Rajinikanth: ನೆಟ್​​ಫ್ಲಿಕ್ಸ್​​ನಲ್ಲೂ ರಜಿನಿ ಹವಾ; ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಬಳಿಕ ಒಟಿಟಿಯಲ್ಲೂ ದಾಖಲೆ ಬರೆದ ತಲೈವಾ! | Rajinikanth starring Annatthe occupies 3 spots in top 10 trending movies of netflix


Rajinikanth: ನೆಟ್​​ಫ್ಲಿಕ್ಸ್​​ನಲ್ಲೂ ರಜಿನಿ ಹವಾ; ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಬಳಿಕ ಒಟಿಟಿಯಲ್ಲೂ ದಾಖಲೆ ಬರೆದ ತಲೈವಾ!

ರಜನಿಕಾಂತ್​

ಸೂಪರ್​ ಸ್ಟಾರ್ ರಜಿನಿಕಾಂತ್ ಬರೆಯದ ದಾಖಲೆಗಳು ಯಾವುದಾದರೂ ಇವೆಯೇ ಎಂಬ ಪ್ರಶ್ನೆ ಯಾರಾದರೂ ಕೇಳಿದರೆ ಬಹುಶಃ ಉತ್ತರಿಸುವುದು ಕಷ್ಟ. ಆದ್ದರಿಂದಲೇ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ತಲೈವಾ’ ಎನ್ನುತ್ತಾರೆ. ಅಲ್ಲದೇ ರಜಿನಿ ಚಿತ್ರಗಳ ಬಿಡುಗಡೆಯೆಂದರೆ ದೇಶದೆಲ್ಲೆಡೆ ಇರುವ ಅಭಿಮಾನಿಗಳಿಗೆ ದೊಡ್ಡ ಕ್ರೇಜ್. ಚಿತ್ರದ ಬಿಡುಗಡೆಯನ್ನು ಫ್ಯಾನ್ಸ್ ಹಬ್ಬದಂತೆ ಸಂಭ್ರಮಿಸಿ ಆಚರಿಸುತ್ತಾರೆ. ಚಿತ್ರರಂಗದಲ್ಲಿ 45 ವರ್ಷದಿಂದ ವಿವಿಧ ಪಾತ್ರ, ಚಿತ್ರಗಳ ಮೂಲಕ ಗುರುತಿಸಿಕೊಂಡು, ಅಭಿಮಾನಿಗಳನ್ನು ಸಂಪಾದಿಸಿದ ರಜಿನಿ, ಇದೀಗ ಒಟಿಟಿಯಲ್ಲೂ ದಾಖಲೆ ಬರೆಯುತ್ತಿದ್ದಾರೆ. ರಜಿನಿ ಅಭಿನಯದ ‘ಅಣ್ಣಾಥೆ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ತಿಂಗಳೊಳಗೆ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆಯಾಗಿದೆ. ಒಟಿಟಿಯ ವೀಕ್ಷಕರೂ ಅಣ್ಣಾಥೆಗೆ ಫಿದಾ ಆಗಿದ್ದು, ನೆಟ್​ಫ್ಲಿಕ್ಸ್ ಟ್ರೆಂಡಿಂಗ್​ನಲ್ಲಿ ‘ಅಣ್ಣಾಥೆ’ ಕಾಣಿಸಿಕೊಂಡಿದೆ. 

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಅಣ್ಣಾಥೆ’ ಚಿತ್ರ ಕೇವಲ ಎರಡು ದಿನಗಳಲ್ಲಿ ₹ 100 ಕೋಟಿ ಗಳಿಕೆ ಮಾಡಿದೆ ಎಂದು ವರದಿಯಾಗಿತ್ತು. ಚಿತ್ರ ಇದುವರೆಗೆ ಒಟ್ಟಾರೆ ₹ 250 ಕೋಟಿಗೂ ಅಧಿಕ ಮೊತ್ತವನ್ನು ಗಲ್ಲಾಪೆಟ್ಟಿಗೆಯಲ್ಲಿ ಬಾಚಿಕೊಂಡಿದೆ. ಈ ಮೂಲಕ ವರ್ಷದ ಅತ್ಯಂತ ದೊಡ್ಡ ಹಿಟ್ ಚಿತ್ರವಾಗಿ ದಾಖಲಾಗಿದೆ. ಇದೀಗ ನೆಟ್​ಫ್ಲಿಕ್ಸ್​ನಲ್ಲಿ ಅಣ್ಣಾಥೆ ಬಿಡುಗಡೆಯಾಗಿದ್ದು, ಮತ್ತೊಂದು ವೈಶಿಷ್ಟ್ಯಪೂರ್ಣ ಸಾಧನೆ ಮಾಡಿದೆ.

