ಲಕ್ಷ್ಮಿಯವರು ಹಲವಾರು ವರ್ಷಗಳಿಂದ ಸಕ್ರಿಯ ರಾಜಕಾರದಲ್ಲಿರುವುದರಿಂದ ಅವರಿಗೆ ಇಂತದ್ದೆನ್ನೆಲ್ಲ ಎದುರಿಸಿ ಗೊತ್ತಿದೆ. ರಮೇಶ್ ಏನೇ ತಿಪ್ಪರಲಾಗ ಹಾಕಿದರೂ ಗೆದ್ದೇ ತೀರುತ್ತೇನೆಂದು ಶಪಥಗೈದಿದ್ದಾರೆ.
ಬೆಳಗಾವಿ: ನಮ್ಮ ರಾಜಕಾರಣಿಗಳಿಗೆ (politicos) ಚುನಾವಣೆ ಸಮಯದಲ್ಲಿ ಅದೆಲ್ಲಿಂದ ದುಡ್ಡು ಬರುತ್ತೆ ಅಂತ ಆದಾಯ ತೆರಿಗೆ ಇಲಾಖೆಯವರಿಗೂ ಗೊತ್ತಾಗದು! ಚುನಾವಣೆಯಲ್ಲಿ ಸ್ಪರ್ಧಿಸುವಾಗ ಅವರು ಖರ್ಚು ಮಾಡುವ ಪರಿ ನೋಡಿದರೆ ದಿಗಿಲು ಮೂಡುತ್ತದೆ. ನಾವು ಉಲ್ಲೇಖಿಸುತ್ತಿರುವ ಬೆಳಗಾವಿ ಜಿಲ್ಲೆಯ ಇಬ್ಬರು ಪ್ರಭಾವಿ ರಾಜಕಾರಣಿಗಳು-ಕಾಂಗ್ರೆಸ್ ಪಕ್ಷದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮತ್ತು ಬಿಜೆಪಿಯ ರಮೇಶ ಜಾರಕಿಹೊಳಿ (Ramesh Jarkiholi) ನಿಸ್ಸಂದೇಹವಾಗಿ ಶ್ರೀಮಂತರು, ಸಂದೇಹವೇ ಬೇಡ. ಸಕ್ಕರೆ ಕಾರ್ಖಾನೆಗಳ ಒಡೆಯ ಒಡತಿಯರು ಅಂದರೆ ಸುಮ್ನೇನಾ? ಅವರ ನಡುವೆ ಅದ್ಯಾವುದೋ ಕಾರಣಕ್ಕೆ ಛಲ ಹುಟ್ಟಿ ಈಗ ಹೆಮ್ಮರವಾಗಿ ಬೆಳೆದಿದೆ.
ರಮೇಶ ಜಾರಕಿಹೊಳಿ ಅವರು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೇ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಫರ್ಧಿಸುವ ಲಕ್ಷ್ಮಿ ಅವರನ್ನು ಸೋಲಿಸಿಯೇ ತೀರುವ ಛಲ ತೊಟ್ಟಿದ್ದಾರೆ. ಹಾಗೆ ನೋಡಿದರೆ, ರಮೇಶ್ ಅವರ ಕ್ಷೇತ್ರ ಗೋಕಾಕ. ಅವರಿಗೆ ಇಲ್ಲಿ ಪುನಃ ಗೆಲ್ಲುವ ಬಗ್ಗೆ ಯಾವುದೇ ಅನುಮಾನ ಇದ್ದಂತಿಲ್ಲ. ಹಾಗಾಗಿ, ಅವರು ತಮ್ಮೆಲ್ಲ ಗಮನ, ಹಣ, ತಂತ್ರಗಾರಿಕೆ ಮತ್ತು ಸಂಪನ್ಮೂಲಗಳನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವ್ಯಯಿಸುತ್ತಿದ್ದಾರೆ. ಗುರಿ ಅದೇ-ಲಕ್ಷ್ಮೀ ಅವರನ್ನು ಸೋಲಿಸುವುದು!