Rahul Dravid: ಕ್ಲೀನ್​ಸ್ವೀಪ್ ನಡುವೆ ಎದುರಾಳಿ ಆಟಗಾರರನ್ನು ಮರೆಯದೆ ರಾಹುಲ್ ದ್ರಾವಿಡ್: ಏನಂದ್ರು ಗೊತ್ತೇ? | Rahul Dravid talking post match presentation He said after WC final its not easy for New Zealand Players


Rahul Dravid: ಕ್ಲೀನ್​ಸ್ವೀಪ್ ನಡುವೆ ಎದುರಾಳಿ ಆಟಗಾರರನ್ನು ಮರೆಯದೆ ರಾಹುಲ್ ದ್ರಾವಿಡ್: ಏನಂದ್ರು ಗೊತ್ತೇ?

Rahul Dravid India vs New Zealand

ಐಸಿಸಿ ಟಿ20 ವಿಶ್ವಕಪ್ (T20I World Cup) ಮುಕ್ತಾಯದ ಬೆನ್ನಲ್ಲೇ ಶುರುವಾದ ಭಾರತ-ನ್ಯೂಜಿಲೆಂಡ್ (India vs New Zealand) ನಡುವಣ ಟಿ20 ಸರಣಿ ಉಭಯ ತಂಡಗಳಿಗೆ ಮುಖ್ಯವಾಗಿತ್ತು. ಟಿ20 ವಿಶ್ವಕಪ್ ಫೈನಲ್​ನಲ್ಲಿ ನ್ಯೂಜಿಲೆಂಡ್ ಸೋತರೆ ಭಾರತ (Team India) ಸೂಪರ್ 12 ಹಂತದಲ್ಲೇ ಹೊರಬಿದ್ದಿತು. ಈ ಸರಣಿಗೆ ಉಭಯ ತಂಡಗಳಲ್ಲೂ ಸಾಕಷ್ಟು ಬದಲಾವಣೆಗಳಾದವು. ಅನುಭವಿ ಆಟಗಾರರು ವಿಶ್ರಾಂತಿ ಪಡೆದುಕೊಂಡಿದ್ದರು. ಹೀಗಾಗಿ ಯುವ ಪಡೆಯ ಜದ್ದಾಜಿದ್ದಿಯ ಆಟ ನಿರೀಕ್ಷಿಸಲಾಗಿತ್ತು. ಆದರೆ, ಇಲ್ಲಿ ನಡೆದಿದ್ದೇ ಬೇರೆ, ರೋಹಿತ್ ಶರ್ಮಾ (Rohit Sharma) ಪರಿಪೂರ್ಣ ನಾಯಕತ್ವದಲ್ಲಿ ನಡೆದ ಮೊದಲ ಟಿ20 ಸರಣಿಯಲ್ಲಿ ಕ್ವೀನ್ ಸ್ವೀಪ್ ಗೆಲುವು ದಾಖಲಿಸಿದೆ. ನೂತನ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಈ ಸಾಧನೆ ಮಾಡಿದೆ. ಈ ಮೂಲಕ ಕೋಚ್ ಆದ ಮೊದಲ ಸವಾಲಿನಲ್ಲೇ ದ್ರಾವಿಡ್ ಫುಲ್ ಮಾರ್ಕ್ಸ್ ಪಡೆದಿದ್ದಾರೆ. ನ್ಯೂಜಿಲೆಂಡ್ ಹೀನಾಯವಾಗಿ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿದೆ. ಇದರ ನಡುವೆ ಕೋಚ್ ರಾಹುಲ್ ದ್ರಾವಿಡ್ ಭಾರತೀಯ ಆಟಗಾರರಿಗೆ ಕಿವಿಮಾತು ಹೇಳಿ ನ್ಯೂಜಿಲೆಂಡ್ ಆಟಗಾರರನ್ನು (New Zealand Players) ಪ್ರಶಂಶಿಸಿದ್ದಾರೆ.

