Politics: ಕಾಂಗ್ರೆಸ್​ನಿಂದ ಸಿಎಂ ಬದಲಾವಣೆ ಪ್ರಸ್ತಾಪ: ಇದು ಸಿದ್ದು VS ಡಿಕೆಶಿ ಜಗಳ ಮುಚ್ಚಿಹಾಕುವ ತಂತ್ರ ಎಂದ ಆಶೋಕ್ | Congress Talks About CM Change only to Brush Up Infighting of DK Shivakumar and Siddaramaiah says R Ashok


ಇವರ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಆಗಬೇಕೆಂದು ಪ್ರಧಾನಿ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾ ಎಂದು ಪ್ರಶ್ನಿಸಿದರು.

Politics: ಕಾಂಗ್ರೆಸ್​ನಿಂದ ಸಿಎಂ ಬದಲಾವಣೆ ಪ್ರಸ್ತಾಪ: ಇದು ಸಿದ್ದು VS ಡಿಕೆಶಿ ಜಗಳ ಮುಚ್ಚಿಹಾಕುವ ತಂತ್ರ ಎಂದ ಆಶೋಕ್

ಕಂದಾಯ ಸಚಿವ ಆರ್.ಅಶೋಕ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಾಯಕರ (Karnataka Congress) ಜಗಳ ಬೀದಿಗೆ ಬಂದಿದೆ. ಅದನ್ನು ಮುಚ್ಚಿ ಹಾಕಲೆಂದು ಕಾಂಗ್ರೆಸ್​ ನಾಯಕರು ಇದೀಗ ಬಿಜೆಪಿ ಸರ್ಕಾರದ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದರು. ಕರ್ನಾಟಕದಲ್ಲಿ ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿರುವ ಕುರಿತು ಅಸಮಾಧಾನ ಹೊರಹಾಕಿರುವ ಅವರು, ಕಾಂಗ್ರೆಸ್​​ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸಬೇಕೆಂದು ಕೆಲವರು ಹೇಳುತ್ತಿದ್ದಾರೆ. ಇವರ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಆಗಬೇಕೆಂದು ಪ್ರಧಾನಿ ಮೋದಿ (PM Narendra Modi) ಅಥವಾ ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) ಹೇಳಿದ್ದಾ ಎಂದು ಪ್ರಶ್ನಿಸಿದರು.

ನಿಮ್ಮ ಪಕ್ಷದಲ್ಲೇ ಎಷ್ಟೋ ವಿಷಯಗಳು ಕೊಳೆತು ನಾರುತ್ತಿದೆ. ಅದನ್ನು ಸರಿಪಡಿಸಿಕೊಳ್ಳಿ. ರಾಜ್ಯದಲ್ಲಿ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಕಾಂಗ್ರೆಸ್​ನವರು ಮಳೆಹಾನಿ ಬಗ್ಗೆ ಏನಾದ್ರೂ ಮಾತಾಡಿದ್ದಾರಾ? ಕಾಂಗ್ರೆಸ್​​ನವರದ್ದು ಏನಿದ್ದರೂ ನೆಗೆಟಿವ್​ ಆಲೋಚನೆಗಳೇ. ನಮ್ಮ ಪಕ್ಷದ ಆಂತರಿಕ ವಿಚಾರಕ್ಕೆ ತಲೆಹಾಕುವ ನೈತಿಕತೆ ಇಲ್ಲ. ನಿಮಗೆ ತಾಕತ್ತಿದ್ರೆ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿ ಎಂದು ಕಾಂಗ್ರೆಸ್​ ಪಕ್ಷದ ನಾಯಕರಿಗೆ ಸವಾಲೆಸೆದರು. ಮೊದಲು ನಿಮ್ಮ ನಾಯಕರ ಬಗ್ಗೆ ನಿರ್ಧಾರ ಮಾಡಿಕೊಳ್ಳಿ. ಆ ಮೇಲೆ ನಮ್ಮ ಪಕ್ಷದ ನಾಯಕತ್ವದ ಬಗ್ಗೆ ಮಾತನಾಡಿ ಎಂದು ಹೇಳಿದರು.

ಕಾಂಗ್ರೆಸ್​ನ ಉನ್ನತ ನಾಯಕತ್ವದ ವಿರುದ್ಧ 21 ನಾಯಕರು ತಿರುಗಿಬಿದ್ದಿದ್ದಾರೆ. ಪಕ್ಷದ ಅಧ್ಯಕ್ಷರನ್ನು ಆರಿಸಲು ಯೋಗ್ಯತೆ ಇಲ್ಲದವರು ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುವುದಾಗಿ ಅಮಿತ್ ಶಾ ಈಗಾಗಲೇ ಹೇಳಿದ್ದಾರೆ. ಯಡಿಯೂರಪ್ಪ 2 ವರ್ಷ ಮುಖ್ಯಮಂತ್ರಿ ಆಗಿದ್ದರು. ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷವಾಗಿದೆ ಅಷ್ಟೇ. ಬೊಮ್ಮಾಯಿ-ಕಟಿಲ್ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಎಂದು ಘೋಷಿಸಿದರು. ಕಾಂಗ್ರೆಸ್​ನವರು ಹೀಗೆ ಸ್ಪಷ್ಟವಾಗಿ ಮುಂದಿನ ನಡೆಯನ್ನು ತಿಳಿಸಿದರೆ ಪಕ್ಷ ಇಬ್ಭಾಗವಾಗುತ್ತದೆ ಎಂದು ವ್ಯಂಗ್ಯವಾಡಿದರು.

ಚಾಮರಾಜಪೇಟೆ ಮೈದಾನ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಚಾಮರಾಜಪೇಟೆ ಮೈದಾನವು ಇದೀಗ ಕಂದಾಯ ಇಲಾಖೆ ಸುಪರ್ದಿಗೆ ಬಂದಿದೆ. ನಾವು ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ಇದು ಬೇರೆ ಮೈದಾನದ ರೀತಿ ಅಲ್ಲ ಎಂದು ಹೇಳಿದರು. ರಾಷ್ಟ್ರಧ್ವಜ ಹಾರಿಸುವುದನ್ನು ಕಾಂಗ್ರೆಸ್​​ನಿಂದ ನಾವು ಕಲಿಯಬೇಕಿಲ್ಲ. ನಾಳೆ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮೈದಾನ ರಕ್ಷಣೆಗೆ ಅಗತ್ಯವಿರುವ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಈ ಮೈದಾನವು ಎಲ್ಲ ಕನ್ನಡಿಗರಿಗೆ ಸೇರಿರುವ ಸರ್ಕಾರಿ ಆಸ್ತಿ. ಇಲ್ಲಿ ಯಾರಿಗೂ ಜೈ ಅನ್ನುವುದಕ್ಕೆ ನಾವು ಬಿಡುವುದಿಲ್ಲ. ಈ ವಿಚಾರದಲ್ಲಿ ಬೇರೆಯವರಂತೆ ರಾಜಕೀಯ ಮಾಡಲ್ಲ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮೈದಾನದ ವಿಷಯದಲ್ಲಿ ಮನಸ್ಸಿಗೆ ಬಂದಂತೆ ವರ್ತಿಸಲು ಇದು ಮಾಡಲು ಯಾರಪ್ಪನ ಸ್ವತ್ತೂ ಅಲ್ಲ ಎಂದರು.

ದಾವಣಗೆರೆ ಸಮಾವೇಶದ ಬಳಿಕ ಸಿದ್ದು VS ಡಿಕೆಶಿ (ಮೂಲ‌ ಕಾಂಗ್ರೆಸ್) ಎಂಬ ಬಿರುಕು ಮೂಡಿದೆ. ಮೂಲ ಕಾಂಗ್ರೆಸ್ಸಿಗರು ಸಭೆ ಮಾಡಿ, ಸಿದ್ದರಾಮಯ್ಯ ಹುಟ್ಟುಹಬ್ಬ ಕಾರ್ಯಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಮತ್ತು ಪರಮೇಶ್ವರ್ ಅವರ ಜಗಳ ಇದೀಗ ಬೀದಿಗೆ ಬಂದಿದೆ. ಸಿದ್ದರಾಮೋತ್ಸವಕ್ಕೆ ಕೌಂಟರ್ ಎನ್ನುವಂತೆ ಡಿಕೆಶಿ ಸುವರ್ಣ ಸ್ವಾತಂತ್ರ್ಯ ನಡಿಗೆ ಹೆಸರಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

ಹಿಂದೆ ಇದ್ದ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಈಗಿನವರು ಗಾಂಧಿ ಹೆಸರು ಹೇಳಿಕೊಂಡು ಪಕ್ಷದಲ್ಲಿದ್ದಾರೆ. ಇದು ಒರಿಜಿನಲ್​ ಕಾಂಗ್ರೆಸ್ ಇಲ್ಲ, ಬೋಗಸ್ ಕಾಂಗ್ರೆಸ್​. ಒರಿಜಿನಲ್​ ಕಾಂಗ್ರೆಸ್​ನವರು ಇದ್ದರೆ ಸನ್ಮಾನ ಮಾಡುತ್ತೇವೆ. ಈಗಿನ ಕಾಂಗ್ರೆಸ್​ನವರು ಡೂಪ್ಲಿಕೇಟ್​​​ ನಾಯಕರು ಎಂದು ಸಚಿವ ಆರ್.ಅಶೋಕ್ ವಾಗ್ದಾಳಿ ಮಾಡಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *