Rajamouli Paid Huge Money To Get Into The Oscar Award Function Hall | Rajamouli: ಆಸ್ಕರ್ ಹಾಲ್​ನ ಕೊನೆ ಸಾಲಲ್ಲಿ ಕೂರಲು ಭಾರಿ ಮೊತ್ತ ಖರ್ಚು ಮಾಡಿದ ರಾಜಮೌಳಿ


ರಾಜಮೌಳಿ ಹಾಗೂ ತಂಡ, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದ ಡಾಲ್ಬಿ ಥೀಯೇಟರ್​ನಲ್ಲಿ ಕೂರಲು ದೊಡ್ಡ ಮೊತ್ತದ ಹಣವನ್ನೇ ಖರ್ಚು ಮಾಡಿದೆ!

ರಾಜಮೌಳಿ (Rajamouli) ನಿರ್ದೇಶನದ ಆರ್​ಆರ್​ಆರ್ ಸಿನಿಮಾ ಭಾರತಕ್ಕೆ ಮೊದಲ ಆಸ್ಕರ್ (Oscar 2023) ತಂದುಕೊಟ್ಟಿದೆ. ಸಿನಿಮಾದ ನಾಟು-ನಾಟು ಹಾಡು ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿ ಆಸ್ಕರ್ ಗೆದ್ದಿದೆ. ಸಿನಿಮಾವನ್ನು ಆಸ್ಕರ್​ಗೆ ನಾಮಿನೇಟ್ ಮಾಡಿಸಲು ನಡೆಸಿದ ಕ್ಯಾಂಪೇನ್​ಗಾಗಿ ಕೋಟಿ-ಕೋಟಿ ಖರ್ಚು ಮಾಡಿದ್ದ ರಾಜಮೌಳಿ ಹಾಗೂ ತಂಡ, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದ ಡಾಲ್ಬಿ ಥೀಯೇಟರ್​ನಲ್ಲಿ ಕೂರಲು ಸಹ ದೊಡ್ಡ ಮೊತ್ತದ ಹಣವನ್ನೇ ಖರ್ಚು ಮಾಡಿದೆ!

ಆಸ್ಕರ್ ನಾಮಿನೇಟ್ ಆದವರಿಗಷ್ಟೆ ಪ್ರಶಸ್ತಿಯ ಆಯೋಜಕರಾದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ ಆಂಡ್ ಸೈನ್ಸ್​ ನವರು ಟಿಕೆಟ್ ಕಳಿಸುತ್ತಾರೆ. ಹಾಗಾಗಿ ನಾಮಿನೇಟ್ ಆಗಿದ್ದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಹಾಗೂ ಚಿತ್ರ ಸಾಹಿತಿ ಚಂದ್ರಭೋಸ್ ಹಾಗೂ ಅವರ ಕುಟುಂಬದವರಿಗಷ್ಟೆ ವಿಮಾನ ಟಿಕೆಟ್ ಹಾಗೂ ಆಸ್ಕರ್ ಹಾಲ್​ಗೆ ಉಚಿತ ಎಂಟ್ರಿ ನೀಡಲಾಗಿತ್ತು. ರಾಜಮೌಳಿ, ರಾಮ್ ಚರಣ್, ಜೂ ಎನ್​ಟಿಆರ್ ಅವರ ಕುಟುಂಬಗಳಿಗೆ ಟಿಕೆಟ್ ನೀಡಿರಲಿಲ್ಲ. ಅವರುಗಳು ಸ್ವಂತ ಖರ್ಚಿನಲ್ಲಿಯೇ ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದರು. ಇದಕ್ಕಾಗಿ ದೊಡ್ಡ ಮೊತ್ತವನ್ನೇ ಖರ್ಚು ಮಾಡಿದ್ದಾರೆ.

