Ramanujacharya Sahasrabdi: ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಳ್ಳಲಿದ್ದಾರೆ ಕೇಂದ್ರ ಸಚಿವ ಅನುರಾಗ್​ ಠಾಕೂರ್​ | Union Minister Anurag Thakur to visit Hyderabad for participate in Ramanujachaarya Sahasrabdi


Ramanujacharya Sahasrabdi: ರಾಮಾನುಜಾಚಾರ್ಯ ಸಹಸ್ರಾಬ್ದಿ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಳ್ಳಲಿದ್ದಾರೆ ಕೇಂದ್ರ ಸಚಿವ ಅನುರಾಗ್​ ಠಾಕೂರ್​

ಕೇಂದ್ರ ಸಚಿವ ಅನುರಾಗ್ ಠಾಕೂರ್ (ಸಂಗ್ರಹ ಚಿತ್ರ)

ಹೈದರಾಬಾದ್​ನಲ್ಲಿ ಮುಚ್ಚಿಂತಲ್​ನಲ್ಲಿ ನಡೆಯುತ್ತಿರುವ ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿ(Ramanujacharya Sahasrabdi)ಕಾರ್ಯಕ್ರಮದಲ್ಲಿ ಇಂದು ಸಂಜೆ ಕೇಂದ್ರ ಸಚಿವ ಅನುರಾಗ್​ ಠಾಕೂರ್ (Union Minister Anurag Thakur)​ ಕೂಡ ಪಾಲ್ಗೊಳ್ಳಲಿದ್ದಾರೆ. ಫೆ.5ರಂದು ಜೀವಾ ಆಶ್ರಮದ ಸಮೀಪದಲ್ಲಿ ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದು, ಈ ಸ್ಥಳಕ್ಕೆ ಇಂದು ಅನುರಾಗ್ ಠಾಕೂರ್​ ಭೇಟಿ ನೀಡಲಿದ್ದಾರೆ. ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅಲ್ಲಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. 

ಅನುರಾಗ್ ಠಾಕೂರ್​ ಅವರು ಇಂದು ಸಂಜೆ ರಾಮಾನುಜಾಚಾರ್ಯರ ಆಶ್ರಮದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಗಳಲ್ಲಿ ಪಾಲ್ಗೊಂಡು ನಂತರ ಅಲ್ಲಿಯೇ ತಂಗಲಿದ್ದಾರೆ. ನಾಳೆ (ಫೆ.14) ಬೆಳಗ್ಗೆ ಅವರು ದೂರದರ್ಶನ ಕೇಂದ್ರಕ್ಕೆ ಭೇಟಿ ನೀಡುವರು. ಇನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈಗಾಗಲೇ ಹೈದರಾಬಾದ್​ಗೆ ಭೇಟಿ ನೀಡಿದ್ದು, ಇಂದು ಅಲ್ಲಿ ಶ್ರೀರಾಮಾನುಜಾಚಾರ್ಯರ ಚಿನ್ನದ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.   ಹೈದರಾಬಾದ್​ ಹೊರವಲಯದಲ್ಲಿ ನಡೆಯುತ್ತಿರುವ ಶ್ರೀ ರಾಮಾನುಜಾಚಾರ್ಯರ ಜನ್ಮ ಸಹಸ್ರಾಬ್ದಿ ಕಾರ್ಯಕ್ರಮಕ್ಕೆ ಪ್ರತಿದಿನವೂ ಗಣ್ಯರು ಆಗಮಿಸುತ್ತಿದ್ದಾರೆ. ಇಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಮತ್ತು ಅನುರಾಗ್​ ಠಾಕೂರ್​ ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ಭದ್ರತಾ ವ್ಯವಸ್ಥೆಯನ್ನು ಸೂಕ್ತವಾಗಿ ಮಾಡಲಾಗಿದೆ. ಕೊವಿಡ್​ 19 ಶಿಷ್ಟಾಚಾರ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಶ್ರೀರಾಮಾನುಜಾಚಾರ್ಯರ 1003ನೇ ಜನ್ಮಜಯಂತಿ ನಿಮಿತ್ತ ಹೈದರಾಬಾದ್​ನ ಹೊರವಲಯದಲ್ಲಿರುವ ಮುಚ್ಚಿಂತಲ್​​ನಲ್ಲಿ ಫೆ.2ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇದು ನಾಳೆ ಅಂದರೆ ಫೆ.14ರಂದು ಮುಕ್ತಾಯಗೊಳ್ಳಲಿದೆ. ಫೆ.5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರು ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಪಂಚಲೋಹದ ಮೂರ್ತಿಯನ್ನು ಅನಾವರಣಗೊಳಿಸಿದ್ದರು. ಇದನ್ನು ಸಮಾನತೆಯ ಮೂರ್ತಿ ಎಂದು ಕರೆಯಲಾಗಿದ್ದು, ವಿಶ್ವದಲ್ಲೇ ಅತ್ಯಂತ ಎತ್ತರದ ಮೂರ್ತಿಯಾಗಿದೆ.  ಹೈದರಾಬಾದ್​ನ ಹೊರವಲಯದಲ್ಲಿರುವ ಶ್ರೀರಾಮಾನುಜಾಚಾರ್ಯರ ಆಶ್ರಮದ 45 ಎಕರೆ ಸಂಕೀರ್ಣದಲ್ಲಿ ಈ ಪ್ರತಿಮೆ ಇದೆ. ಇದರ ನಿರ್ಮಾಣಕ್ಕೆ 2014ರಲ್ಲಿಯೇ ಅಡಿಗಲ್ಲು ಹಾಕಲಾಗಿತ್ತು. 1000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಹಣವೆಲ್ಲ ಬಹುತೇಕ ಭಕ್ತರು ನೀಡಿದ ದೇಣಿಗೆಯಿಂದಲೇ ಸಂಗ್ರಹವಾಗಿತ್ತು.

TV9 Kannada


Leave a Reply

Your email address will not be published.