Pulwama Encounter: ಪುಲ್ವಾಮಾದಲ್ಲಿ ಕಾರ್ಯಾಚರಣೆ; ಜೈಷ್​ ಎ ಮೊಹಮ್ಮದ್​ ಉನ್ನತ ಕಮಾಂಡರ್ ಸೇರಿ ಇಬ್ಬರು ಉಗ್ರರ ಸಾವು | 2 terrorists including Jaish e Mohammed commander killed during encounter in Pulwama


Pulwama Encounter: ಪುಲ್ವಾಮಾದಲ್ಲಿ ಕಾರ್ಯಾಚರಣೆ; ಜೈಷ್​ ಎ ಮೊಹಮ್ಮದ್​ ಉನ್ನತ ಕಮಾಂಡರ್ ಸೇರಿ ಇಬ್ಬರು ಉಗ್ರರ ಸಾವು

ಯಾಸಿರ್​ ಮತ್ತು ಫರ್ಕೂನ್​ (ಫೋಟೋ ಕೃಪೆ ಟಿವಿ 9 ಭಾರತ್​ವರ್ಷ್)

ಜಮ್ಮು-ಕಾಶ್ಮೀರದ ಪುಲ್ವಾಮಾ (Pulwama Encounter) ಜಿಲ್ಲೆಯಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್​ಕೌಂಟರ್​ ನಡೆದಿದ್ದು, ಇದರಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ. ಕಸ್ಬಾಯರ್ ರಾಜಪೋರಾ ಎಂಬ ಏರಿಯಾದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಮೃತಪಟ್ಟ ಉಗ್ರರಲ್ಲಿ ಒಬ್ಬಾತ ಜೈಷ್​ ಎ ಮೊಹಮ್ಮದ್ ಸಂಘಟನೆಯ ಉನ್ನತ ಕಮಾಂಡರ್​ ಎಂದು ಹೇಳಲಾಗಿದೆ.  

ಎನ್​ಕೌಂಟರ್​ ಬಗ್ಗೆ ಕಾಶ್ಮೀರ ಐಜಿಪಿ ವಿಜಯ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದು, ಜೈಷ್​ ಎ ಮೊಹಮ್ಮದ್​ ಸಂಘಟನೆಯ ಉನ್ನತ ಕಮಾಂಡರ್ ಯಾಸಿರ್​ ಪರ್ರೆ ಮತ್ತು ಫುರ್ಕಾನ್​ ಎಂಬ ವಿದೇಶಿ ಉಗ್ರ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದರಲ್ಲಿ ಯಾಸಿರ್​ ಐಇಡಿ ಎಕ್ಸ್​ಪರ್ಟ್​ ಆಗಿದ್ದು, ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡವನಾಗಿದ್ದಾನೆ ಎಂದೂ ಹೇಳಿದ್ದಾರೆ. ಸದ್ಯ ಪ್ರದೇಶದಲ್ಲಿ ಇನ್ನೂ ಸಹ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಲೇ ಇದೆ.

ಪುಲ್ವಾಮಾದ ಕಸ್ಬಾಯರ್​ ರಾಜ್​ಪೋರ್​​ನಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಭದ್ರತಾ ಪಡೆಗಳು ಕಾರ್ಯಾಚರಣೆಗೆ ಇಳಿದಿದ್ದವು. ಸ್ಥಳವನ್ನು ಸಂಪೂರ್ಣವಾಗಿ ಸುತ್ತುವರಿಯಲಾಗಿತ್ತು. ಭದ್ರತಾ ಪಡೆಗಳು ತಮ್ಮನ್ನು ಸುತ್ತುವರಿದಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಅಡಗಿದ್ದ ಉಗ್ರರು ನಿರಂತರವಾಗಿ ಗುಂಡಿನ ದಾಳಿ ನಡೆಸಲು ಶುರು ಮಾಡಿದರು. ಅದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿಯೂ ಫೈರಿಂಗ್​ ನಡೆಸಿದ್ದಾರೆ. ಈ ವೇಳೆ ಇಬ್ಬರು ಭಯೋತ್ಪಾದಕರು ಸತ್ತಿದ್ದಾರೆ.

ಜಮ್ಮು-ಕಾಶ್ಮೀರದ ಪ್ರದೇಶಗಳಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ನಡೆಯುತತಲೇ ಇದೆ. ಕಳೆದ ತಿಂಗಳು ಲಷ್ಕರ್​ ಎ ತೊಯ್ಬಾದ ಉಗ್ರ ಸರ್ವಿರ್​ ಅಹ್ಮದ್​ ಮಿರ್​​ನನ್ನು ಸಿಆರ್​ಪಿಎಫ್​ ಸಿಬ್ಬಂದಿ ಸೆರೆ ಹಿಡಿದಿದ್ದರು. ಈತನನ್ನು ಪುಲ್ವಾಮಾದ ಮಿರ್ಗುಂಡ್​​ನಲ್ಲಿ ಬಂಧಿಸಲಾಗಿತ್ತು.


ಇದನ್ನೂ ಓದಿ: ಲಸಿಕೆ ಹಾಕದ ಕೊವಿಡ್ ರೋಗಿಗಳಿಗೆ ಕೇರಳ ಸರ್ಕಾರ ಉಚಿತ ಚಿಕಿತ್ಸೆ ನೀಡುವುದಿಲ್ಲ: ಪಿಣರಾಯಿ ವಿಜಯನ್

TV9 Kannada


Leave a Reply

Your email address will not be published. Required fields are marked *