ನಟ ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದರ ಜೊತೆಗೆ ಆಕ್ಷನ್ ಕಟ್ ಹೇಳಿರುವ ‘100’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ತಮ್ಮ ಚಿತ್ರದ ಕುರಿತು ಮಾತನಾಡಿದ್ದಾರೆ. ನಂತರ ಟಿವಿ9ನೊಂದಿಗೆ ಮಾತನಾಡಿದ ಅವರು, ಹಲವು ಕುತೂಹಲಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ‘100’ ಚಿತ್ರದಲ್ಲಿ ರಮೇಶ್ ಅವರ ಪಾತ್ರದ ಹೆಸರು ವಿಷ್ಣು. ಆ ಹೆಸರನ್ನು ಕೇಳಿದಾಗ ಸಾಹಸ ಸಿಂಹ ವಿಷ್ಣುವರ್ಧನ್ ನೆನಪಾಗುತ್ತಾರೆ ಎಂದು ಹೇಳಿದಾಗ ಆ ಕುರಿತು ಹಲವು ಅಚ್ಚರಿಯ ವಿಚಾರಗಳನ್ನು ರಮೇಶ್ ತೆರೆದಿಟ್ಟಿದ್ದಾರೆ. ‘ವಿಷ್ಣುವರ್ಧನ್ ಅವರೊಂದಿಗೆ ಮೂರು ಚಿತ್ರ ಮಾಡಿದ್ದರೂ ನೂರು ಚಿತ್ರ ಮಾಡಿದ ಖುಷಿ ನನಗಿದೆ. ಅವರಿಗೆ ಡಾಕ್ಟರೇಟ್ ಬಂದಾಗ ನನ್ನನ್ನು ಪ್ರೆಸ್ ಮೀಟ್ಗೆ ಕರೆದಿದ್ದರು. ಆಗ ವಿಷ್ಣುವರ್ಧನ್ ಅವರಿಗೆ ಡಾಕ್ಟರೇಟ್ ಬರಲು ಕಾರಣವೇನು ಎಂದು ಕೇಳಿದ್ದರು. ಅವರು ಮಾಡಿದ ಪ್ರತಿಯೊಂದು ಚಿತ್ರವೂ ಒಂದೊಂದು ಕಾರಣ ಎಂದು ಉತ್ತರಿಸಿದ್ದೆ ಎಂದು ರಮೇಶ್ ನೆನಪಿಸಿಕೊಂಡಿದ್ದಾರೆ.
ವಿಷ್ಣು ಅವರ ವ್ಯಕ್ತಿತ್ವ, ಹಾವಭಾವಗಳು ತಮ್ಮ ಮೇಲೆ ಬಹುದೊಡ್ಡ ಪ್ರಭಾವ ಬೀರಿವೆ ಎಂದು ರಮೇಶ್ ಹೇಳಿಕೊಂಡಿದ್ದಾರೆ. “ನನ್ನ ಮೊದಲ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ವಿಷ್ಣುವರ್ಧನ್. ಅವರೊಂದಿಗೆ ಮೊದಲ ಚಿತ್ರವನ್ನು ನಿರ್ದೇಶಿಸಬೇಕಾಗಿತ್ತು. ಆದರೆ ಅದು ಮಿಸ್ ಆಯ್ತು” ಎಂದು ರಮೇಶ್ ಹೇಳಿದ್ದಾರೆ. ಚಿತ್ರದಲ್ಲಿ ಪಾತ್ರಕ್ಕೆ ವಿಷ್ಣು ಎಂಬ ಹೆಸರಿನ ಕುರಿತಂತೆ ಉತ್ತರಿಸಿದ ರಮೇಶ್, ‘ವಿಷ್ಣುವರ್ಧನ್ ಅವರಿಗೆ ನಮನ ಸಲ್ಲಿಸೋದು ಒಂದು ಕಾರಣ. ಜೊತೆಗೆ ವಿಷ್ಣು ಅನ್ನೋದು ಸಂಭವಾಮಿ ಯುಗೇ ಯುಗೇ ಎಂದು ಆಪತ್ತಿಗೆ ಒದಗುವ ದೇವರ ಹೆಸರು. ಈಗಿನ ಕಾಲದ ಪಿಡುಗಾದ ಸೋಷಿಯಲ್ ಮೀಡಿಯಾಗೂ ವಿಷ್ಣು ಒದಗಿ ಬರುತ್ತಾರೆ. ಅದು ಹೇಗೆ ಎಂದು ಚಿತ್ರದಲ್ಲಿ ನೋಡಿ” ಎಂದು ರಮೇಶ್ ಕುತೂಹಲ ಮೂಡಿಸಿದ್ದಾರೆ.
ಎಂ.ರಮೇಶ್ ರೆಡ್ಡಿ ‘100’ ಚಿತ್ರವನ್ನು ನಿರ್ಮಾಣ ಮಾಡಿದ್ದು, ರಚಿತಾ ರಾಮ್, ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ ಮೊದಲಾದವರು ಬಣ್ಣಹಚ್ಚಿದ್ದಾರೆ. ನವೆಂಬರ್ 19ರಂದು ಚಿತ್ರವು ತೆರೆಗೆ ಬರಲಿದೆ.
ಇದನ್ನೂ ಓದಿ:
‘100’ ಚಿತ್ರದಲ್ಲಿ ಸೈಬರ್ ಕ್ರೈಂ ಕಥೆ; ತೆರೆ ಹಿಂದೆಯೂ, ತೆರೆ ಮೇಲೂ ರಮೇಶ್ ಅರವಿಂದ್ ಕಸುಬುದಾರಿಕೆ
‘100’ ಚಿತ್ರದ ವಿಶೇಷವೇನು?; ಕುತೂಹಲಕರ ಮಾಹಿತಿಗಳನ್ನು ಹಂಚಿಕೊಂಡ ರಮೇಶ್ ಅರವಿಂದ್