Prabhas: ಅನೌನ್ಸ್ ಆಯ್ತು ಪ್ರಭಾಸ್ 25ನೇ ಚಿತ್ರ; ಒಂದೇ ಪೋಸ್ಟರ್​ನಲ್ಲಿ ಹಲವು ಸರ್ಪ್ರೈಸ್ ನೀಡಿದ ಚಿತ್ರತಂಡ | Prabhas and Sandeep Reddy Vanga will collaborate for Prabhas 25th titled as Spirit here is full details

Prabhas: ಅನೌನ್ಸ್ ಆಯ್ತು ಪ್ರಭಾಸ್ 25ನೇ ಚಿತ್ರ; ಒಂದೇ ಪೋಸ್ಟರ್​ನಲ್ಲಿ ಹಲವು ಸರ್ಪ್ರೈಸ್ ನೀಡಿದ ಚಿತ್ರತಂಡ

ಪ್ರಭಾಸ್ (ಎಡ), ‘ಸ್ಪಿರಿಟ್’ ಚಿತ್ರದ ಮೊದಲ ಪೋಸ್ಟರ್

ಟಾಲಿವುಡ್​ನ ಖ್ಯಾತ ನಟ ಪ್ರಭಾಸ್ ಈಗಾಗಲೇ ತಮ್ಮ ಚಿತ್ರಗಳಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ಅಭಿಮಾನಿಗಳಿಗೆ ಪ್ರಭಾಸ್ 25ನೇ ಚಿತ್ರದ ಕುರಿತು ಬಹುದೊಡ್ಡ ಕುತೂಹಲವಿತ್ತು. ಬಹಳ ಕಾಲದಿಂದ ಅವರ 25ನೇ ಚಿತ್ರ ವಿಶೇಷವಾಗಿರಲಿದೆ ಎಂಬ ಸುದ್ದಿ ಹರಿದಾಡಿತ್ತಾದರೂ, ಅದರ ಕುರಿತು ಯಾವುದೇ ಮಾಹಿತಿ ಲಭ್ಯವಾಗದೇ ಅಭಿಮಾನಿಗಳು ನಿರಾಶೆಗೊಂಡಿದ್ದರು. ಇದೀಗ ಆ ಎಲ್ಲಾ ಪ್ರಶ್ನೆಗಳಿಗೆ, ಕಾಯುವಿಕೆಗೆ ಉತ್ತರ ಸಿಕ್ಕಿದೆ. ಪ್ರಭಾಸ್ ಅಭಿನಯದ 25 ನೇ ಚಿತ್ರದ ಘೋಷಣೆಯಾಗಿದ್ದು, ತೆಲುಗಿನ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ತಮ್ಮ ಮೊದಲ ಎರಡು ಚಿತ್ರಗಳಲ್ಲೇ ಸೂಪರ್ ಹಿಟ್ ಚಿತ್ರ ನೀಡಿದ ನಿರ್ದೇಶಕ ಪ್ರಭಾಸ್ 25ನೇ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಅಭಿಮಾನಿಗಳಿಗೆ ಸಂತಸ ಉಂಟುಮಾಡಿದೆ. ಈ ಚಿತ್ರಕ್ಕೆ ‘ಸ್ಪಿರಿಟ್’ ಎಂದು ಹೆಸರಿಡಲಾಗಿದೆ.

‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಬಹುದೊಡ್ಡ ಯಶಸ್ಸನ್ನು ಗಳಿಸಿದ್ದ ಸಂದೀಪ್ ರೆಡ್ಡಿ ವಂಗ, ಅದರ ಹಿಂದಿ ರಿಮೇಕ್ ‘ಕಬೀರ್ ಸಿಂಗ್’ಅನ್ನೂ ನಿರ್ದೇಶಿಸಿದ್ದರು. ಈ ಎರಡೂ ಚಿತ್ರಗಳು ಬಾಕ್ಸಾಫೀಸ್​ನಲ್ಲಿ ಗೆದ್ದಿದ್ದವು. ಕೆಲ ಸಮಯದ ಹಿಂದೆ ರಣಬೀರ್ ಕಪೂರ್ ಹಾಗೂ ಸಂದೀಪ್ ಕಾಂಬಿನೇಷನ್​ನಲ್ಲಿ ‘ಅನಿಮಲ್’ ಚಿತ್ರ ಘೋಷಣೆಯಾಗಿತ್ತು. ಕ್ರೈಂ ಡ್ರಾಮಾ ಮಾದರಿಯ ಆ ಚಿತ್ರವನ್ನು ಟಿ-ಸೀರೀಸ್, ಭದ್ರಕಾಳಿ ಪಿಕ್ಚರ್ಸ್ ಹಾಗೂ ಸಿನಿ1 ಸ್ಟುಡಿಯೋಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುವುದಾಗಿ ತಿಳಿಸಲಾಗಿತ್ತು. ಇದೀಗ ಬಹುತೇಕ ಇದೇ ಕಾಂಬಿನೇಷನ್​ನಲ್ಲಿ ಪ್ರಭಾಸ್ ನಟನೆಯ ಚಿತ್ರವೂ ಸೆಟ್ಟೇರಲಿದೆ.

ಟಿ- ಸೀರೀಸ್​ನ ಭೂಷಣ್ ಕುಮಾರ್ ‘ಸ್ಪಿರಿಟ್’ ಚಿತ್ರವನ್ನು ನಿರ್ಮಾಣ ಮಾಡಲಿದ್ದು, ಅವರೊಂದಿಗೆ ಯುವಿ ಕ್ರಿಯೇಷನ್ಸ್ ಹಾಗೂ ಭದ್ರಕಾಳಿ ಪಿಕ್ಚರ್ಸ್ ಕೈ ಜೋಡಿಸಲಿವೆ. ಪಕ್ಕಾ ಆಕ್ಷನ್ ಮಾದರಿಯ ಈ ಚಿತ್ರ ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ. ಇದರೊಂದಿಗೆ ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಚೈನೀಸ್, ಜಪಾನೀಸ್ ಹಾಗೂ ಕೊರಿಯನ್ ಭಾಷೆಗಳಲ್ಲೂ ಚಿತ್ರ ಬಿಡುಗಡೆ ಮಾಡಲಾಗುವುದು ಎಂಬ ಸೂಚನೆಯನ್ನು ಚಿತ್ರತಂಡ ಪೋಸ್ಟರ್​​ನಲ್ಲಿ ನೀಡಿದೆ. ಈ ಮೂಲಕ ಚಿತ್ರದ ಕ್ಯಾನ್ವಾಸ್ ಪ್ಯಾನ್ ಇಂಡಿಯಾವನ್ನೂ ಮೀರಿದೆ ಎಂಬ ಸುಳಿವನ್ನೂ ಚಿತ್ರತಂಡ ತಿಳಿಸಿದೆ. ಈ ಎಲ್ಲವುಗಳೂ ಅಭಿಮಾನಿಗಳಿಗೆ ಅಚ್ಚರಿಯ ಜೊತೆಗೆ ಸಂತಸವನ್ನು ನೀಡಿದ್ದು, ಚಿತ್ರದ ಕುರಿತ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಕುರಿತು ಹಂಚಿಕೊಳ್ಳಲಾಗಿರುವ ಪೋಸ್ಟ್:

ಪ್ರಭಾಸ್ ಕೂಡ ಈ ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ ಪ್ರಭಾಸ್ ಈಗ ನಟಿಸುತ್ತಿರುವ ತಮ್ಮ ಚಿತ್ರಗಳ ಕೆಲಸಗಳು ಪೂರ್ಣಗೊಂಡ ತಕ್ಷಣ ಹೊಸ ಚಿತ್ರದ ಕೆಲಸಗಳು ಪ್ರಾರಂಭವಾಗಲಿವೆ. ಚಿತ್ರ ತಂಡದ ಕುರಿತಂತೆ ಸಂಪೂರ್ಣ ಮಾಹಿತಿ ನಂತರದಲ್ಲಿ ತಿಳಿಸುವುದಾಗಿ ಚಿತ್ರತಂಡ ತಿಳಿಸಿದೆ.

ಪ್ರಭಾಸ್ ಹಂಚಿಕೊಂಡ ಪೋಸ್ಟ್:

ಪ್ರಭಾಸ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಹಾಗೂ ಓಂ ರಾವುತ್ ನಿರ್ದೇಶನದ ‘ಆದಿ ಪುರುಷ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಬಹುನಿರಿಕ್ಷೆಯ ಮತ್ತೊಂದು ಚಿತ್ರ ‘ರಾಧೆ ಶ್ಯಾಮ್’ ಜನವರಿ 14ರಂದು ಬಿಡುಗಡೆಯಾಗಲಿದೆ ಎಂದು ಇತ್ತೀಚೆಗಷ್ಟೇ ಘೋಷಿಸಲಾಗಿತ್ತು. ಇದರೊಂದಿಗೆ ಪ್ರಭಾಸ್ ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದು, ‘ಮಹಾನಟಿ’ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮೊದಲಾದ ಖ್ಯಾತ ತಾರೆಯರು ಬಣ್ಣ ಹಚ್ಚುತ್ತಿದ್ದು, ಚಿತ್ರ ಇನ್ನಷ್ಟೇ ಸೆಟ್ಟೇರಬೇಕಿದೆ.

ಇದನ್ನೂ ಓದಿ:

‘ಆ​​ ದೃಶ್ಯಕ್ಕಾಗಿ ನಾನು ತುಂಬಾ ಟೇಕ್​ ತೆಗೆದುಕೊಂಡಿದ್ದೆ’; ಧನ್ಯಾ ರಾಮ್​ಕುಮಾರ್​

‘ಮಾಫಿಯಾ ಪಪ್ಪುಗಳು ಆರ್ಯನ್​ ಖಾನ್​ ರಕ್ಷಣೆಗೆ ಬಂದರು’; ಹೃತಿಕ್​ಗೆ ತಿರುಗೇಟು ನೀಡಿದ ಕಂಗನಾ  

ಶಾರುಖ್​ ಮಗನ ಮೇಲೆ ನಡೆದ ದಾಳಿ ಒಂದು ಷಡ್ಯಂತ್ರವೇ? ಎನ್​ಸಿಬಿ ಅಧಿಕಾರಿಗಳ ಮೇಲೆ ಮೂಡಿತು ಶಂಕೆ

TV9 Kannada

Leave a comment

Your email address will not be published. Required fields are marked *