ಪುನೀತ್ ರಾಜ್ಕುಮಾರ್
ಬೆಂಗಳೂರು: ನಟ ಪುನೀತ್ ಅಕ್ಟೋಬರ್ 29ರಂದು ಅಕಾಲಿಕವಾಗಿ ಇಹಲೋಕ ತ್ಯಜಿಸಿದರು. ಪುನೀತ್ ನಿಧನಕ್ಕೆ ನಾಡು ಕಂಬನಿ ಮಿಡಿದಿತ್ತು. ಬದುಕಿದ್ದಾಗ ರಾಜನಂತೆ ಅನೇಕರಿಗೆ ಸಹಾಯ ಮಾಡಿದ್ದ ಪುನೀತ್ ರಾಜ್ಕುಮಾರ್ ಸಾವಿನ ನಂತರವೂ ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ. ಅವರ ಎರಡು ಕಣ್ಣುಗಳನ್ನು ನಾಲ್ಕು ಜನರಿಗೆ ಅಳವಡಿಸಲಾಗಿದೆ. ಸದ್ಯ ಈ ಘಟನೆ ಬಳಿಕ ನೇತ್ರದಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಡಾ.ಭುಜಂಗ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಪುನೀತ್ ನೇತ್ರದಾನದ ಬಳಿಕ ಪುನೀತ್‌ರಿಂದ ಪ್ರೇರಣೆ ಪಡೆದು ಸಾಕಷ್ಟು ಜನರು ನೇತ್ರದಾನಕ್ಕೆ ಬರುತ್ತಿದ್ದಾರೆ. ಇಂದು ಒಂದೇ ದಿನ 1000ಕ್ಕೂ ಹೆಚ್ಚು ಜನರಿಂದ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಭುಜಂಗ ಶೆಟ್ಟಿ ತಿಳಿಸಿದ್ದಾರೆ.
ಈ ಹಿಂದೆ ಡಾ. ರಾಜ್ಕುಮಾರ್ ಕೂಡ ಕಣ್ಣುಗಳನ್ನು ದಾನ ಮಾಡಿದ್ದರು. ಅವರ ಹಾದಿಯಲ್ಲಿಯೇ ಪುನೀತ್ ಕೂಡ ನೇತ್ರದಾನ ಮಾಡಿದ್ದಾರೆ. ನಾಲ್ಕು ಜನರ ಬಾಳಿಗೆ ಬೆಳಕು ನೀಡಿದ್ದಾರೆ. ‘ದಾನ ಮಾಡಲಾದ 2 ಕಣ್ಣುಗಳು ತುಂಬ ಆರೋಗ್ಯವಾಗಿದ್ದರೆ ಕಾರ್ನಿಯಾವನ್ನು ನಾವು ನಾಲ್ಕು ಭಾಗ ಮಾಡಬಹುದು. ಕಾರ್ನಿಯಾವನ್ನು ಒಂದು ಗ್ಲಾಸ್ ಎಂದು ಊಹಿಸಿದರೆ ಅದರಲ್ಲಿ ಮುಂಭಾಗ ಮತ್ತು ಹಿಂಭಾಗ ಇರುತ್ತದೆ. ಮುಂಭಾಗದ ಕಾರ್ನಿಯಾ ತೊಂದರೆ ಇರುವವರಿಗೆ ದಾನ ಪಡೆದ ಕಣ್ಣಿನ ಮುಂಭಾಗವನ್ನು ಅಳವಡಿಸಲಾಗುತ್ತೆ. ಹಿಂಭಾಗದ ತೊಂದರೆ ಇರುವವರಿಗೆ ಹಿಂಭಾಗದ ಕಾರ್ನಿಯಾವನ್ನು ಅಳವಡಿಸಲಾಗುತ್ತೆ. ಈ ರೀತಿ ನಾಲ್ವರಿಗೆ ಪುನೀತ್ ರಾಜ್ಕುಮಾರ್ ಕಣ್ಣುಗಳನ್ನು ಬಳಸಲಾಗಿದೆ. ಸದ್ಯ ಪುನೀತ್ರಿಂದ ಪ್ರೇರಣೆ ಪಡೆದು ಅಭಿಮಾನಿಗಳು ಕೂಡ ನೇತ್ರದಾನ ನೊಂದಣಿ ಮಾಡಿಕೊಳ್ಳುತ್ತಿದ್ದಾರೆ.
ಪಟಾಕಿ ಹೊಡೆಯುವಾಗ ಬಾಲಕನಿಗೆ ಗಾಯ
ಬೆಂಗಳೂರಿನ ಬಸವನಗುಡಿಯಲ್ಲಿ ಪಟಾಕಿ ಹೊಡೆಯುವಾಗ 9 ವರ್ಷದ ಬಾಲಕನ ಕಣ್ಣಿಗೆ ಗಾಯಗಳಾದ ಘಟನೆ ನಡೆದಿದೆ. ಗಾಯಾಳು ಬಾಲಕನಿಗೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಣ್ಣಿನ ಗುಡ್ಡೆಗೆ ಹಾನಿಯಾಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಜೊತೆಗೆ ಮುಖದ ಚರ್ಮ ಸುಟ್ಟು, ರೆಪ್ಪೆಗೂದಲು ಮುಚ್ಚಳದಲ್ಲಿ ಊತ ಕಾಣಿಸಿಕೊಂಡಿದ್ದು ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ: ಪುನೀತ್ ಅವರ 2 ಕಣ್ಣನ್ನು 4 ಜನರಿಗೆ ಜೋಡಿಸಿದ್ದು ಹೇಗೆ? ವೈದ್ಯರು ತೆರೆದಿಟ್ಟ ಅಚ್ಚರಿ ಮಾಹಿತಿ ಇಲ್ಲಿದೆ