Pushpa Kamal Dahal Prachanda ಶೀತಲ್ ನಿವಾಸದಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಅಧ್ಯಕ್ಷೆ ಭಂಡಾರಿ ಅವರು 68 ವರ್ಷದ ಪುಷ್ಪ ಕಮಲ್ ದಹಾಲ್ “ಪ್ರಚಂಡ” ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಪುಷ್ಪ ಕಮಲ್ ದಹಾಲ್ ಪ್ರಚಂಡ
ಕಠ್ಮಂಡು: ಮಾಜಿ ಮಾವೋವಾದಿ ನಾಯಕ ಪುಷ್ಪ ಕಮಲ್ ದಹಾಲ್ “ಪ್ರಚಂಡ” (Pushpa Kamal Dahal Prachanda) ಅವರು ನೇಪಾಳದ (Nepal) ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಪ್ರಚಂಡ ಅವರನ್ನು ಭಾನುವಾರ ಹೊಸ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ್ದರು. ಶೀತಲ್ ನಿವಾಸದಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಅಧ್ಯಕ್ಷೆ ಭಂಡಾರಿ ಅವರು 68 ವರ್ಷದ ಪ್ರಚಂಡ ಅವರಿಗೆ ಪ್ರಮಾಣ ವಚನ ಬೋಧಿಸಿದರು. 275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ 169 ಸದಸ್ಯರ ಬೆಂಬಲವನ್ನು ತೋರಿಸುವ ಪತ್ರವನ್ನು ಅಧ್ಯಕ್ಷರಿಗೆ ಸಲ್ಲಿಸಿದ ಒಂದು ದಿನದ ನಂತರ ಪ್ರಚಂಡ ನೇಪಾಳದ ಪ್ರಧಾನಿಯಾಗಿ (Nepal PM) ಪ್ರಮಾಣವಚನ ಸ್ವೀಕರಿಸಿದರು. ಸಿಪಿಎನ್- ಮಾವೋವಾದಿ ಸಂಘಟನೆ ಶಾಂತಿಯುತ ರಾಜಕೀಯವನ್ನು ಅಳವಡಿಸಿಕೊಂಡಾಗ, ದಶಕದ ಸಶಸ್ತ್ರ ದಂಗೆಯನ್ನು ಕೊನೆಗೊಳಿಸಿ ಮುಖ್ಯವಾಹಿನಿಯ ರಾಜಕೀಯಕ್ಕೆ ಸೇರುವ ಮೊದಲು ಪ್ರಚಂಡ ಒಂದು ದಶಕಕ್ಕೂ ಹೆಚ್ಚು ಕಾಲ ಭೂಗತರಾಗಿದ್ದರು. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ 89 ಸ್ಥಾನಗಳನ್ನು ಹೊಂದಿರುವ ನೇಪಾಳಿ ಕಾಂಗ್ರೆಸ್ ದೇಶದ ಅತಿದೊಡ್ಡ ಪಕ್ಷವಾಗಿದೆ, ಆದರೆ ಸಿಪಿಎನ್- ಯುಎಂಎಲ್ ಮತ್ತು ಸಿಪಿಎನ್-ಎಂಸಿ ಕ್ರಮವಾಗಿ 78 ಮತ್ತು 32 ಸ್ಥಾನಗಳನ್ನು ಹೊಂದಿವೆ.
#PushpaKamalDahal ‘Prachanda’ takes oath as New PM of #Nepal, sworn in by President Bidya Devi Bhandari at Sheetal Niwas, Kathmandu. pic.twitter.com/lndOV0M897
— All India Radio News (@airnewsalerts) December 26, 2022
ಪ್ರಚಂಡ ಬಹುಮತದೊಂದಿಗೆ ಪ್ರಧಾನ ಮಂತ್ರಿ ಸ್ಥಾನವನ್ನು ಪಡೆದುಕೊಂಡ ನಂತರ, ಈಗ ಸಂವಿಧಾನದ 76 (4) ವಿಧಿ ಪ್ರಕಾರ ಕೆಳಮನೆಯಿಂದ 30 ದಿನಗಳಲ್ಲಿ ವಿಶ್ವಾಸ ಮತವನ್ನು ಗೆಲ್ಲಬೇಕಾಗುತ್ತದೆ.
ಡಿಸೆಂಬರ್ 11, 1954 ರಂದು ಪೋಖರಾ ಬಳಿಯ ಕಸ್ಕಿ ಜಿಲ್ಲೆಯ ಧಿಕುರ್ಪೋಖಾರಿಯಲ್ಲಿ ಜನಿಸಿದ ಪ್ರಚಂಡ ಅವರು ಸುಮಾರು 13 ವರ್ಷಗಳ ಕಾಲ ಭೂಗತರಾಗಿದ್ದರು. ಸಿಪಿಎನ್-ಮಾವೋವಾದಿಗಳು ಶಾಂತಿಯುತ ರಾಜಕೀಯವನ್ನು ಅಳವಡಿಸಿಕೊಂಡಾಗ ದಶಕದ ಸಶಸ್ತ್ರ ದಂಗೆಯನ್ನು ಕೊನೆಗೊಳಿಸಿ ಅವರು ಮುಖ್ಯವಾಹಿನಿಯ ರಾಜಕೀಯಕ್ಕೆ ಸೇರಿದರು. ಅವರು 1996 ರಿಂದ 2006 ರವರೆಗೆ ದಶಕದ ಸಶಸ್ತ್ರ ಹೋರಾಟವನ್ನು ಮುನ್ನಡೆಸಿದರು, ಇದು ಅಂತಿಮವಾಗಿ ನವೆಂಬರ್ 2006 ರಲ್ಲಿ ಸಮಗ್ರ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಕೊನೆಗೊಂಡಿತು. ಇದಕ್ಕೂ ಮೊದಲು ಮಾಜಿ ಪ್ರಧಾನಿ ಒಲಿ ಅವರ ನಿವಾಸದಲ್ಲಿ ನಿರ್ಣಾಯಕ ಸಭೆ ನಡೆದಿತ್ತು. ಅಲ್ಲಿ ಸಿಪಿಎನ್-ಮಾವೋವಾದಿ ಕೇಂದ್ರ ಮತ್ತು ಇತರ ಸಣ್ಣ ಪಕ್ಷಗಳು ‘ಪ್ರಚಂಡ’ ನೇತೃತ್ವದಲ್ಲಿ ಸರ್ಕಾರ ರಚಿಸಲು ಒಪ್ಪಿಕೊಂಡವು.
ಸರದಿ ಆಧಾರದ ಮೇಲೆ ಸರ್ಕಾರವನ್ನು ಮುನ್ನಡೆಸಲು ಪ್ರಚಂಡ ಮತ್ತು ಓಲಿ ನಡುವೆ ಒಪ್ಪಂದ ಉಂಟಾಗಿದೆ. ಒಲಿ ಅವರ ಬೇಡಿಕೆಯಂತೆ ಮೊದಲ ಅವಕಾಶದಲ್ಲಿ ಪ್ರಚಂಡ ಅವರನ್ನು ಪ್ರಧಾನಿ ಮಾಡಲು ಒಪ್ಪಿಕೊಂಡರು. ಅತಿದೊಡ್ಡ ಪಕ್ಷವಾಗಿ ನೇಪಾಳಿ ಕಾಂಗ್ರೆಸ್ ಅಧ್ಯಕ್ಷರ ಗಡುವಿನೊಳಗೆ ಸಂವಿಧಾನದ 76 (2) ನೇ ವಿಧಿಯ ಪ್ರಕಾರ ತನ್ನ ನಾಯಕತ್ವದಲ್ಲಿ ಸರ್ಕಾರವನ್ನು ರಚಿಸಲು ವಿಫಲವಾಗಿದೆ. ಈಗ, 165 ಶಾಸಕರ ಬೆಂಬಲದೊಂದಿಗೆ ಪ್ರಚಂಡ ನೇತೃತ್ವದಲ್ಲಿ ಹೊಸ ಸರ್ಕಾರವನ್ನು ರಚಿಸಲು ಸಿಪಿಎನ್-ಯುಎಂಎಲ್ ಉಪಕ್ರಮವನ್ನು ತೆಗೆದುಕೊಂಡಿದೆ ಎಂದು ಸಿಪಿಎನ್-ಯುಎಂಎಲ್ ಪ್ರಧಾನ ಕಾರ್ಯದರ್ಶಿ ಶಂಕರ್ ಪೋಖರೆಲ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.