Prabhas: ಪ್ರಭಾಸ್ ಫ್ಯಾನ್ಸ್​​ಗೆ ಸಖತ್ ಸುದ್ದಿ; ಇಲ್ಲಿದೆ ‘ಪ್ರಾಜೆಕ್ಟ್ ಕೆ’ ಕುರಿತ ಹೊಸ ಅಪ್ಡೇಟ್ | Here is Prabhas starring Project K release date according to reports


Prabhas: ಪ್ರಭಾಸ್ ಫ್ಯಾನ್ಸ್​​ಗೆ ಸಖತ್ ಸುದ್ದಿ; ಇಲ್ಲಿದೆ ‘ಪ್ರಾಜೆಕ್ಟ್ ಕೆ’ ಕುರಿತ ಹೊಸ ಅಪ್ಡೇಟ್

ಪ್ರಭಾಸ್

ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಇದೀಗ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಬಾಹುಬಲಿ’ ಚಿತ್ರದ ನಂತರ ಅವರಿಗೆ ಅಭಿಮಾನಿ ಬಳಗ ಹಿರಿದಾಗಿದೆ. ಇದರಿಂದಲೇ ಅವರ ಚಿತ್ರಗಳೆಲ್ಲವೂ ಪ್ಯಾನ್ ಇಂಡಿಯಾ ಮಾದರಿಯಲ್ಲಿ ತಯಾರಾಗುತ್ತಿವೆ. ಅಲ್ಲದೇ ಅಭಿಮಾನಿಗಳು ನೆಚ್ಚಿನ ನಟನ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ ಇಷ್ಟರಲ್ಲಾಗಲೇ ‘ರಾಧೆ ಶ್ಯಾಮ್’ ತೆರೆಕಾಣಬೇಕಿತ್ತು. ಜನವರಿ 14ರಂದು ಚಿತ್ರದ ಬಿಡುಗಡೆ ಘೋಷಿಸಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರದ ರಿಲೀಸ್ ಮುಂದೂಡಲ್ಪಟ್ಟಿದೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಬೇಸರದ ಸಂಗತಿಯಾದರೂ, ಚಿತ್ರತಂಡದ ಹಿತದೃಷ್ಟಿಯಿಂದ ಅನಿವಾರ್ಯವಾಗಿತ್ತು. ಸದ್ಯ ಪ್ರಭಾಸ್ ‘ಆದಿಪುರುಷ್’, ‘ಸಲಾರ್’ ಹಾಗೂ ‘ಪ್ರಾಜೆಕ್ಟ್ ಕೆ’ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ‘ಪ್ರಾಜೆಕ್ಟ್ ಕೆ’ ಚಿತ್ರದ ಕುರಿತು ಹೊಸ ಅಪ್ಡೇಟ್ ಒಂದು ಸಖತ್ ಸುದ್ದಿಯಾಗುತ್ತಿದೆ.

ನಿರ್ದೇಶಕ ನಾಗ್ ಅಶ್ವಿನ್ ಹಾಗೂ ಪ್ರಭಾಸ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಪ್ರಾಜೆಕ್ಟ್ ಕೆ’ ಕುರಿತು ಅಪಾರ ನಿರೀಕ್ಷೆಗಳಿವೆ. ವರದಿಗಳ ಪ್ರಕಾರ ಈ ಚಿತ್ರ ಸೈನ್ಸ್- ಫಿಕ್ಷನ್ ಹಾಘೂ ಫ್ಯಾಂಟಸಿ ಥ್ರಿಲ್ಲರ್ ಮಾದರಿಯಲ್ಲಿ ಇರಲಿದೆಯಂತೆ. ಚಿತ್ರತಂಡ ಈಗಾಗಲೇ ಎರಡು ಶೆಡ್ಯೂಲ್ ಚಿತ್ರೀಕರಣ ಮುಗಿಸಿದೆ. ಇದೀಗ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಚಿತ್ರತಂಡ ಮುಂದಿನ ಶೆಡ್ಯೂಲ್​ನಲ್ಲಿ ಕೆಲವು ಬದಲಾವಣೆ ಮಾಡಲಿದೆ ಎಂದು ವರದಿಗಳು ಹೇಳಿವೆ.

ಇತ್ತೀಚೆಗೆ ‘ಪ್ರಾಜೆಕ್ಟ್ ಕೆ’ ಕುರಿತು ಹೊಸ ಸುದ್ದಿಯೊಂದು ಓಡಾಡುತ್ತಿದೆ. ಚಿತ್ರತಂಡ ಆದಷ್ಟು ಬೇಗ ಚಿತ್ರೀಕರಣ ಮುಗಿಸಲು ಪ್ಲಾನ್ ಹಾಕಿಕೊಂಡಿದೆ. ಕಾರಣ, 2023ರ ಬೇಸಿಗೆಯಲ್ಲಿ ಚಿತ್ರವನ್ನು ತೆರೆಕಾಣಿಸುವ ಯೋಚನೆ ಚಿತ್ರತಂಡಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2023ರ ಏಪ್ರಿಲ್ ಅಥವಾ ಮೇಯಲ್ಲಿ ‘ಪ್ರಾಜೆಕ್ಟ್ ಕೆ’ ತೆರೆಕಾಣಲಿದೆ ಎಂದು ವರದಿಯಾಗಿದೆ. ಈ ಸುದ್ದಿ ಕೇಳಿದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

‘ಪ್ರಾಜೆಕ್ಟ್ ಕೆ’ಯಲ್ಲಿ ದೊಡ್ಡ ತಾರಾಗಣವೇ ಇದೆ. ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮೊದಲಾದ ಖ್ಯಾತ ತಾರೆಯರೊಂದಿಗೆ ಪ್ರಭಾಸ್ ತೆರೆಹಂಚಿಕೊಳ್ಳಲಿದ್ದಾರೆ. ಭಾರತದಲ್ಲಿ ತಯಾರಾದ ದೊಡ್ಡ ಬಿಗ್ ಬಜೆಟ್ ಚಿತ್ರಗಳಲ್ಲಿ ಇದೂ ಒಂದಾಗಿರಲಿದೆ ಎಂಬ ಸುದ್ದಿಯೂ ಇದೆ. ಅಚ್ಚರಿಯ ವಿಚಾರವೆಂದರೆ ಚಿತ್ರದ ಶೂಟಿಂಗ್ ಬಹುತೇಕ ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ. ಇದಕ್ಕಾಗಿ ಬಹಳಷ್ಟು ವೆಚ್ಚ ಮಾಡಿ ವಿವಿಧ ಸೆಟ್​ಗಳನ್ನೂ ಹಾಕಲಾಗಿದೆ.

ಪ್ರಭಾಸ್ ಈ ಚಿತ್ರವಲ್ಲದೇ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್​’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಆದಿಪುರುಷ್’ ಚಿತ್ರದ ಕೆಲಸಗಳೂ ನಡೆಯುತ್ತಿವೆ.

TV9 Kannada


Leave a Reply

Your email address will not be published. Required fields are marked *