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ವೀಕ್ಷಿಸಲು, ರೆಡ್ ಕಾರ್ಪೆಟ್ ಇವೆಂಟ್ ನಲ್ಲಿ ಭಾಗವಹಿಸಲು, ಆಫ್ಟರ್ ಪಾರ್ಟಿ ಅಟೆಂಡ್ ಮಾಡಲು ಇನ್ನಿತರೆಗಳಿಗೆ ಭಾರಿ ದೊಡ್ಡ ಮೊತ್ತದ ಟಿಕೆಟ್ ಅನ್ನು ಖರೀದಿಸಬೇಕಾಗುತ್ತದೆ. ಈ ಹಿಂದಿಗಿಂತಲೂ ಈ ಬಾರಿ ಟಿಕೆಟ್ ಬೆಲೆ ಹೆಚ್ಚು ನಿಗದಿಪಡಿಸಲಾಗಿತ್ತು. ಹಾಗಾಗಿ ರಾಜಮೌಳಿ ಬರೋಬ್ಬರಿ 25000 ಡಾಲರ್ ನೀಡಿ ಟಿಕೆಟ್ ಖರೀದಿ ಮಾಡಿದ್ದರಂತೆ. ಭಾರತದ ರೂಪಾಯಿ ಲೆಕ್ಕದಲ್ಲಿ ಒಂದು ಟಿಕೆಟ್​ಗೆ 20.60 ಲಕ್ಷ ಹಣ ತೆತ್ತಿದ್ದಾರೆ ರಾಜಮೌಳಿ. ರಾಜಮೌಳಿಯವರು ತಮ್ಮ ಪತ್ನಿ ಹಾಗೂ ಪುತ್ರ ಹಾಗೂ ಸೊಸೆಯೊಡನೆ ಇವೆಂಟ್​ಗೆ ಹೋಗಿದ್ದರಾದ್ದರಿಂದ ಸುಮಾರು 80 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕೇವಲ ಟಿಕೆಟ್​ಗೆ ಖರ್ಚು ಮಾಡಿದ್ದಾರೆ.

20 ಲಕ್ಷ ಒಂದು ಟಿಕೆಟ್​ಗೆ ನೀಡಿದ್ದರೂ ಸಹ ಅದು ವಿಐಪಿ ಟಿಕೆಟ್ ಆಗಿರಲಿಲ್ಲ ವಿಐಪಿ ಟಿಕೆಟ್ ಪಡೆಯಲು 40 ಲಕ್ಷಕ್ಕಿಂತಲೂ ಹೆಚ್ಚು ಹಣ ತೆರಬೇಕಿತ್ತು. ಇದೇ ಕಾರಣಕ್ಕೆ ರಾಜಮೌಳಿ ಹಾಗೂ ಅವರ ಕುಟುಂಬ ಸದಸ್ಯರು ಆಸ್ಕರ್ ನಡೆಯುತ್ತಿದ್ದ ಹಾಲ್​ನ ಕೊನೆಯ ಸಾಲಿನಲ್ಲಿ ಕೂತು ಇವೆಂಟ್ ಅನ್ನು ಕಣ್​ತುಂಬಿಕೊಂಡರು. ರಾಜಮೌಳಿ ಮಾತ್ರವಲ್ಲ ರಾಮ್ ಚರಣ್ ಹಾಗೂ ಜೂ ಎನ್​ಟಿಆರ್ ಅವರುಗಳು ಸಹ ಭಾರಿ ಮೊತ್ತವನ್ನು ತೆತ್ತು ಆಸ್ಕರ್ ಟಿಕೆಟ್ ಖರೀದಿ ಮಾಡಿದ್ದರು.

ರಾಜಮೌಳಿ ಹಾಗೂ ಅವರ ಕುಟುಂಬಕ್ಕೆ ಹಾಲ್​ನ ಕೊನೆಯ ಸಾಲಿನಲ್ಲಿ ಸೀಟ್ ಕೊಟ್ಟಿದ್ದಕ್ಕೆ ಭಾರತದ ನೆಟ್ಟಿಗರು ಆಕ್ಷೇಪ ಸಹ ವ್ಯಕ್ತಪಡಿಸಿದ್ದರು. ಏನೇ ಆಗಲಿ ರಾಜಮೌಳಿಯ ಪ್ರಯತ್ನದ ಫಲವಾಗಿ ಆರ್​ಆರ್​ಆರ್​ ಸಿನಿಮಾದ ಹಾಡಿಗೆ ಆಸ್ಕರ್ ಬಂದಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *