
ಸಾಂದರ್ಭಿಕ ಚಿತ್ರ
ಬಂಧಿತ ಆರೋಪಿಗಳಿಗೂ ಅಭ್ಯರ್ಥಿಗಳಿಗೂ ಸಂಬಂಧ ಇರುವ ಬಗ್ಗೆ ಸಿಐಡಿ ಮಾಹಿತಿ ಸಂಗ್ರಹಿಸುತ್ತಿದೆ
ಬೆಂಗಳೂರು: ನೇಮಕಾತಿ ವಿಭಾಗದ ನಾಲ್ವರು ಹಿರಿಯ ಅಧಿಕಾರಿಗಳ ವಿಚಾರಣೆಯನ್ನು ಸಿಐಡಿ ತೀವ್ರಗೊಳಿಸಿದೆ. ಈ ಕುರಿತು ಮಹತ್ವದ ಮಾಹಿತಿ ಕಲೆಹಾಕಿರುವ ಸಿಐಡಿ, ಬಂಧಿತ ಆರೋಪಿಗಳಿಗೂ ಅಭ್ಯರ್ಥಿಗಳಿಗೂ ಸಂಬಂಧ ಇರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಈ ಸಂಬಂಧವೇ ಮಹತ್ವದ ಪಾತ್ರ ನಿರ್ವಹಿಸಿದೆ ಎಂದು ಶಂಕಿಸಲಾಗಿದೆ. ಯಾವೆಲ್ಲಾ ಅಧಿಕಾರಿಗಳ ಅಣತಿಯಂತೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು? ನೇಮಕಾತಿ ವಿಭಾಗದ ಅಧಿಕಾರಿಗಳ ಪಾತ್ರವೇನು? ಯಾವೆಲ್ಲಾ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಿಐಡಿ ಯತ್ನಿಸುತ್ತಿದೆ. ಬಂಧಿತ ಆರೋಪಿಗಳ ಮೊಬೈಲ್ ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಲಾಗಿದೆ.
ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ಮತ್ತಷ್ಟು ಮಾಹಿತಿಗೆ ಲಿಂಕ್ ಕ್ಲಿಕ್ ಮಾಡಿ
ಅವ್ಯವಹಾರದ ಮೂಲ ನೇಮಕಾತಿ ವಿಭಾಗವೇ ಆಗಿರಬಹುದು ಎಂದು ಸಿಐಡಿ ಶಂಕಿಸಿದೆ. ಈಗಾಗಲೇ ಬಂಧನದಲ್ಲಿರುವ ನಾಲ್ವರು ನೇಮಕಾತಿ ಸಿಬ್ಬಂದಿ ಮೇಲೆ ಸಿಐಡಿ ಸಂಶಯ ವ್ಯಕ್ತಪಡಿಸಿದೆ. ನೇಮಕಾತಿ ವಿಭಾಗದ ಒಬ್ಬೊಬ್ಬರನ್ನೇ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ನೇಮಕಾತಿ ವಿಭಾಗದ ಕರ್ಮಕಾಂಡ ಕುರಿತು ಟಿವಿ9 ಎಳೆಎಳೆಯಾಗಿ ವಿವರಗಳನ್ನು ಬಹಿರಂಗಪಡಿಸಿತ್ತು. ಕಿಂಗ್ ಪಿನ್ಗಳ ಜೊತೆಗೆ ಸಂಪರ್ಕ ಹೊಂದಿದ್ದ ನೇಮಕಾತಿ ವಿಭಾಗದ ಅಧಿಕಾರಿಗಳಿಂದಲೇ ಅವ್ಯವಹಾರ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಪ್ರತಿ ನೇಮಕಾತಿಗೂ ತಲಾ ₹ 35ರಿಂದ 40 ಲಕ್ಷ ರೂಪಾಯಿವರೆಗೆ ಹಣ ಪಡೆದಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಇನ್ನೂ ಕೆಲವರನ್ನು ಸಿಐಡಿ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ನೇಮಕಾತಿ ವಿಭಾಗದ ಸಿಬ್ಬಂದಿ ಶ್ರೀಧರ್, ಹರ್ಷಾ, ಶ್ರೀನಿವಾಸ್, ಲೋಕೇಶ್ ಈಗಾಗಲೇ ಸಿಐಡಿ ಬಂಧನದಲ್ಲಿದ್ದಾರೆ. ಮಧ್ಯವರ್ತಿಗಳಾದ ಮಂಜುನಾಥ್ ಮತ್ತು ಶರತ್ ಅವರನ್ನು ಬಂಧಿಸಿರುವ ಸಿಐಡಿ ವಿಚಾರಣೆ ತೀವ್ರಗೊಳಿಸಿದೆ.
ಈ ಪೈಕಿ ಹರ್ಷಾ ಎಫ್ಡಿಎ ಅಧಿಕಾರಿ, ಶ್ರೀಧರ್ ನೇಮಕಾತಿ ವಿಭಾಗದ ಇನ್ಸ್ಪೆಕ್ಟರ್ ಆಗಿದ್ದಾರೆ. ಮಂಜುನಾಥ್ ಮತ್ತು ಶರತ್ ಅಭ್ಯರ್ಥಿಗಳೊಂದಿಗೆ ವ್ಯವಹಾರ ಕುದುರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಸಿಐಡಿ ವಿಚಾರಣೆ ವೇಳೆ ಆರೋಪಿಗಳು ಹಲವು ಮಹತ್ವದ ಮಾಹಿತಿಯನ್ನು ಬಾಯಿಬಿಟ್ಟಿದ್ದಾರೆ. ಕೆಲ ಹಿರಿಯ ಅಧಿಕಾರಿಗಳೂ ಈ ಹಗರಣದಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ. ಡಿವೈಎಸ್ಪಿ ಶಾಂತಕುಮಾರ್ ಕಳೆದ 10 ವರ್ಷಗಳಿಂದ ನೇಮಕಾತಿ ವಿಭಾಗದಲ್ಲೇ ಬೀಡುಬಿಟ್ಟಿದ್ದರು. ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.