ನೆಟ್​ಫ್ಲಿಕ್ಸ್​ನಲ್ಲಿ ಬಳಕೆದಾರರು ಹೆಚ್ಚು ಇಷ್ಟು ಪಟ್ಟು ನೋಡುವ ಚಿತ್ರಗಳು ಹಾಗೂ ಅತೀ ಹೆಚ್ಚು ವೀಕ್ಷಣೆ ಕಂಡ ಚಿತ್ರಗಳು ಟ್ರೆಂಡಿಂಗ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ಆಧಾರದಲ್ಲಿ ನೆಟ್​ಫ್ಲಿಕ್ಸ್ ಟಾಪ್ 10 ಪಟ್ಟಿಯನ್ನು ಒದಗಿಸುತ್ತದೆ. ಅಚ್ಚರಿಯ ವಿಚಾರವೆಂದರೆ ‘ಅಣ್ಣಾಥೆ’ ಚಿತ್ರ ಟಾಪ್ 10ರಲ್ಲಿ ಮೂರು ಸ್ಥಾನಗಳನ್ನು ಬಾಚಿಕೊಂಡಿದೆ. ಅರೇ! ಒಂದೇ ಚಿತ್ರ ಮೂರು ಸ್ಥಾನ ಗಳಿಸಲು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ?

‘ಅಣ್ಣಾಥೆ’ ಚಿತ್ರ ನೆಟ್​ಫ್ಲಿಕ್ಸ್​ನಲ್ಲಿ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ತಮಿಳು ಆವೃತ್ತಿಯು ಟ್ರೆಂಡಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಹಿಂದಿ ಆವೃತ್ತಿಯು ಎರಡನೇ ಸ್ಥಾನ ಪಡೆದುಕೊಂಡಿದೆ. ತೆಲುಗು ಆವೃತ್ತಿಯೂ ಟಾಪ್ 10 ಒಳಗಿದ್ದು, 9 ನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ‘ಅಣ್ಣಾಥೆ’ಯ ಮೂರು ಆವೃತ್ತಿಗಳು ಟಾಪ್ 10 ಒಳಗೆ ಸ್ಥಾನ ಗಳಿಸಿದಂತಾಗಿದೆ. ಈ ಮೂಲಕ ರಜಿನಿ ಒಟಿಟಿಯಲ್ಲೂ ಹೊಸ ದಾಖಲೆ ಬರೆದಿದ್ದಾರೆ.

ಈ ಸಂಭ್ರಮದೊಂದಿಗೆ ರಜಿನಿ ಅಭಿಮಾನಿಗಳು ಮತ್ತೊಂದು ದೊಡ್ಡ ಸಂಭ್ರಮಕ್ಕೆ ತಯಾರಾಗುತ್ತಿದ್ದಾರೆ. ರಜಿನಿಯ ಹೊಸ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆಯಾ ಎಂದು ಕೇಳಬೇಡಿ. ಮುಂದಿನ ತಿಂಗಳು ರಜಿನಿ 71ಕ್ಕೆ ಕಾಲಿಡಲಿದ್ದಾರೆ. ಹೌದು. ಡಿಸೆಂಬರ್ 12 ರಜಿನಿ ಜನ್ಮದಿನ. ಅಭಿಮಾನಿಗಳು ಈಗಾಗಲೇ ಅದಕ್ಕೆ ತಯಾರಿಯನ್ನು ಆರಂಭಿಸಿದ್ದು, ನೆಚ್ಚಿನ ನಟನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ರಜಿನಿಯ ವಯಸ್ಸು ಜಾಸ್ತಿಯಾದಂತೆ, ಅವರ ಅಭಿಮಾನಿಗಳು, ಚಿತ್ರದ ನಿರೀಕ್ಷೆಯೂ ಮತ್ತಷ್ಟು ಎತ್ತರಕ್ಕೆ ಏರುತ್ತಿದೆ. ಬಹುಶಃ ಇದೇ ಕಾರಣದಿಂದಲೇ ರಜಿನಿಯನ್ನು ಅಭಿಮಾನಿಗಳು ಪ್ರೀತಿಯಿಂದ ‘ತಲೈವಾ’ ಎಂದು ಆರಾಧಿಸುವುದು!

ಇದನ್ನೂ ಓದಿ:

ಡಿಸೆಂಬರ್​ ಪೂರ್ತಿ ಮನರಂಜನೆಯ​ ಸುಗ್ಗಿ; ಪ್ರತಿ ವಾರವೂ ಬಿಗ್​ ರಿಲೀಸ್​: ಇಲ್ಲಿದೆ ಪೂರ್ತಿ ಲಿಸ್ಟ್​

‘ಮಾಫಿಯಾ’ ಚಿತ್ರಕ್ಕಾಗಿ ಗೆಟಪ್​ ಬದಲಿಸಿ ಕ್ಯಾನ್ಸರ್​ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಜ್ವಲ್​ ದೇವರಾಜ್​

TV9 Kannada


Leave a Reply

Your email address will not be published. Required fields are marked *