Rakhi Sawant: ರಾಖಿ ಸಾವಂತ್ ನಿಗೂಢ ದಾಂಪತ್ಯಕ್ಕೆ ತೆರೆ?; ಬಿಗ್ ಬಾಸ್​ನಲ್ಲಿ ಅಚ್ಚರಿಯ ಬೆಳವಣಿಗೆ | Rakhi Sawant enters Big Boss 15 with husband Ritesh and gives many special surprises


Rakhi Sawant: ರಾಖಿ ಸಾವಂತ್ ನಿಗೂಢ ದಾಂಪತ್ಯಕ್ಕೆ ತೆರೆ?; ಬಿಗ್ ಬಾಸ್​ನಲ್ಲಿ ಅಚ್ಚರಿಯ ಬೆಳವಣಿಗೆ

ಬಿಗ್​ ಬಾಸ್​ನಲ್ಲಿ ರಾಖಿ ಸಾವಂತ್

ಬಿಗ್ ಬಾಸ್ 15: ಬಿಗ್​ಬಾಸ್ (Big Boss 15) ವೀಕ್ಷಕರು ಅಚ್ಚರಿಯ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಕಾರಣ, ಇದುವರೆಗೆ ಯಾರೂ ಕೂಡ ರಾಖಿ ಸಾವಂತ್ (Rakhi Sawant) ಪತಿಯ ಮುಖವನ್ನು ನೋಡಿಲ್ಲ. ಇದೀಗ ನಟಿ ರಾಖಿ, ತಮ್ಮ ಪತಿಯೊಂದಿಗೆ ಮನೆ ಪ್ರವೇಶ ಮಾಡಿದ್ದು, ಸದಸ್ಯರು ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಅಲ್ಲದೇ ಮನೆಯೊಳಗೆ ತೆರಳುವ ವೇಳೆ ರಾಖಿ ಸಾವಂತ್, ಮದುವೆಯ ಸಮಯದಲ್ಲಿ ವರ ಧರಿಸುವ ಬಾಸಿಂಗ ಮಾದರಿಯ ಒಡವೆಯನ್ನು ಧರಿಸಿದ್ದಾರೆ. ಇದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದು, ರಾಖಿ ಎಂಟ್ರಿ ಬಿಗ್​ಬಾಸ್ ಮನೆಗೆ ಹೊಸ ಕಳೆ ತಂದುಕೊಟ್ಟಿದೆ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆಯೇ ರಾಖಿ ಸಾವಂತ್, ತಾವು ಪತಿಯೊಂದಿಗೆ ಬಂದಿದ್ಧಾಗಿ ಘೋಷಿಸಿದ್ದಾರೆ. ವಾಹಿನಿ ಈ ಕುರಿತು ಪ್ರೋಮೋ ಬಿಡುಗಡೆ ಮಾಡಿದ್ದು, ವೈರಲ್ ಆಗಿದೆ. ಆದರೆ ಪ್ರೋಮೋದಲ್ಲಿ ರಾಖಿ ರಿತೇಶ್ (Ritesh) ಅವರ ಮುಖವನ್ನು ತೋರಿಸಿಲ್ಲ.

ರಾಖಿ ಮನೆಯೊಳಗೆ ಆಗಮಿಸಿ, ತಮ್ಮ ಪತಿಯನ್ನು ಸ್ವಾಗತಿಸಿದ್ದಾರೆ. ಈ ವೇಳೆ ಅವರು, 1995ರಲ್ಲಿ ಬಿಡುಗಡೆಗೊಂಡ ‘ಯಾರಾನಾ’ ಚಿತ್ರದ ‘ಮೇರಾ ಪಿಯಾ ಘರ್ ಆಯಾ’ ಹಾಡನ್ನು ಹಾಡಿದ್ದಾರೆ. ನಂತರ ರಾಖಿ, ‘‘ನಿಮ್ಮನ್ನು ಇಲ್ಲಿ ಸ್ವಾಗತಿಸುತ್ತೇನೆ. 12 ದೇಶಗಳ ಪೊಲೀಸರು ಮತ್ತು ಇಡೀ ದೇಶ ನಿನಗಾಗಿ ಕಾಯುತ್ತಿದೆ’ ಎಂದು ತಮಾಷೆ ಮಾಡಿದ್ದಾರೆ. ಇದು ವಾಸ್ತವವಾಗಿ ‘ಡಾನ್’ ಚಿತ್ರದ ಡೈಲಾಗ್ಸ್ ಆಗಿದ್ದು, ತಮ್ಮ ಪತಿಯನ್ನು ಸಖತ್ ಮಾಸ್ ಆಗಿ ಸ್ವಾಗತಿಸಿದ್ದಾರೆ. ಅಲ್ಲದೇ ಪತಿಯನ್ನು ಮನೆಗೆ ಸ್ವಾಗತಿಸಿ, ಅವರ ಪಾದ ಮುಟ್ಟಿ ನಮಸ್ಕಾರವನ್ನೂ ಮಾಡಿದ್ದಾರೆ. ಅಷ್ಟಾಗಿಯೂ ಪ್ರೋಮೋದಲ್ಲಿ ಮುಖ ತೋರಿಸದೇ ಇರುವುದರಿಂದ ವೀಕ್ಷಕರು ಸಾಕಷ್ಟು ಕುತೂಹಲಗೊಂಡಿದ್ದಾರೆ.

ಬಿಗ್ ಬಾಸ್ ಪ್ರೇಮಿಗಳಿಗೆ ರಾಖಿ ಹೊಸಬರೇನೂ ಅಲ್ಲ. ಕಾರಣ, ಅವರು ಈ ಹಿಂದಿನ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ಅವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದಾರೋ ಅಥವಾ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೋ ಎಂಬುದನ್ನು ವಾಹಿನಿ ಇನ್ನೂ ಖಚಿತಪಡಿಸಿಲ್ಲ. ಕಳೆದ ವರ್ಷ ರಾಖಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾಗ, ಕ್ಯಾಮೆರಾ ಮುಂದೆ, ತಮ್ಮ ಸಹ ಸ್ಫರ್ಧಿಗಳಲ್ಲಿ ಪತಿ ರಿತೇಶ್ ಕುರಿತು ಸಾಕಷ್ಟು ಹೇಳಿಕೊಂಡಿದ್ದರು. ಅಲ್ಲದೇ ಅವರನ್ನು ಬಹಿರಂಗವಾಗಿ ಒಮ್ಮೆಯಾದರೂ ಎಲ್ಲರಿಗೂ ಪರಿಚಯಿಸಬೇಕು ಎಂದು ಅಲವತ್ತುಕೊಂಡಿದ್ದರು. ಆದರೆ ಅದು ಕಡೆಯ ಸೀಸನ್​ನಲ್ಲಿ ಸಾಧ್ಯವಾಗಿರಲಿಲ್ಲ.

ವಾಸ್ತವವಾಗಿ ರಾಖಿ ಮದುವೆ ಬಿಟೌನ್​ನಲ್ಲಿ ಸಖತ್ ಚರ್ಚೆಯ ವಿಷಯವಂತೂ ಹೌದು. ಕಾರಣ, ಈ ಹಿಂದೆ ಮದುವೆಯಾಗಿರುವುದಾಗಿ ರಾಖಿ ಬಹಿರಂಗಪಡಿಸಿ, ಮದುವೆಯ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಆದರೆ ಎಲ್ಲೂ ಪತಿಯ ಚಿತ್ರವನ್ನು ಕಾಣಿಸಿರಲಿಲ್ಲ. ಅಲ್ಲದೇ, ಹಲವು ಬಾರಿ ಪತಿಯ ಕುರಿತು ಬಹಿರಂಗವಾಗಿ ಟೀಕೆ ಮಾಡಿದ್ದೂ ಇದೆ. ಅಲ್ಲದೇ, ಪತಿ ರಿತೇಶ ಮದುವೆಯನ್ನು ಗುಟ್ಟಾಗಿಡಲು ಬಯಸಿದ್ದಾರೆ ಎಂದೂ ಅವರು ಹೇಳಿಕೊಂಡಿದ್ದರು. ಈ ಎಲ್ಲಾ ಕಾರಣದಿಂದ ರಾಖಿ ಅಭಿಮಾನಿಗಳಿಗೆ ಅವರ ಪತಿಯ ಕುರಿತು ಕುತೂಹಲವಂತೂ ಇದ್ದೇ ಇತ್ತು. ಇದೀಗ ವಾಹಿನಿ ಹೊಸ ಪ್ರೋಮೋ ಮೂಲಕ ಇದಕ್ಕೆ ತೆರೆ ಕಾಣಿಸಲು ಮುಂದಾಗಿದೆ. ಆದರೆ ಇದೂ ಕೂಡ ಅತಂತ್ರವಾಗಿ ಕೊನೆಗಾಣಲಿದೆಯೇ ಅಥವಾ, ರಾಖಿಯ ಪತಿಯ ಪರಿಚಯವಾಗಲಿದೆಯೇ ಎಂಬುದನ್ನು ಕಾದೇ ನೋಡಬೇಕಿದೆ.

ಇದನ್ನೂ ಓದಿ:

‘ತುಂಡು ಬಟ್ಟೆ ಧರಿಸಿದಾಕ್ಷಣ ರಾಖಿ ಸಾವಂತ್​ ಮಹಾತ್ಮ ಗಾಂಧಿಗಿಂತ ಶ್ರೇಷ್ಠರಾಗುವುದಿಲ್ಲ’-ಯುಪಿ ಸ್ಪೀಕರ್​

S.S.Rajamouli: ಕನ್ನಡಿಗರಲ್ಲಿ ಎರಡು ವಿಚಾರಕ್ಕೆ ಕ್ಷಮೆ ಕೇಳಿ ಮಾತು ಆರಂಭಿಸಿದ ಎಸ್.​ಎಸ್.​ ರಾಜಮೌಳಿ

TV9 Kannada


Leave a Reply

Your email address will not be published. Required fields are marked *