Puneeth Rajkumar: ‘ಅಪ್ಪು ನಿಧನದ ನೋವು ನನ್ನ ಜೀವ ಇರೋವರೆಗೂ ಕಮ್ಮಿ ಆಗಲ್ಲ’; 11ನೇ ದಿನದ ಕಾರ್ಯದಲ್ಲಿ ಶಿವಣ್ಣನ ಮಾತು | Shivarajkumar talks about Puneeth Rajkumar after performing 11th day rituals at Kanteerava Studio


Puneeth Rajkumar: ‘ಅಪ್ಪು ನಿಧನದ ನೋವು ನನ್ನ ಜೀವ ಇರೋವರೆಗೂ ಕಮ್ಮಿ ಆಗಲ್ಲ’; 11ನೇ ದಿನದ ಕಾರ್ಯದಲ್ಲಿ ಶಿವಣ್ಣನ ಮಾತು

ಪುನೀತ್​ ರಾಜ್​ಕುಮಾರ್, ಶಿವರಾಜ್​ಕುಮಾರ್

ನಟ ಪುನೀತ್​ ರಾಜ್​ಕುಮಾರ್​ ಅವರ 11ನೇ ದಿನ ಕಾರ್ಯ ನೆರವೇರಿಸಲಾಗಿದೆ. ಸೋಮವಾರ (ನ.8) ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಅಪ್ಪು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಮಾತನಾಡಿದ ಶಿವರಾಜ್​ಕುಮಾರ್​ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘11ನೇ ದಿನ ಅಂದುಕೊಂಡು ಇದನ್ನೆಲ್ಲ ಮಾಡುವುದೇ ನಮಗೆ ನೋವಿನ ವಿಚಾರ. ಅಪ್ಪುಗೆ ಇದೆಲ್ಲ ಮಾಡುತ್ತಿದ್ದೇವಾ? ಮಾಡಬೇಕಾ ಅಂತ ಬೆಳಗ್ಗೆ ಅಂದುಕೊಳ್ಳುತ್ತಿದ್ದೆ. ಅದರ ಬಗ್ಗೆ ಮಾತನಾಡುವುದೇ ತುಂಬ ಬೇಜಾರು ಆಗುತ್ತದೆ. ವಿಧಿ ವಿಧಾನಗಳ ಪ್ರಕಾರ ಅದೆಲ್ಲ ನಡೆಯಲೇಬೇಕು’ ಎಂದು ಶಿವಣ್ಣ ಹೇಳಿದ್ದಾರೆ.

‘ಮನಸ್ಸಿನಲ್ಲಿ ತುಂಬ ನೋವಿದೆ. ಅದರ ಜೊತೆಗೆ ಇದನ್ನೆಲ್ಲ ಮಾಡಬೇಕಾಗಿದೆ. ಏನು ಹೇಳಬೇಕು ಎಂದೇ ತಿಳಿಯುತ್ತಿಲ್ಲ. ನಾಳೆ ಅರಮನೆ ಮೈದಾನದಲ್ಲಿ ಕಾರ್ಯ ಇದೆ. ಅವನು ಹುಟ್ಟಿದಾಗ ನನಗೆ 13 ವರ್ಷ. ಒಬ್ಬ ಮಗನನ್ನು ಕಳೆದುಕೊಂಡಂತೆ ಆಗಿದೆ. ಬಲಗೈ ಹೋಗಿಬಿಟ್ಟಿದೆ ಎನಿಸುತ್ತಿದೆ. ಅಳಬಹುದು, ದುಃಖ ತೋಡಿಕೊಳ್ಳಬಹುದು. ಆದರೆ ನಾನು ಜೀವಂತ ಇರುವವರೆಗೂ, ಜೀವ ಹೋದಮೇಲೂ ಈ ನೋವು ಹೋಗುತ್ತೋ ಇಲ್ಲವೋ ಗೊತ್ತಿಲ್ಲ’ ಎಂದು ಭಾವುಕವಾಗಿ ನುಡಿದಿದ್ದಾರೆ ಶಿವಣ್ಣ.

‘ಈ ನೋವು ತುಂಬ ಕಾಡುತ್ತಿರುತ್ತದೆ. ಚಿಕ್ಕ ವಯಸ್ಸಿನಿಂದಲೂ ನಾವು ಅವನನ್ನು ಆರಾಧಿಸಿದ್ದೇವೆ. ಅವನ ಬೆಳವಣಿಗೆ ನೋಡಿ ಖುಷಿಪಟ್ಟವರು ನಾವು. ನಮಗೆ ಇಷ್ಟು ನೋವಾಗಿದೆ ಎಂದಮೇಲೆ ಅಭಿಮಾನಿಗಳಿಗೆ ಹೇಗಾಗಿರಬಹುದು? ಅಭಿಮಾನಿಗಳು ಪ್ರಾಣ ಕಳೆದುಕೊಳ್ಳುವ ಕೆಟ್ಟ ನಿರ್ಧಾರ ಮಾಡಬೇಡಿ. ಅವನು ಸಂತೋಷವಾಗಿ ಇರಬೇಕು ಎಂದರೆ ಈ ರೀತಿ ನಡೆದುಕೊಳ್ಳಬೇಡಿ ಅಂತ ನಾನು ಮನವಿ ಮಾಡುತ್ತೇನೆ. ನಾವು ಈಗಾಗಲೇ ನೋವಿನಲ್ಲಿ ಇದ್ದೇವೆ. ಮತ್ತೆ ನೋವು ಕೊಡಬೇಡಿ. ಅಪ್ಪು ಹೆಸರನ್ನು ಇನ್ನೂ ಅಮರವಾಗಿಸಲು ಪ್ರಯತ್ನಿಸಿ. ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಅಪ್ಪು ಕಾರ್ಯಗಳನ್ನು ಮುಂದುವರಿಸಿ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

‘ಪುನೀತ್​ಗೆ ಜನರು ತೋರಿಸುತ್ತಿರುವ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ. ಇಡೀ ದೇಶದ ಜನರು ಅವನನ್ನು ಕೊಂಡಾಡುತ್ತಿದ್ದಾರೆ ಎಂದರೆ ಅದಕ್ಕೆ ಅವನ ವ್ಯಕ್ತಿತ್ವ ಕಾರಣ. ನಾವು ಮೂವರೂ ಸಹೋದರರು ಒಟ್ಟಾಗಿ ಒಂದು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ನನ್ನ ಸಿನಿಮಾಗೆ ನಿರ್ದೇಶನ ಮಾಡಬೇಕು ಅಂತ ಅವನೇ ಹೇಳಿಕೊಂಡಿದ್ದ. ಅದು ಈಡೇರಲಿಲ್ಲ ಎಂಬುದನ್ನು ನೆನಪಿಸಿಕೊಂಡಾಗೆಲ್ಲ ತುಂಬ ನೋವಾಗುತ್ತಿದೆ’ ಎಂದು ಶಿವಣ್ಣ ಹೇಳಿದ್ದಾರೆ.

ಇದನ್ನೂ ಓದಿ:

ಅಪ್ಪು ಪುಣ್ಯ ಸ್ಮರಣೆಗೆ ಹೇಗಿದೆ ಸಮಾಧಿ ಅಲಂಕಾರ? ವಿವಿಧ ಹೂವುಗಳಿಂದ ಪುನೀತ್​ಗೆ ನಮನ

ಎಂದಿಗೂ ಮುಗಿಯದ ಪುನೀತ್​ ರಾಜ್​ಕುಮಾರ್​ ನೆನಪು; ಇಲ್ಲಿವೆ ಅತಿ ಅಪರೂಪದ ಫೋಟೋಗಳು

TV9 Kannada


Leave a Reply

Your email address will not be published. Required fields are marked *