Puneeth Rajkumar: ನಾಳೆ ಪುನೀತ್ 11ನೇ ದಿನದ ಕಾರ್ಯಕ್ರಮ; ಭರದಿಂದ ಸಾಗಿದೆ ತಯಾರಿ | Tomorrow Puneeth 11th day rituals will held and preparations is going on


Puneeth Rajkumar: ನಾಳೆ ಪುನೀತ್ 11ನೇ ದಿನದ ಕಾರ್ಯಕ್ರಮ; ಭರದಿಂದ ಸಾಗಿದೆ ತಯಾರಿ

ಪುನೀತ್​ ರಾಜಕುಮಾರ್

ನಾಳೆ (ನವೆಂಬರ್ 8) ನಟ ಪುನೀತ್‌ ರಾಜಕುಮಾರ್ ಅವರ 11ನೇ ದಿನದ ಕಾರ್ಯ ನಡೆಯಲಿದೆ. ಬೆಳಗ್ಗೆ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸದಲ್ಲಿ ಕುಟುಂಬಸ್ಥರಿಂದ ಮನೆಯಲ್ಲಿ ಪೂಜೆ ಸಲ್ಲಿಕೆ ಮಾwಲಾಗುತ್ತದೆ. ನಂತರ ಕಂಠೀರವ ಸ್ಟುಡಿಯೋಗೆ ಕುಟುಂಬಸ್ಥರು ತೆರಳಲಿದ್ದಾರೆ. 12ನೇ ದಿನದ ಕಾರ್ಯ ಪ್ಯಾಲೇಸ್ ಗ್ರೌಂಡ್​ನಲ್ಲಿ ನಡೆಯಲಿದ್ದು ಚಿತ್ರೋದ್ಯಮದ‌ ಗಣ್ಯರು, ಆಪ್ತ ಬಳಗಕ್ಕೆ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ. ಸದ್ಯ ಕುಟುಂಬಸ್ಥರು ನಾಳಿನ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂದು, ಸಂಪ್ರದಾಯದಂತೆ ವಿನಯ್ ರಾಜಕುಮಾರ್ ತಲೆಗೂದಲು ತೆಗೆಸುವ ಶಾಸ್ತ್ರ ನಡೆಸಿದ್ದಾರೆ. ಸವಿತ ಸಮಾಜದ ರಮೇಶ್ ಎಂಬುವವರು ವಿನಯ್ ಅವರ ತಲೆಯಲ್ಲಿ ಐದು ಕಡೆ ಕೂದಲು ತೆಗೆಯುವ ಮೂಲಕ ಶಾಸ್ತ್ರ ನೆರವೇರಿಸಿದ್ದಾರೆ.

ನಾಳೆ ನಡೆಯುವ 11ನೇ ದಿನದ ಕಾರ್ಯಕ್ಕೆ ಪುನೀತ್ ನಿವಾಸದ ಎದುರು ಸಿದ್ಧತೆ ನಡೆಯುತ್ತಿದ್ದು, ಶಾಮಿಯಾನ ಹಾಕಲಾಗುತ್ತಿದೆ. ಮನೆಯಲ್ಲಿ ಕುಟುಂಬಸ್ಥರು ಕಾರ್ಯ ಮುಗಿಸಿದ ನಂತರ, ಕಂಠೀರವ ಸ್ಟುಡಿಯೋಗೆ ತೆರಳಲಿದ್ದು, ಅಲ್ಲಿ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಸುಮಾರು 11ಗಂಟೆಗೆ ಪುನೀತ್ ಕಾರ್ಯ ನಡೆಯಲಿದೆ.

ಇಂದು ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪುನೀತ್​ಗೆ ನಮನ:
ಇಂದು ಚಿತ್ರ ಪ್ರದರ್ಶಕರ ವತಿಯಿಂದ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪುನೀತ್​ಗೆ ವಿಶೇಷ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 6ಗಂಟೆಗೆ ಏಕಕಾಲಕ್ಕೆ ಕಾರ್ಯಕ್ರಮ ನಡೆಯಲಿದ್ದು, ಗೀತಾಂಜಲಿ, ಪುಷ್ಪಾಂಜಲಿ ಹಾಗೂ ದೀಪಾಂಜಲಿ ಮುಖಾಂತರ ನಮನ ಸಲ್ಲಿಸಲಾಗುತ್ತದೆ. ಗೀತಾಂಜಲಿಯಲ್ಲಿ ನಾಗೇಂದ್ರ ಪ್ರಸಾದ್ ಬರೆದ ಹಾಡಿನ ಮೂಲಕ ನಮನ ಸಲ್ಲಿಸಲಾಗುತ್ತದೆ. ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲೂ ಭರದಿಂದ ಸಿದ್ಧತೆ ಸಾಗಿದೆ.

ಕಂಠೀರವ ಸ್ಟುಡಿಯೋದಲ್ಲಿ ಅಪ್ಪುವನ್ನು ನೋಡಲು ಹರಿದುಬಂದ ಜನಸಾಗರ:
ವೀಕೆಂಡ್ ಆಗಿರುವ ಕಾರಣ, ಇಂದು ಅತಿಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್​ರನ್ನು ನೋಡಲು ಆಗಮಿಸಿದ್ದಾರೆ. ರಾಜ್ಯದ ವಿವಿಧ ಭಾಗದಿಂದ ಅಭಿಮಾನಿಗಳು ಆಗಮಿಸಿದ್ದು, ಪುನೀತ್ ಸಮಾಧಿ ದರ್ಶನ ಪಡೆಯಲು ಕಿಲೋ ಮೀಟರ್​​ಗಟ್ಟಲೆ ಉದ್ದದ ಸರದಿ ಸಾಲು ನಿರ್ಮಾಣವಾಗಿದೆ. ಮಕ್ಕಳು, ವಿಶೇಷ ಚೇತನರು, ಮಹಿಳೆಯರು ಸೇರಿದಂತೆ ಅಭಿಮಾನಿಗಳು ಕುಟುಂಬ ಸಮೇತರಾಗಿ ಆಗಮಿಸಿ, ಪುನೀತ್​ಗೆ ನಮನ ಸಲ್ಲಿಸುತ್ತಿದ್ದಾರೆ. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಭದ್ರತೆಗೆ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ:

ಎಂದಿಗೂ ಮುಗಿಯದ ಪುನೀತ್​ ರಾಜ್​ಕುಮಾರ್​ ನೆನಪು; ಇಲ್ಲಿವೆ ಅತಿ ಅಪರೂಪದ ಫೋಟೋಗಳು

ಅಪ್ಪು ಮೇಲೆ ಜನರಿಟ್ಟ ಅಭಿಮಾನಕ್ಕೆ ಸಾಟಿ ಇಲ್ಲ; ಪುನೀತ್​ ಸಮಾಧಿ ಬಳಿ ಜನಸಾಗರ ಇನ್ನೂ ಕಮ್ಮಿ ಆಗಿಲ್ಲ

TV9 Kannada


Leave a Reply

Your email address will not be published. Required fields are marked *