Rajinikanth: ‘ಅಪ್ಪು ದೇವರ ಮಗು’ ಎಂದು ಕನ್ನಡದಲ್ಲೇ ಮಾತಾಡಿದ ರಜನಿಕಾಂತ್​; ಮಳೆ ಸುರಿದರೂ ಕದಲಲಿಲ್ಲ ತಲೈವಾ – Rajinikanth speech in Karnataka Ratna Award ceremony for Puneeth Rajkumar at Vidhana Soudha Bengaluru


Karnataka Ratna Puneeth Rajkumar: ರಜನಿಕಾಂತ್​ ಅವರು ಕನ್ನಡದಲ್ಲೇ ಮಾತನಾಡಿ ಕರುನಾಡಿನ ಅಭಿಮಾನಿಗಳ ಮನ ಗೆದ್ದಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ವ್ಯಕ್ತಿತ್ವವನ್ನು ತಮ್ಮದೇ ಮಾತುಗಳಲ್ಲಿ ವರ್ಣಿಸಿದ್ದಾರೆ.

Rajinikanth: ‘ಅಪ್ಪು ದೇವರ ಮಗು’ ಎಂದು ಕನ್ನಡದಲ್ಲೇ ಮಾತಾಡಿದ ರಜನಿಕಾಂತ್​; ಮಳೆ ಸುರಿದರೂ ಕದಲಲಿಲ್ಲ ತಲೈವಾ

ರಜನಿಕಾಂತ್

ಕನ್ನಡ ನಾಡಿನ ಹೆಮ್ಮೆಯ ನಟ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರಿಗೆ ಇಂದು (ನ.1) ‘ಕರ್ನಾಟಕ ರತ್ನ’ ಪ್ರಶಸ್ತಿ (Karnataka Ratna) ಪ್ರದಾನ ಮಾಡಲಾಗಿದೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಸಮಾರಂಭ ನಡೆದಿದೆ. ಈ ಕಾರ್ಯಕ್ರಮಕ್ಕೆ ಸೂಪರ್​ ಸ್ಟಾರ್​ ರಜನಿಕಾಂತ್​ ಹಾಗೂ ಜೂನಿಯರ್​ ಎನ್​ಟಿಆರ್​ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಈ ವೇದಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಬಗ್ಗೆ ರಜನಿಕಾಂತ್​ (Rajinikanth) ಅವರು ಮನಸಾರೆ ಮಾತನಾಡಿದ್ದಾರೆ. ‘67ನೇ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ 7 ಕೋಟಿ ಕನ್ನಡದ ಜನತೆಗೆ ಇಲ್ಲಿಂದಲೇ ನನ್ನ ರಾಜ್ಯೋತ್ಸವದ ಶುಭಾಶಯಗಳು’ ಎನ್ನುವ ಮೂಲಕ ರಜನಿಕಾಂತ್​ ಮಾತು ಆರಂಭಿಸಿದರು. ಕನ್ನಡದಲ್ಲೇ ಮಾತನಾಡಿ ಅವರು ಕರುನಾಡಿನ ಅಭಿಮಾನಿಗಳ ಮನ ಗೆದ್ದಿದ್ದಾರೆ.

‘ಎಲ್ಲರೂ ಜಾತಿ-ಮತ ಎಂಬ ಭೇದ ಇಲ್ಲದೇ ಸಹೋದರರಂತೆ ಬಾಳಬೇಕು ಎಂದು ರಾಜರಾಜೇಶ್ವರಿ, ಅಲ್ಲಾ, ಜೀಸಸ್​ ಬಳಿ ಕೇಳಿಕೊಳ್ಳುತ್ತೇನೆ’ ಎಂದು ಸಹೋದರತ್ವದ ಆಶಯವನ್ನು ರಜನಿ ಬಿತ್ತಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದ ಜೊತೆ ರಜನಿಕಾಂತ್​ ಅವರಿಗೆ ಇರುವ ಒಡನಾಟ ತುಂಬ ವರ್ಷಗಳದ್ದು. ಅಪ್ಪು ವ್ಯಕ್ತಿತ್ವನ್ನು ಅವರು ಕೊಂಡಾಡಿದ್ದಾರೆ.

‘ಅಪ್ಪು ದೇವರ ಮಗು. ಆ ಮಗು ಒಂದಷ್ಟು ದಿನ ನಮ್ಮ ಜೊತೆ ಇದ್ದು, ಆಟ ಆಡಿ ತನ್ನ ಪ್ರತಿಭೆಯನ್ನು ತೋರಿಸಿ ಮತ್ತೆ ದೇವರ ಬಳಿ ಹೋಗಿ ಸೇರಿದೆ. ಈಗ ಮಳೆ ಬರುತ್ತಿದೆ. ಹಾಗಾಗಿ ಜಾಸ್ತಿ ಮಾತನಾಡಲು ಆಗುತ್ತಿಲ್ಲ. ನಾನು ಇನ್ನೊಮ್ಮೆ ಬಂದು ಅಪ್ಪು ಬಗ್ಗೆ ಮಾತನಾಡುತ್ತೇನೆ. ಇದೇ ವೇದಿಕೆ ಮೇಲೆ ಡಾ. ರಾಜ್​ಕುಮಾರ್​ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಆಗಲೂ ಸಹ ಮಳೆ ಬಂದಿತ್ತು ಅಂತ ಕೇಳ್ಪಟ್ಟಿದ್ದೇನೆ. ಶ್ರೇಷ್ಠ ಪ್ರಶಸ್ತಿಯನ್ನು ಪುನೀತ್​ ಅವರಿಗೆ ನೀಡಿದ್ದಕ್ಕಾಗಿ ಎಲ್ಲ ಅಭಿಮಾನಿಗಳ ಪರವಾಗಿ ಕರ್ನಾಟಕ ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ’ ಎಂದು ರಜನಿಕಾಂತ್​ ಹೇಳಿದ್ದಾರೆ.

ಪುನೀತ್​ ರಾಜ್​ಕುಮಾರ್​ ಪರವಾಗಿ ಅವರ ಪತ್ನಿ ಅಶ್ವಿನಿ ಅವರು ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಸ್ವೀಕರಿಸಿದರು. ರಜನಿಕಾಂತ್​, ಸುಧಾ ಮೂರ್ತಿ, ಜೂನಿಯರ್​ ಎನ್​ಟಿಆರ್​, ಸಿಎಂ ಬೊಮ್ಮಾಯಿ ಅವರು ಜತೆಗೂಡಿ ಈ ಪ್ರಶಸ್ತಿಯನ್ನು ನೀಡಿದರು. ಕರ್ನಾಟಕ ಸರ್ಕಾರಕ್ಕೆ ಮತ್ತು ಬಂದಿರುವ ಗಣ್ಯರಿಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಹಾಗೂ ಶಿವರಾಜ್​ಕುಮಾರ್​ ಅವರು ಧನ್ಯವಾದ ತಿಳಿಸಿದರು. ಸಾವಿರಾರು ಅಭಿಮಾನಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.