Positive Story: ಈ ಇಂಗ್ಲಿಷ್ ಮಾಧ್ಯಮದ ಶಾಲೆಗೆ ವರ್ಷಕ್ಕೆ 400 ರೂಪಾಯಿಗಿಂತ ಕಡಿಮೆ ಫೀ; ಲಿಫ್ಟ್, ಸಿಸಿ ಟಿವಿ ಕ್ಯಾಮೆರಾ, ಮೈದಾನ ಏನಿಲ್ಲ ಹೇಳಿ! | Success Story Of Karnataka Public School Which Is Situated In Uttarahalli


Positive Story: ಈ ಇಂಗ್ಲಿಷ್ ಮಾಧ್ಯಮದ ಶಾಲೆಗೆ ವರ್ಷಕ್ಕೆ 400 ರೂಪಾಯಿಗಿಂತ ಕಡಿಮೆ ಫೀ; ಲಿಫ್ಟ್, ಸಿಸಿ ಟಿವಿ ಕ್ಯಾಮೆರಾ, ಮೈದಾನ ಏನಿಲ್ಲ ಹೇಳಿ!

ಕರ್ನಾಟಕ ಪಬ್ಲಿಕ್ ಶಾಲೆಯ ಹೊರ ಆವರಣ

ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಇರುವ ಕರ್ನಾಟಕ ಪಬ್ಲಿಕ್ ಶಾಲೆಯ ಯಶೋಗಾಥೆ ಇಲ್ಲಿದೆ. 400 ರೂಪಾಯಿಯೊಳಗೆ ಫೀ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ಇತ್ಯಾದಿ ವಿದ್ಯಾರ್ಥಿಗಳಿಗೆ ದೊರೆಯುತ್ತದೆ.

ಈ ಶಾಲೆ ಇರುವುದು ಉತ್ತರಹಳ್ಳಿಯ ಅತಿ ಮುಖ್ಯ ಜಾಗದಲ್ಲಿ. ದೊಡ್ಡ ಮೈದಾನ, ಸಿಸಿಟಿವಿ ಕ್ಯಾಮೆರಾ, ಲಿಫ್ಟ್, ಎಲ್​ಕೆಜಿಯಿಂದ ಹತ್ತನೇ ತರಗತಿ ತನಕ ವ್ಯಾಸಂಗಕ್ಕೆ ಅವಕಾಶ ಇರುವಂತಹ ಶಾಲೆ ಇದು. ಹೆಸರು ಕರ್ನಾಟಕ ಪಬ್ಲಿಕ್ ಸ್ಕೂಲ್ (Karnataka Public School) ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ (SSLC) ಶೇ 85ರಷ್ಟು ಫಲಿತಾಂಶ ಬಂದಿದೆ. ಶಾಲೆಗೆ ಅತಿ ಹೆಚ್ಚು ಅಂಕ ತಂದುಕೊಟ್ಟಿರುವುದು ಎಷ್ಟು ಅಂತ ನೋಡಿದರೆ ಶೇ 95ಕ್ಕೂ ಹೆಚ್ಚು ಅಂಕ ಬಂದಿದೆ. ಆಧುನಿಕ ದಿನಮಾನಕ್ಕೆ ಚಾಲ್ತಿಯಲ್ಲಿರುವ ರೀತಿಯಲ್ಲಿ ಕಲಿಕಾ ವಿಧಾನ, ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲೂ ಹೇಳಿಕೊಡುವ ವ್ಯವಸ್ಥೆ ಇದೆ. ಈ ಶಾಲೆಗೆ ಸ್ವಂತ ವೆಬ್​ಸೈಟ್​ ಇದೆ (ಕೆಲಸದ ಒತ್ತಡದ ಕಾರಣದಿಂದ ಇತ್ತೀಚೆಗೆ ಅಪ್​ಡೇಟ್ ಆಗಿಲ್ಲ ಎಂದು ಮೂಲಗಳು ಹೇಳುತ್ತವೆ). ಯೂಟ್ಯೂಬ್​ನಲ್ಲಿ ಶಾಲೆಯ ಬಗ್ಗೆ ಪರಿಚಯಾತ್ಮಕ ವಿಡಿಯೋ ಇದೆ. ಆದರೆ ಈ ಶಾಲೆಯ ಫೀ ಎಷ್ಟು ಗೊತ್ತಾ? ವರ್ಷಕ್ಕೆ 400 ರೂಪಾಯಿಯೊಳಗೆ ಆಗಬಹುದು. ಖಂಡಿತಾ ಅದಕ್ಕಿಂತ ಹೆಚ್ಚಿಗೆ ಇಲ್ಲ. ಇನ್ನು ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಊಟ ಮಕ್ಕಳಿಗೆ ಸಿಗುತ್ತದೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂಬುದು ಸರ್ಕಾರದ ಶಾಲೆ. ಆದರೆ ಇದು ಎಲ್ಲ ಕಡೆಗೂ ಇಲ್ಲ. ಶಾಲೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಈ ರೀತಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಕರೆಯಲಾಗುತ್ತದೆ. ಇಲ್ಲಿ ಭೋದನಾ ಮಾಧ್ಯಮ ಇಂಗ್ಲಿಷ್ ಹಾಗೂ ಕನ್ನಡ ಎರಡೂ ಇರುತ್ತದೆ. ಸಂಪನ್ಮೂಲ ವ್ಯಕ್ತಿಗಳು, ಸೂಕ್ತ ಶಿಕ್ಷಕರು, ಮೂಲಸೌಕರ್ಯ ಎಲ್ಲ ಇರುವಂಥ ಶಾಲೆಯಾಗಿದ್ದಲ್ಲಿ ಮಾತ್ರ ಹೀಗೊಂದು ಮಾನ್ಯತೆ. ಬೆಂಗಳೂರಿನಲ್ಲೇ ಅಲ್ಲೊಂದು ಇಲ್ಲೊಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಇದೆ. ಅದರಲ್ಲಿ ಉತ್ತರಹಳ್ಳಿಯಲ್ಲಿ ಇರುವುದು ಒಂದು. ಸರ್ಕಾರಿ ಶಾಲೆ ಅನ್ನೋ ಕಾರಣಕ್ಕೆ ಇಲ್ಲಿ ಬೆರಳು ತೋರುವಂಥ ಯಾವ ರಿಯಾಯಿತಿಯನ್ನೂ ತೆಗೆದುಕೊಂಡಿಲ್ಲ.

ವಿದ್ಯಾರ್ಥಿಗಳೊಂದಿಗೆ ಶಾಸಕರು, ಎಸ್​ಡಿಎಂಸಿ ಅಧ್ಯಕ್ಷ ವಿಜಯ್​ಕುಮಾರ್, ಶಾಸಕ ಎಂ. ಕೃಷ್ಣಪ್ಪ, ಶಿಕ್ಷಕಿಯರು (ಸಂಗ್ರಹ ಚಿತ್ರ)

ಆರಂಭದಲ್ಲೇ ಹೇಳಿದಂತೆ ಮಕ್ಕಳ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾ, ಲಿಫ್ಟ್​ ವ್ಯವಸ್ಥೆ, ಆಧುನಿಕ ಕಲಿಕಾ ಪದ್ಧತಿ ಎಲ್ಲವೂ ಇದೆ. ಈ ಶಾಲೆಯಲ್ಲಿ ಇರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 1800ಕ್ಕೂ ಹೆಚ್ಚು. ಈ ಶಾಲೆಯಲ್ಲಿ ಎಂಜಿನಿಯರ್​ಗಳ ಮಕ್ಕಳಿಂದ ಆಯಾ ದಿನದ ದುಡಿಮೆ ನಂಬಿ ಬದುಕುವವರ ತನಕ ನಾನಾ ವರ್ಗದವರ ಮಕ್ಕಳು ವ್ಯಾಸಂಗ ಮಾಡುತ್ತಾರೆ ಎಂದು ಎಸ್​ಡಿಎಂಸಿ ಅಧ್ಯಕ್ಷರಾದ ವಿಜಯ್​ಕುಮಾರ್ ಅವರು ಟಿವಿ9 ಕನ್ನಡ ಡಿಜಿಟಲ್​ಗೆ ತಿಳಿಸಿದರು. ಇಲ್ಲಿ ಓದಿದ ವಿದ್ಯಾರ್ಥಿಗಳು ಈಗಾಗಲೇ ಒಳ್ಳೊಳ್ಳೆ ಕೋರ್ಸ್​ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇನ್ನು ಶಾಸಕ ಎಂ. ಕೃಷ್ಣಪ್ಪ ಅವರು ಮಾತನಾಡಿ, ಪ್ರತಿ ಸಲ ನಾನು ಕನಕಪುರದ ಕಡೆಯಿಂದ ಬರುವಾಗ ಕರಿಯಪ್ಪ ಗೌಡರ ಶಾಲೆಯನ್ನು ನೋಡುತ್ತಿದ್ದೆ. ಆ ರೀತಿಯಾದ ಶಾಲೆ ನನ್ನ ಕ್ಷೇತ್ರದಲ್ಲಿ ಮಾಡಬೇಕು. ಖಾಸಗಿ ಶಾಲೆಗಳಿಗೆ ದುಂಬಾಲು ಬೀಳುವ ರೀತಿಯಲ್ಲಿ ಸರ್ಕಾರಿ ಶಾಲೆಗೆ ಜನ ಬರಬೇಕು ಅನ್ನೋದು ನನ್ನ ಆಸೆ ಆಗಿತ್ತು. ಆದ್ದರಿಂದಲೇ ಈ ಶಾಲೆಗೆ ನನ್ನಿಂದ ಏನು ಮಾಡುವುದಕ್ಕೆ ಸಾಧ್ಯವೋ ಎಲ್ಲ ಮಾಡುತ್ತಿದ್ದೇನೆ. ಇನ್ನೇನು ಕಾಲೇಜು ಕಟ್ಟಡ ಸಿದ್ಧವಾಗುತ್ತಿದೆ. ಸೀಟ್ ಕೊಡುವಂತೆ ಬೇರೆ ಕ್ಷೇತ್ರದ ಶಾಸಕರು ಶಿಫಾರಸು ಮಾಡುವಂಥ ಪರಿಸ್ಥಿತಿ ಇದೆ. ಈ ಬಾರಿ ಆ ರೀತಿಯ ಶಿಫಾರಸು ಬಂದಿದ್ದರಿಂದಲೇ ಮತ್ತೂ ಹೆಚ್ಚಿನ ಕೊಠಡಿಗಳನ್ನು ವ್ಯವಸ್ಥೆ ಮಾಡಿದ್ದೇನೆ. ಇನ್ನೂ ಮುಂದುವರಿದು, ಮಕ್ಕಳಿಗೆ ಕರೆತರಲು ಮತ್ತು ಮನೆಗೆ ಬಿಡಲು ಬಿಎಂಟಿಸಿಯಿಂದ ಹರಾಜು ಹಾಕಿದಾಗ ಬಸ್​ ಖರೀದಿಸಿ, ಸಾರಿಗೆ ವ್ಯವಸ್ಥೆಯನ್ನೂ ಮಾಡಿ, ಮಕ್ಕಳ ಪೋಷಕರಿಗೆ ಅನುಕೂಲ ಮಾಡಿಕೊಡಬೇಕು ಅನ್ನೋದು ನನ್ನ ಆಸೆ. ಅದಕ್ಕಾಗಿ ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