ಹೌದು, ಪಂದ್ಯ ಮುಗಿದ ಬಳಿಕ ಮಾತನಾಡಿದ ದ್ರಾವಿಡ್, ಟಿ20 ವಿಶ್ವಕಪ್ ಫೈನಲ್ ಮುಗಿಸಿದ ತಕ್ಷಣ ಟಿ20 ಸರಣಿ ಆಡುವುದು ಎದುರಾಳಿ ತಂಡಕ್ಕೆ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ. ನಾವು ದೊಡ್ಡ ಸಂಭ್ರಮ ಮಾಡುವ ಅಗತ್ಯವಿಲ್ಲ, ನಮ್ಮ ಕಾಲು ನೆಲದ ಮೇಲೇ ಇರಲಿ ಎಂಬುದು ದ್ರಾವಿಡ್ ಅಭಿಪ್ರಾಯ. “ಸರಣಿ ಗೆಲುವು ಸಾಧಿಸಿದ್ದು ಒಳ್ಳೆಯ ಸಂಗತಿ. ಪ್ರತಿಯೊಬ್ಬ ಆಟಗಾರ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಉತ್ತಮ ಆರಂಭ ಪಡೆದುಕೊಂಡಿದ್ದೇವೆ. ನಾವು ವಾಸ್ತವದ ಬಗ್ಗೆ ಅರಿತುಕೊಳ್ಳಬೇಕು. ನಮ್ಮ ಕಾಲು ನೆಲದ ಮೇಲೇ ಇರಲಿ. ಯಾಕಂದ್ರೆ ಟಿ20 ವಿಶ್ವಕಪ್ ಮುಗಿಸಿದ ಮೂರೇ ದಿನಗಳಲ್ಲಿ ಇಲ್ಲಿಗೆ ಬಂದು ಮತ್ತೊಂದು ಸರಣಿ ಆಡುವುದು ಸುಲಭವಲ್ಲ. ನ್ಯೂಜಿಲೆಂಡ್ ಆಟಗಾರರ ಶ್ರಮ ನಿಜಕ್ಕೂ ಪ್ರಶಂಶಿಸಬೇಕು. ಈ ಸರಣಿಯಿಂದ ನಾವು ಕೆಲವು ವಿಚಾರಗಳನ್ನು ಕಲಿತಿದ್ದೇವೆ. ಮುಂದೆ ಸಾಗಬೇಕಷ್ಟೆ” ಎಂದು ಹೇಳಿದ್ದಾರೆ.

“ಮುಂದಿನ 10 ತಿಂಗಳಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಲಿದ್ದೇವೆ. ಯುವ ಆಟಗಾರರ ಪ್ರದರ್ಶನ ನೋಡಲು ಖುಷಿಯಾಗುತ್ತದೆ. ಕಳೆದ ಕೆಲವು ತಿಂಗಳುಗಳಿಂದ ಕ್ರಿಕೆಟ್ ಆಡದ ಆಟಗಾರರಿಗೆ ನಾವು ಅವಕಾಶ ನೀಡುವತ್ತ ಗಮನ ಹರಿಸುತ್ತಿದ್ದೇವೆ. ಅವರನ್ನು ಮುಂದಿನ ದಿನಕ್ಕೆ ಸಜ್ಜು ಮಾಡುವ ಕೆಲಸ ಪ್ರಗತಿಯಲ್ಲಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್ ವರೆಗೂ ನಮಗೆ ಸಮಯವಿದೆ. ಈಗಿರುವ ತಂಡದಲ್ಲಿರುವ ಕೇವಲ 3-4 ಆಟಗಾರರು ಮಾತ್ರ ಮುಂದಿನ ಟೆಸ್ಟ್​ ಸರಣಿಗೆ ತೆರಳುತ್ತಾರೆ” ಎಂದು ದ್ರಾವಿಡ್ ಹೇಳಿದ್ದಾರೆ.

ಕೋಲ್ಕತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆದ ಮೂರನೇ ಟಿ20 ಪಂದ್ಯವನ್ನು ಭಾರತ 73 ರನ್​ಗಳ ಭಾರೀ ಅಂತರಿಂದ ಗೆಲುವು ಸಾಧಿಸಿತು. ಇದರೊಂದಿಗೆ ಟಿ20 ಸರಣಿಯನ್ನ ಭಾರತ 3-0 ಯಿಂದ ಗೆದ್ದುಕೊಂಡಿತು. ಗೆಲ್ಲಲು 185 ರನ್ ಗುರಿ ಪಡೆದ ನ್ಯೂಜಿಲೆಂಡ್ ತಂಡ ಕೇವಲ 111 ರನ್​ಗೆ ಆಲೌಟ್ ಆಯಿತು. 3 ವಿಕೆಟ್ ಕಿತ್ತ ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ನಾಯಕ ರೋಹಿತ್ ಶರ್ಮಾ ಸರಣಿಶ್ರೇಷ್ಠ ತಮ್ಮದಾಗಿಸಿದರು.

Rohit Sharma: ವೈಟ್​ವಾಷ್ ಬಳಿಕ ನಾಯಕ ರೋಹಿತ್ ಶರ್ಮಾ ಆಡಿದ ಒಂದೊಂದು ಮಾತು ನೀವೇ ಕೇಳಿ

India vs New Zealand: ಕಿವೀಸ್ ಕಿವಿ ಹಿಂಡಿದ ರೋಹಿತ್ ಪಡೆ: ಭಾರತೀಯರ ಮಾರಕ ದಾಳಿಗೆ ದಂಗಾದ ನ್ಯೂಜಿಲೆಂಡ್

(Rahul Dravid talking post-match presentation He said after WC final its not easy for New Zealand Players)

TV9 Kannada


Leave a Reply

Your email address will not be published. Required fields are marked *