ರಗಳೆ

ಹೂಬುಟ್ಟಿಗಳು ತೇಲಿ ತೇಲಿ
ಸ್ವಾಮಿಪಾದವ ಮುಟ್ಟುತಾವೆ
ಉಘೇ ಗೇ ಗೇ ಗೇ…

ಹಡಗಲಿಯ ಬಳಸಿ ಹರಿದು
ಕೆನ್ನೀರು ಮಣ್ಣಿನೋಕುಳಿ ನೀರು
ಉಘೇ ಗೇ ಗೇ ಗೇ…

ವಿರೂಪಾಕ್ಷನ ಪಾದಕ್ಕೆ ಸನ್ನು
ಅವನ ಪಾದವ ಕಂಡರ‍್ಯಾರು ಇಹದೊಳಗೆ
ಉಘೇ ಗೇ ಗೇ ಗೇ…

ತಲೆಮೇಲೆ ಸ್ವಾಮಿ ಚಂದ್ರನ ಮುರುಕು ತೊಟ್ಟ
ಗಂಟಲಲಿ ವಿಷದ ಗಂಟು ಒತ್ತರಿಸಿಟ್ಟ
ಉಘೇ ಗೇ ಗೇ ಗೇ…

ಹೂವೀಳ್ಯ ಒಪ್ಪಿಸಿಕೊ ನನ್ನಪ್ಪ ಹೂಮನದವನೆ
ಕರುಣಾಮಯನೆ ಭೋಲನೆ ಭಾಲನೇತ್ರನೆ
ಉಘೇ ಗೇ ಗೇ ಗೇ…

ಹೂಬಾಣ ಹೂಡಿದ ಮನ್ಮಥ ಸತ್ತ
ಮತ್ತೆ ಹೂವ್ಯಾಕೊ ಭವದ ಸಂತತಿ
ಉಘೇ ಗೇ ಗೇ ಗೇ…

ಒಕ್ಕಣ್ಣು ಮುಕ್ಕಣ್ಣು ದೃಷ್ಟಿ ಇಳಿಸಿ ಶಿವನಿಗೆ
ಕೊನ್ನಿ ಕೊನ್ನಿ ಕೆಂಧೂಳಿ ವಿರೂಪನ
ಉಘೇ ಗೇ ಗೇ ಗೇ…

ಸಂಜೆಗೆ ನೀಲಕಂಠದ ಗಗನ ಗುಡಿ ಮೇಲೆ
ಸ್ವಾಮಿ ಪಾದ ಬುವಿಯ ಕೆಂಪು ಮಣ್ಣೊಳಗೆ
ಉಘೇ ಗೇ ಗೇ ಗೇ…

ಕಲ್ಲಾಗಿ ನಿಂತ ಕಲ್ಲಪ್ಪ ನನ್ನಪ್ಪ ಹಣೆಗಣ್ಣ
ಭಕುತರ ಮೇಲೊಂದು ತಾಯಿದೃಷ್ಟಿಯಿಟ್ಟು
ಉಘೇ ಗೇ ಗೇ ಗೇ…

ಶರಣು ಶರಣು ಶರಣು ಹೂವಿಗೆ ಹೂಮಗನಿಗೆ
ಹೂವೆಲ್ಲವು ತಾನಾದ ಕೆಂಚಪ್ಪನಿಗೆ

*

TV9 Kannada


Leave a Reply

Your email address will not be published.