School

ಶಾಲಾ ಕಟ್ಟಡ

ಈ ಶಾಲೆಯ ವೆಬ್​ಸೈಟ್​, ಯೂಟ್ಯೂಬ್​ ವಿಡಿಯೋ ಇದರ ಹಿಂದೆಲ್ಲ ಒಂದು ದೊಡ್ಡ ತಂಡದ ಶ್ರಮ ಇದೆ. ಹನುಮಂತು, ರಮೇಶ್ ರಾಜು, ವಿಜಯ್​ ಕುಮಾರ್​ ಸೇರಿದಂತೆ ಒಟ್ಟು 12 ಮಂದಿ ಪ್ರಮುಖರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶಾಲೆ, ಕಾಲೇಜು, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆರೆ, ಪಾದಚಾರಿ ರಸ್ತೆ, ದೇವಸ್ಥಾನ ಹೀಗೆ ಎಲ್ಲ ಜವಾಬ್ದಾರಿಗಳನ್ನು ಹಂಚಿದ್ದೇನೆ. ಆದ್ದರಿಂದ ಪರಿಣಾಮಕಾರಿಯಾಗಿ ಕೆಲಸ ಆಗುತ್ತಿದೆ ಎಂದು ಹೇಳಿದರು. ಜೂನ್ 1ನೇ ತಾರೀಕಿನಂದು ನಮ್ಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ, ಕಡ್ಡಾಯವಾಗಿ ಬರಬೇಕು ಎಂದು ಹೇಳುವುದನ್ನು ಎಂ. ಕೃಷ್ಣಪ್ಪ ಅವರು ಮರೆಯಲಿಲ್ಲ.

Students

ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು

ಅಂದಹಾಗೆ, ಕರ್ನಾಟಕ ಪಬ್ಲಿಕ್ ಶಾಲೆ ಎಂಬುದು ಸರ್ಕಾರದ ಶಾಲೆ. 2007ನೇ ಇಸವಿಯಿಂದಲೂ ಇದೆ. ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ, ಹೀಗೆ ಮಾನ್ಯತೆ ನೀಡಲಾಗುತ್ತದೆ. ಕೆಲವು ಕಡೆಯಲ್ಲಿ ಎಲ್​ಕೆಜಿಯಿಂದ ಪಿಯುಸಿ ತನಕ ವ್ಯಾಸಂಗಕ್ಕೆ ಅವಕಾಶ ಇದೆ. ವರ್ಷಕ್ಕೆ 300ರಿಂದ 400 ರೂಪಾಯಿ ಫೀ, ಕೆಲವು ವರ್ಗಕ್ಕೆ ಆ ಫೀ ಕೂಡ ಕಟ್ಟುವ ಅಗತ್ಯ ಇಲ್ಲ. ಇಂಗ್ಲಿಷ್ ಮಾಧ್ಯಮ ಕಲಿಕೆ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಒಟ್ಟಿನಲ್ಲಿ ಹೇಗೆ ತೂಗಿ ನೋಡಿದರೂ ಯಾವ ಖಾಸಗಿ ಶಾಲೆಗೂ ಒಂದು ಗುಲಗಂಜಿಯಷ್ಟು ಕಡಿಮೆಯಾಗದಂಥ ವ್ಯವಸ್ಥೆ ಇರುವ ಈ ಶಾಲೆಗಳಿಗೆ ಸಮಾಜದ- ಜನರ ಗುರುತಿಸುವಿಕೆ ಮತ್ತು ಮನ್ನಣೆ ಬೇಕಿದೆ. ಇನ್ನು ಉತ್ತರಹಳ್ಳಿ, ಬಸವನಗುಡಿಯಂಥ ಕಡೆ ಇರುವ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಭೇಟಿ ನೀಡಿ, ನೀವೇ ಒಮ್ಮೆ ಪರಿಶೀಲಿಸಿ ನೋಡಿ, ಎಂಥ ಸುಸಜ್ಜಿತ ವ್ಯವಸ್ಥೆ ಇದೆ ಎಂಬುದು ಅರಿವಾಗುತ್ತದೆ. ಒಂದು ವೇಳೆ ಮಕ್ಕಳನ್ನು ಇಂಥ ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿಸಬೇಕಿದ್ದಲ್ಲಿ ಜೂನ್ ಅಂತ್ಯದ ತನಕ ಅವಕಾಶ ಇದೆಯಂತೆ, ಒಮ್ಮೆ ವಿಚಾರಿಸಿಕೊಳ್ಳಿ. ಇಂಥ ಶಾಲೆಗಳು ಸಾವಿರವಾಗಲಿ ಅನ್ನೋದು ಕಾಳಜಿ.

ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *