Prashant Kishor: ಹೊಸ ಪಕ್ಷ ಸ್ಥಾಪನೆಯಿಲ್ಲ, ಬಿಹಾರದಲ್ಲಿ 3,000 ಕಿ.ಮೀ ಪಾದಯಾತ್ರೆ ಮಾಡುತ್ತೇವೆ; ಪ್ರಶಾಂತ್ ಕಿಶೋರ್ ಘೋಷಣೆ | Prashant Kishor Says No Party For Now Announced 3000 km Bihar Padyatra


Prashant Kishor: ಹೊಸ ಪಕ್ಷ ಸ್ಥಾಪನೆಯಿಲ್ಲ, ಬಿಹಾರದಲ್ಲಿ 3,000 ಕಿ.ಮೀ ಪಾದಯಾತ್ರೆ ಮಾಡುತ್ತೇವೆ; ಪ್ರಶಾಂತ್ ಕಿಶೋರ್ ಘೋಷಣೆ

ಪ್ರಶಾಂತ್ ಕಿಶೋರ್​

ಇತ್ತೀಚಿನ ರಾಜಕೀಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಪ್ರಶಾಂತ್ ಕಿಶೋರ್ ಇಂದು ಹೊಸ ಪಕ್ಷವನ್ನು ಘೋಷಿಸುವ ಯೋಚನೆಯಿಲ್ಲ ಎಂದಿದ್ದಾರೆ.

ನವದೆಹಲಿ: ಸದ್ಯಕ್ಕೆ ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಬಹಳ ಚರ್ಚೆಯಾಗುತ್ತಿರುವ ಹೆಸರು ಪ್ರಶಾಂತ್ ಕಿಶೋರ್. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Prashant Kishor) ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಾಕಷ್ಟು ಸಭೆಗಳು ಕೂಡ ನಡೆದಿದ್ದವು. ಕೊನೆಗೆ ಕಾಂಗ್ರೆಸ್ ಸೇರಲು ಪ್ರಶಾಂತ್ ಕಿಶೋರ್ ನಿರಾಕರಿಸಿದ್ದರು. ಅದರ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ಹೊಸ ಪಕ್ಷ ಸ್ಥಾಪನೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಆ ಕುರಿತು ಸ್ಪಷ್ಟನೆ ನೀಡಿರುವ ಪ್ರಶಾಂತ್ ಕಿಶೋರ್ ಅಕ್ಟೋಬರ್ 2ರಿಂದ ಬಿಹಾರದಲ್ಲಿ (Bihar) 3 ಸಾವಿರ ಕಿ.ಮೀ. ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.

ಇತ್ತೀಚಿನ ರಾಜಕೀಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಪ್ರಶಾಂತ್ ಕಿಶೋರ್ ಇಂದು ಹೊಸ ಪಕ್ಷವನ್ನು ಘೋಷಿಸುವ ಯೋಚನೆಯಿಲ್ಲ ಎಂದಿದ್ದಾರೆ. ಸದ್ಯಕ್ಕೆ ಹೊಸ ಪಕ್ಷ ಸ್ಥಾಪನೆ ಮಾಡುವ ಯೋಚನೆಯಿಲ್ಲ. ಆದರೆ ನನ್ನ ತವರು ರಾಜ್ಯವಾದ ಬಿಹಾರದಲ್ಲಿ ಹೊಸ ರಾಜ್ಯವನ್ನು ತರಲು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಚುನಾವಣಾ ತಂತ್ರಗಾರ ಅಕ್ಟೋಬರ್ 2ರಿಂದ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡಲು 3,000 ಕಿ.ಮೀ ಪಾದಯಾತ್ರೆ ಅಥವಾ ಮೆರವಣಿಗೆಯನ್ನು ನಡೆಸುವುದಾಗಿ ಘೋಷಿಸಿದ್ದಾರೆ. ಬಿಹಾರದಲ್ಲಿ “ನಯೀ ಸೋಚ್, ನಯಾ ಪ್ರಯಾಸ್ (ಹೊಸ ಚಿಂತನೆ, ಹೊಸ ಪ್ರಯತ್ನ)”ಕ್ಕೆ ಪಣ ತೊಡುವುದಾಗಿ ಘೋಷಿಸಿದ್ದಾರೆ. (Source)

ಸದ್ಯದಲ್ಲಿ ಬಿಹಾರದಲ್ಲಿ ಯಾವುದೇ ಚುನಾವಣೆಗಳಿಲ್ಲ. ಆದ್ದರಿಂದ ರಾಜಕೀಯ ಪಕ್ಷದ ಕುರಿತು ನಾನು ಯೋಚನೆ ಮಾಡಿಲ್ಲ. ಸದ್ಯಕ್ಕೆ ಜನರನ್ನು ಭೇಟಿ ಮಾಡಿ, ಅವರ ಅಗತ್ಯಗಳನ್ನು ಗಮನಿಸುವುದು ನನ್ನ ಉದ್ದೇಶ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಕಳೆದ 15 ವರ್ಷಗಳು ಬಿಹಾರಕ್ಕೆ ಸರಿಯಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ. “ನಾನು ಇಂದು ಯಾವುದೇ ರಾಜಕೀಯ ವೇದಿಕೆ ಅಥವಾ ರಾಜಕೀಯ ಪಕ್ಷವನ್ನು ಪ್ರಕಟಿಸುವುದಿಲ್ಲ. ಬಿಹಾರದಲ್ಲಿ ಬದಲಾವಣೆಯನ್ನು ಬಯಸುವ ಎಲ್ಲರನ್ನು ಒಟ್ಟುಗೂಡಿಸಲು ನಾನು ಬಯಸಿದ್ದೇನೆ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಕಳೆದ ಕೆಲವು ತಿಂಗಳಲ್ಲಿ ನಮ್ಮ ತಂಡವು ಉತ್ತಮ ಆಡಳಿತದಲ್ಲಿ ನಂಬಿಕೆಯಿರುವ 17,000 ಜನರನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ. “ಈ ಶೇ.90ರಷ್ಟು ಜನರು ಬಿಹಾರಕ್ಕೆ ಹೊಸ ಚಿಂತನೆಯ ಅಗತ್ಯವಿದೆ ಎಂದು ಭಾವಿಸಿದ್ದಾರೆ. ಮುಂದಿನ ನಾಲ್ಕು ತಿಂಗಳಲ್ಲಿ ನಾನು ವೈಯಕ್ತಿಕವಾಗಿ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಭೇಟಿಯಾಗಲು ಪ್ರಯತ್ನಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

“ನನಗೆ ನಿತೀಶ್ ಕುಮಾರ್ ಜೊತೆ ಯಾವುದೇ ವೈಯುಕ್ತಿಕ ಜಗಳವಿಲ್ಲ. ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿದೆ. ನಿತೀಶ್ ಜಿ ನನ್ನ ತಂದೆಯಂತೆ. ನಿತೀಶ್ ಕುಮಾರ್ ನನ್ನನ್ನು ಸಭೆಗೆ ಕರೆದರೆ ನಾನು ಹೋಗಬೇಕಾಗುತ್ತದೆ. ಅಂದರೆ ನಾವು ಎಲ್ಲವನ್ನೂ ಒಪ್ಪುತ್ತೇವೆ ಎಂದು ಅರ್ಥವಲ್ಲ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *