Bengaluru Bulls vs Patna Pirates
ಪ್ರೋ ಕಬಡ್ಡಿ ಲೀಗ್ನ 59ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಟ್ನಾ ಪೈರೇಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಪಾಯಿಂಟ್ ಟೇಬಲ್ನಲ್ಲಿ ಟಾಪ್ ತಂಡವಾಗಿ ಗುರುತಿಸಿಕೊಂಡಿರುವ ಬೆಂಗಳೂರು ಬುಲ್ಸ್ಗೆ ಇದು ಮೊದಲಾರ್ಧದ ಕೊನೆಯ ಪಂದ್ಯವಾಗಿದ್ದು, ಹೀಗಾಗಿ ಗೆಲ್ಲಲು ಭರ್ಜರಿ ಪೈಪೋಟಿ ನಡೆಸಲಿದೆ. ಇನ್ನೊಂದೆಡೆ ಪಟ್ನಾ ಪೈರೇಟ್ಸ್ ತಂಡವು ಪಾಯಿಂಟ್ ಟೇಬಲ್ನಲ್ಲಿ 3ನೇ ಸ್ಥಾನದಲ್ಲಿದ್ದು, ಹಾಗಾಗಿ ಈ ಪಂದ್ಯದಲ್ಲಿ ಗೆದ್ದರೆ 2ನೇ ಸ್ಥಾನಕ್ಕೇರಬಹುದು. ಇದೇ ಕಾರಣದಿಂದ ಉಭಯ ತಂಡಗಳಿಗೂ ಈ ಪಂದ್ಯವು ಮಹತ್ವದ್ದು ಎನಿಸಿಕೊಂಡಿದೆ.
ಇನ್ನು ಉಭಯ ತಂಡಗಳು ಇದುವರೆಗೆ 17 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಬೆಂಗಳೂರು ಬುಲ್ಸ್ ಗೆದ್ದಿರುವುದು ಕೇವಲ 5 ಬಾರಿ ಮಾತ್ರ. ಇನ್ನು 10 ಪಂದ್ಯಗಳಲ್ಲಿ ಪಟ್ನಾ ಪೈರೇಟ್ಸ್ ಗೆದ್ದಿದೆ. ಹಾಗೆಯೇ ಎರಡು ಪಂದ್ಯಗಳು ಟೈ ಆಗಿವೆ. ಇಲ್ಲಿ ಒಟ್ಟಾರೆ ಮುಖಾಮುಖಿಯಲ್ಲಿ ಪಟ್ನಾ ಪೈರೇಟ್ಸ್ ತಂಡವು ಮೇಲುಗೈ ಹೊಂದಿದೆ. ಆದರೆ ಕಳೆದ ಸೀಸನ್ನಲ್ಲಿ ಎರಡೂ ಪಂದ್ಯಗಳಲ್ಲೂ ಬೆಂಗಳೂರು ಬುಲ್ಸ್ ತಂಡ ಪಟ್ನಾ ಪೈರೇಟ್ಸ್ಗೆ ಸೋಲುಣಿಸಿತ್ತು ಎಂಬುದು ವಿಶೇಷ.
ಅಷ್ಟೇ ಅಲ್ಲದೆ ಈ ಬಾರಿ ಆಡಿರುವ 10 ಪಂದ್ಯಗಳಲ್ಲಿ ಬೆಂಗಳೂರು 7 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, ಪಟ್ನಾ ತಂಡವು 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದುಕೊಂಡಿದೆ. ಅಂದರೆ ಈ ಸೀಸನ್ನಲ್ಲಿನ ಉಭಯ ತಂಡಗಳು ಪ್ರದರ್ಶನ ಸಮಬಲ ಹೊಂದಿದೆ ಎಂಬುದು ಸ್ಪಷ್ಟ. ಹೀಗಾಗಿ ಎರಡೂ ತಂಡಗಳಿಂದ ಕಠಿಣ ಪೈಪೋಟಿ ಕಂಡು ಬರಲಿದೆ. ಇಲ್ಲಿ ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದರೆ ಉಭಯ ತಂಡಗಳು ಸಮಬಲ ಹೊಂದಿದ್ದು, ಹೀಗಾಗಿ ರೋಚಕ ಕಾದಾಟವನ್ನು ನಿರೀಕ್ಷಿಸಬಹುದು.
ಜನವರಿ 16ರ ಪಂದ್ಯಗಳು:
ತಮಿಳ್ ತಲೈವಾಸ್ vs ಜೈಪುರ್ ಪಿಂಕ್ ಪ್ಯಾಂಥರ್ಸ್, ಸಮಯ- 7.30 ಕ್ಕೆ
ಬೆಂಗಳೂರು ಬುಲ್ಸ್ vs ಪಟ್ನಾ ಪೈರೇಟ್ಸ್, ಸಮಯ- 8.30 ಕ್ಕೆ