’ಬೊಮ್ಮಾಯಿ, ಸಿಟಿ ರವಿ, ಸುನಿಲ್, ನಳೀನ್ ದಾರಿ ತಪ್ಪಿದ್ದಾರೆ. ಇವರನ್ನು ಸರಿಮಾಡಿಕೊಳ್ಳಬೇಕು. ಸಿದ್ಧಾಂತ ಉಳಿಸಿಕೊಳ್ಳಬೇಕು’ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (ಸಂಗ್ರಹ ಚಿತ್ರ)
ಬೆಂಗಳೂರು: ‘ನಾನು 2ನೇ ಯೋಗಿ ಆದಿತ್ಯನಾಥ್ ಇದ್ದಂತೆ, ಅಧಿಕಾರ ಸಿಕ್ರೆ ಗೂಂಡಾಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕ್ತೀನಿ. ಆದರೆ ಬಿಜೆಪಿ ಹೋಗುವುದಿಲ್ಲ’ ಎಂದು ಇತ್ತೀಚೆಗಷ್ಟೇ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ನೀಡಿದ್ದ ಹೇಳಿಕೆ ಭಾರಿ ಸದ್ದು ಮಾಡಿತ್ತು. ಇತ್ತೀಚೆಗೆ ಕೊಲೆಯಾಗಿದ್ದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಾಂತ್ವನ ಹೇಳಲೆಂದು ಸುಳ್ಯ ತಾಲ್ಲೂಕು ಬೆಳ್ಳಾರೆಗೆ ಭೇಟಿ ನೀಡಲು ಪ್ರಮೋದ್ ಮುತಾಲಿಕ್ ಉದ್ದೇಶಿಸಿದ್ದರು. ಆದರೆ ಮಾರ್ಗಮಧ್ಯೆಯೇ ಅವರನ್ನು ತಡೆದಿದ್ದ ದಕ್ಷಿಣ ಕನ್ನಡ ಜಿಲ್ಲಾಡಳಿತ ವಾಪಸ್ ಕಳಿಸಿತ್ತು. ಆ ಸಂದರ್ಭದಲ್ಲಿಯೂ ಅವರು, ‘ಹಿಂದುತ್ವಕ್ಕಾಗಿ ಶ್ರಮಿಸುತ್ತಿರುವ ಕಾರ್ಯಕರ್ತರ ಜೀವ ಉಳಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಚುನಾವಣೆ ಹೊತ್ತಿಗೆ ಹೊಸ ಹಿಂದೂ ರಾಜಕೀಯ ಪಕ್ಷದ ಉದಯವಾಗಲಿದೆ’ ಎಂದು ಎಚ್ಚರಿಸಿದ್ದರು.
ಹುಬ್ಬಳ್ಳಿ ಮತ್ತು ಉಡುಪಿಯಲ್ಲಿ ಪ್ರಮೋದ್ ಮುತಾಲಿಕ್ ನೀಡಿದ್ದ ಹೇಳಿಕೆಗಳನ್ನು ವಿಶ್ಲೇಷಿಸಿದ್ದ ಹಲವರು ‘ಹೊಸ ರಾಜಕೀಯ ಪಕ್ಷ ಕಟ್ಟುವ ಪ್ರಯತ್ನ ಈಗಾಗಲೇ ಆರಂಭವಾಗಿದೆ. ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮತ್ತೊಂದು ರಾಜಕೀಯ ಪಕ್ಷ ಹುಟ್ಟಲಿದೆ’ ಎಂದೇ ವಿಶ್ಲೇಷಿಸಿದ್ದರು. ಹೇಳಿಕೆಗಳಿಗೆ ಸಿಕ್ಕ ಪ್ರಚಾರ ಮತ್ತು ಅದು ಕಾರ್ಯಕರ್ತರಲ್ಲಿ ಹುಟ್ಟುಹಾಕಿದ ಪ್ರಶ್ನೆಗಳನ್ನು ಗಮನಿಸಿದ ಮುತಾಲಿಕ್ ಇದೀಗ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಗೆ ಪರ್ಯಾಯವಾಗಿ ಹೊಸ ಪಕ್ಷ ಹುಟ್ಟುಹಾಕುವುದಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿ, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಪ್ರವೀಣ್ ಹತ್ಯೆಯ ನಂತರ ಮಾತನಾಡಿದ್ದ ಹಲವು ಕಾರ್ಯಕರ್ತರು, ‘ಹಿಂದುತ್ವಪರ ಹೋರಾಟಗಾರರ ಕೊಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಹೊಸ ‘ಹಿಂದೂ ಪಕ್ಷ’ದ ಉದಯವಾಗಬೇಕಿದೆ. ಅಂಥದ್ದೊಂದು ಪಕ್ಷ ಕಟ್ಟಲು ಸಿದ್ಧ ಎಂದು ಶ್ರೀರಾಮಸೇನೆ ಮುಂದಾಗಬೇಕು. ಈ ಕುರಿತು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನಿರ್ಧಾರ ಮಾಡಬೇಕು’ ಎಂದು ಆಗ್ರಹಿಸಿದ್ದರು. ಈ ಒತ್ತಾಯಗಳಿಗೆ ಪ್ರತಿಕ್ರಿಯಿಸಿದ್ದ ಮುತಾಲಿಕ್, ‘ಬಿಜೆಪಿ ಕಾರ್ಯಕರ್ತರು ಹೀಗೆ ಮಾತನಾಡುವ ಮೂಲಕ ತಮ್ಮ ವೇದನೆಯನ್ನು ಹೊರಹಾಕುತ್ತಿದ್ದಾರೆ. ಪಕ್ಷದ ಉನ್ನತ ನಾಯಕರು ಇದನ್ನು ಗ್ರಹಿಸಿ, ಹಾದಿ ತಪ್ಪಿರುವ ನಾಯಕರನ್ನು ಸರಿದಾರಿಗೆ ತರಬೇಕು’ ಎಂದು ಹೇಳಿದ್ದರು.
‘ಈಗ ನಾವು ಹೊಸ ರಾಜಕೀಯ ಪಕ್ಷವನ್ನು ಕಟ್ಟಿದರೂ ಬಿಜೆಪಿಯಷ್ಟು ಪ್ರಬಲವಾಗಿ ಬೆಳೆದು ಅಧಿಕಾರಕ್ಕೆ ಬರಲು ಸಾಧ್ಯವೇ ಎನ್ನುವುದನ್ನು ಯೋಚಿಸಬೇಕು. ಹೊಸ ರಾಜಕೀಯ ಪಕ್ಷವು ಬಿಜೆಪಿ ಸೋಲಿಗೆ ಕಾರಣವಾಗಬಹುದು. ಹಾಗಾದರೆ 50 ವರ್ಷದ ದುರಾಡಳಿತದ ಕಾಂಗ್ರೆಸ್, ಜಾತಿಯನ್ನೇ ಮುಂದಿಟ್ಟು ರಾಜಕಾರಣ ಮಾಡುವ ಜೆಡಿಎಸ್, ನಾಸ್ತಿಕವಾದಿಗಳಾದ ಕಮ್ಯುನಿಸ್ಟರು ಅಧಿಕಾರಕ್ಕೆ ಬರುತ್ತಾರೆ’ ಎಂದು ಮುತಾಲಿಕ್ ಎಚ್ಚರಿಸಿದ್ದರು.
‘ಕರ್ನಾಟಕವಷ್ಟೇ ಅಲ್ಲ, ದೇಶದಲ್ಲಿ ಎಲ್ಲಿಯೂ ಈಗ ಬಿಜೆಪಿ ಎನ್ನುವುದು ಅದರ ಮೂಲ ಸ್ವರೂಪದಲ್ಲಿ ಉಳಿದಿಲ್ಲ. ಬಿಜೆಪಿ ವೇಷದಲ್ಲಿ ಕಾಂಗ್ರೆಸ್ಸಿಗರು, ಜೆಡಿಎಸ್ನವರು ಇದ್ದಾರೆ. ಬಿಜೆಪಿಯಲ್ಲಿ ಶೇ 70ರಷ್ಟು ಜನರು ಇತರ ಪಕ್ಷಗಳಿಂದ ಬಂದವರೇ ಇದ್ದಾರೆ. ಇಂಥವರಿಂದ ಎಂಥ ಸೈದ್ಧಾಂತಿಕ ಬದ್ಧತೆ ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.
‘ಹಿಂದುತ್ವವಾದಿ ಕಾರ್ಯಕರ್ತರ ಪಾಲಿಗೆ ಬಿಜೆಪಿ ಎನ್ನುವುದು ಕುಡುಕ ಗಂಡನಿದ್ದಂತೆ. ಅದರ ಮನೆತನ ಒಳ್ಳೇದಿದೆ. ಆದರೆ ಗಂಡನಷ್ಟೇ ದಾರಿ ತಪ್ಪಿದ್ದಾನೆ. ಅವನನ್ನು ಬೈದು, ತಿವಿದು, ಹಿರಿಯರಿಂದ ಬುದ್ಧಿ ಹೇಳಿಸಿ ಸರಿದಾರಿಗೆ ತರಬೇಕು. ಡೈವೋರ್ಸ್ ಕೊಡಲು ಆಗುವುದಿಲ್ಲ. ಈ ಭ್ರಷ್ಟ ಬಿಜೆಪಿಗೆ ಒಳಗಿನಿಂದಲೂ ಚುಚ್ಚಬೇಕು, ಒಳಗಿನಿಂದಲೂ ಸರಿಮಾಡಬೇಕು. ನಾಯಕರಾದ ನೀವು ಲೂಟಿಗಾಗಿ ಇರುವುದಲ್ಲ. ಇವರು ತಮ್ಮ ಮಕ್ಕಳನ್ನು ಮುಂದೆ ತರುತ್ತಿದ್ದಾರೆ. ಆದರೆ ಕಾರ್ಯಕರ್ತರನ್ನು ಮಾತ್ರ ಪೋಸ್ಟರ್ ಹಚ್ಚಲು ಸೀಮಿತಗೊಳಿಸಿದ್ದಾರೆ. ಕುಡುಕ ಗಂಡನನ್ನ ಸುಧಾರಿಸೋದು ಹೆಂಡತಿಯ ಕರ್ಮ. ನಾವು ಇವರನ್ನು ಸರಿ ಮಾಡ್ತೀವಿ. ಎಷ್ಟೋ ಜನರ ತ್ಯಾಗ-ಬಲಿದಾನಗಳಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರಿಗೆ ಇದನ್ನು ಅರ್ಥ ಮಾಡಿಸುವುದು ನಮ್ಮ ಜವಾಬ್ದಾರಿ’ ಎಂದು ಹೇಳಿದರು.
‘ಗಂಡ ಒಳ್ಳೆಯವನಿದ್ದೇನೆ, ಆದರೆ ಕುಡುಕ ಅಷ್ಟೇ. ಗಂಡನ ಮನೆತನ ಒಳ್ಳೇದಿದೆ. ಅತ್ತೆ-ಮಾವ ಒಳ್ಳೆಯವರಿದ್ದಾರೆ. ಆದರೆ ಗಂಡ ಮಾತ್ರ ದಾರಿ ತಪ್ಪಿದ್ದಾನೆ. ನಮ್ಮ ಬೊಮ್ಮಾಯಿ, ಸಿಟಿ ರವಿ, ಸುನಿಲ್, ನಳೀನ್ ದಾರಿ ತಪ್ಪಿದ್ದಾರೆ. ಇವರನ್ನು ಸರಿಮಾಡಿಕೊಳ್ಳಬೇಕು. ಸಿದ್ಧಾಂತ ಉಳಿಸಿಕೊಳ್ಳಬೇಕು’ ಎಂದು ವಿವರಿಸಿದರು.