Rahul Gandhi: ‘ಮಾತುಗಳನ್ನು ಕೇಳಿಸಿಕೊಳ್ಳುವ ಮನೋಭಾವ ಪ್ರಧಾನಿಯವರಿಗಿಲ್ಲ’; ಲಂಡನ್​ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ  | Rahul Gandhi says in London that PM does not listen and slams BJP and RSS details inside


Rahul Gandhi: ‘ಮಾತುಗಳನ್ನು ಕೇಳಿಸಿಕೊಳ್ಳುವ ಮನೋಭಾವ ಪ್ರಧಾನಿಯವರಿಗಿಲ್ಲ’; ಲಂಡನ್​ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ 

ಲಂಡನ್​ನಲ್ಲಿ ನಡೆದ ‘ಐಡಿಯಾಸ್ ಫಾರ್ ಇಂಡಿಯಾ’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ

Image Credit source: Twitter

PM Modi | BJP: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಲಂಡನ್​ನಲ್ಲಿ ವಾಗ್ದಾಳಿ ನಡೆಸಿರುವ ರಾಹುಲ್, ‘‘ನಾನು ಕೇಳಲು ಬಯಸುತ್ತೇನೆ ಎಂಬ ಮನೋಭಾವವನ್ನು ಪ್ರಧಾನಿಯಾದವರು ಹೊಂದಿರಬೇಕು. ಆದರೆ ನಮ್ಮ ಪ್ರಧಾನಿ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ’’ ಎಂದು ಟೀಕಿಸಿದ್ದಾರೆ.

ಭಾರತವು ಮಾತನಾಡಲು ಅವಕಾಶವಿಲ್ಲದ ದೇಶವಾಗಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಲಂಡನ್‌ನಲ್ಲಿ ನಡೆದ ‘ಐಡಿಯಾಸ್ ಫಾರ್ ಇಂಡಿಯಾ’ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ರಾಹುಲ್, ‘‘ನಾನು ಕೇಳಲು ಬಯಸುತ್ತೇನೆ ಎಂಬ ಮನೋಭಾವವನ್ನು ಪ್ರಧಾನಿಯಾದವರು ಹೊಂದಿರಬೇಕು. ಆದರೆ ನಮ್ಮ ಪ್ರಧಾನಿ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ’’ ಎಂದು ಟೀಕಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘‘ಮಾತನಾಡಲು ಅನುಮತಿಸದ ದೇಶವನ್ನು ಮತ್ತು ಮುಕ್ತವಾಗಿ ಮಾತನಾಡದ ಪ್ರಧಾನಿಯನ್ನು ನಾವು ಹೊಂದಲು ಸಾಧ್ಯವಿಲ್ಲ’’ ಎಂದಿದ್ದಾರೆ.

ರಾಹುಲ್ ಮಾತುಗಳು ಇಲ್ಲಿವೆ:

ಚರ್ಚೆಯ ವೇಳೆ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಘಟನೆಗಳನ್ನೂ ಟೀಕಿಸಿದ್ದಾರೆ. ‘‘ಭಾರತವೆಂದರೆ ಅದರ ಜನರು ಎಂದು ನಾವು ನಂಬುತ್ತೇವೆ. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ಭಾರತವು ಕೇವಲ ಭೌಗೋಳಿಕ ಪ್ರದೇಶ ಎಂದು ನಂಬುತ್ತದೆ. ಇದು ‘ಸೋನೆ ಕಿ ಚಿಡಿಯಾ’ (ಚಿನ್ನದ ಹಕ್ಕಿ) ಆಗಿದ್ದು, ಅದರ ಪ್ರಯೋಜನಗಳು ಕೆಲವರಿಗೆ ಮಾತ್ರ ಸಿಗುತ್ತವೆ. ನಮ್ಮ ಪ್ರಕಾರ ನೀವು ದಲಿತರಾಗಿದ್ದರೂ, ಬ್ರಾಹ್ಮಣರಾಗಿದ್ದರೂ ಎಲ್ಲರಿಗೂ ಸಮಾನ ಪ್ರವೇಶ ಇರಬೇಕು’’ ಎಂದು 51 ವರ್ಷದ ರಾಹುಲ್ ಹೇಳಿದ್ದಾರೆ.

ಭಾರತದ ಪ್ರಜಾಪ್ರಭುತ್ವವು ಜಗತ್ತಿನ ಕೇಂದ್ರ ಆಧಾರವಾಗಿದೆ ಎಂದ ರಾಹುಲ್, ‘‘ಭಾರತದಲ್ಲಿನ ಪ್ರಜಾಪ್ರಭುತ್ವವು ಜಾಗತಿಕವಾಗಿ ಒಳ್ಳೆಯದು. ಇದು ನಮ್ಮ ಗ್ರಹಕ್ಕೇ ಕೇಂದ್ರ ಆಧಾರವಾಗಿದೆ. ಏಕೆಂದರೆ ನಾವು ಪ್ರಜಾಪ್ರಭುತ್ವವನ್ನು ಹೊಂದಿರುವ ಪ್ರಮಾಣದಲ್ಲಿ ಅದನ್ನು ಸರಿಯಾಗಿ ನಿರ್ವಹಿಸಿದವರು ನಾವು ಮಾತ್ರ. ಒಂದುವೇಳೆ ಅದು ಬಿರುಕು ಬಿಟ್ಟರೆ ಜಗತ್ತಿಗೆ ತೊಂದರೆಯಾಗುತ್ತದೆ. ಅದನ್ನೇ ಅಮೇರಿಕಾ ಈಗ ಅರಿತುಕೊಳ್ಳುತ್ತಿದೆ’’ ಎಂದು ಹೇಳಿದ್ದಾರೆ.

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದಿರುವ ರಾಹುಲ್ ‘ಸಂವಾದಗಳನ್ನು ನಡೆಸಲು ಅನುಮತಿಸುವ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *