Ramnagar Politics: ರಾಮನಗರದಲ್ಲಿ ಅಶ್ವತ್ಥ ನಾರಾಯಣ VS ಎಚ್​ಡಿ ಕುಮಾರಸ್ವಾಮಿ ಮೇಲಾಟ, ಕಾದು ನೋಡುವ ತಂತ್ರಕ್ಕೆ ಡಿಕೆಶಿ | Its Ashwath Narayan Vs HD Kumaraswamy in Ramanagara HDK questions in Series of Tweet


ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಅವರ ಸೋದರ ಡಿ.ಕೆ.ಸುರೇಶ್​ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

Ramnagar Politics: ರಾಮನಗರದಲ್ಲಿ ಅಶ್ವತ್ಥ ನಾರಾಯಣ VS ಎಚ್​ಡಿ ಕುಮಾರಸ್ವಾಮಿ ಮೇಲಾಟ, ಕಾದು ನೋಡುವ ತಂತ್ರಕ್ಕೆ ಡಿಕೆಶಿ

ಸಚಿ ಅಶ್ವತ್ಥ ನಾರಾಯಣ ಮತ್ತು ಎಚ್​.ಡಿ.ಕುಮಾರಸ್ವಾಮಿ

ರಾಮನಗರ: ಜಿಲ್ಲೆಯಲ್ಲಿ ಬಿಜೆಪಿ ನಾಯಕ ಹಾಗೂ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ (C.N.Ashwath Narayana) ಹಾಗೂ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ (H.D.Kumaraswamy) ನಡುವಣ ಪೋಟಾಪೋಟಿ ಮುಂದುವರಿದಿದೆ. ಈ ನಡುವೆ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ (D.K.Shivakumar) ಹಾಗೂ ಅವರ ಸೋದರ ಡಿ.ಕೆ.ಸುರೇಶ್​ (D.K.Suresh) ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ನಾಯಕರಾದ ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಸಿ.ಪಿ.ಯೋಗೇಶ್ವರ್ ಕೇವಲ ಎಚ್​.ಡಿ.ಕುಮಾರಸ್ವಾಮಿಗೆ ಮಾತ್ರವಲ್ಲ, ಡಿಕೆ ಸೋದರರಿಗೂ ಸಮಾನ ರಾಜಕೀಯ ವೈರಿಗಳು. ಸಿ.ಪಿ.ಯೋಗೇಶ್ವರ್ ಅವರನ್ನು ಮಣಿಸಲು ಈ ಹಿಂದೆ ಕುಮಾರಸ್ವಾಮಿ ಡಿಕೆ ಸೋದರರ ಬೆಂಬಲ ಪಡೆದುಕೊಂಡಿದ್ದರು. ಜಿಲ್ಲೆಯ ಪೋಟಾಪೋಟಿ ರಾಜಕಾರಣವು ಮತ್ತೆ ಕಾವು ಪಡೆದುಕೊಂಡಿದ್ದು, ಇದೀಗ ಯೋಗೇಶ್ವರ್ ಹಾಗೂ ಅಶ್ವತ್ಥ ನಾರಾಯಣ ಅವರನ್ನು ವಿರೋಧಿಸುವಲ್ಲಿ ಎಚ್​ಡಿ ಕುಮಾರಸ್ವಾಮಿ ಮುಂಚೂಣಿಯಲ್ಲಿದ್ದಾರೆ. ಇವರಿಬ್ಬರ ಮೇಲಾಟದಲ್ಲಿ ಲಾಭ ಪಡೆದುಕೊಳ್ಳುವ ನಿರೀಕ್ಷೆಯಲ್ಲಿರುವ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಎಚ್​ಡಿಕೆ ಸರಣಿ ಟ್ವೀಟ್

ಚನ್ನಪಟ್ಟಣದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮತ್ತು ನಂತರದ ಬೆಳವಣಿಗೆಗಳು ನಿನ್ನೆ (ಅ.1) ದೊಡ್ಡ ಸುದ್ದಿಯಾಗಿತ್ತು. ಅದನ್ನು ಇಂದೂ ಮುಂದುವರಿಸಿರುವ ಎಚ್​.ಡಿ.ಕುಮಾರಸ್ವಾಮಿ, ‘ಅಭಿವೃದ್ಧಿ ಕೆಲಸ ಎಂದರೇನು ಅಶ್ವತ್ಥ ನಾರಾಯಣ? ವಾಮಮಾರ್ಗ ಎಂದರೆ ಯಾವುದು? ಇವೆರಡರಲ್ಲೂ ತಮಗೆ ಒಳ್ಳೇ ಅನುಭವವೇ ಇದೆ. ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ‘ಕಳ್ಳಮಾರ್ಗ’ದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಹೊರಟಿದ್ದು, ಕ್ಷೇತ್ರದ ಶಾಸಕರನ್ನೇ ಕತ್ತಲೆಯಲ್ಲಿ ಇಟ್ಟಿದ್ದನ್ನು ಏನೆಂದು ಕರೆಯಬೇಕು? ಇದೇನಾ ನೀವು ಹೇಳುವ ‘ರಾಜಮಾರ್ಗ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು’ ಎಂದು ನಾನು ಭಾವಿಸಿದ್ದಿದ್ದರೆ ನೀವು ಮಲ್ಲೇಶ್ವರದಲ್ಲಿ ಶಾಸಕರೇ ಆಗುತ್ತಿರಲಿಲ್ಲ. ಆ ದಿನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಇನ್ನು; ಅಭಿವೃದ್ಧಿ ಬಗ್ಗೆ ಉಪದೇಶ ಮಾಡಿದ್ದೀರಿ, ನಿಮ್ಮ ಮಾದರಿಯಲ್ಲಿ ಅಭಿವೃದ್ಧಿ ಮಾಡಿಕೊಳ್ಳುವುದು ನನಗೆ ಗೊತ್ತಿಲ್ಲ, ನನ್ನಿಂದ ಆಗುವುದೂ ಇಲ್ಲ’ ಎಂದು ಎಚ್​ಡಿಕೆ ವ್ಯಂಗ್ಯವಾಡಿದ್ದಾರೆ.

‘ಅಶ್ವತ್ಥ ನಾರಾಯಣ ಅವರೇ ಅಧಿಕಾರ ಬರುತ್ತದೆ, ಹೋಗುತ್ತದೆ ಎಂದು ವೇದಾಂತ ಹೇಳಿದ್ದೀರಿ. ಹೌದು; ಇಂಥ ಉದಾತ್ತ, ಆದರ್ಶ ಚಿಂತನೆಯ, ವಿಶಾಲ ಹೃದಯ ವೈಶಾಲ್ಯವುಳ್ಳ ನಿಮ್ಮಂಥ ಪ್ರಾಜ್ಞರೇ ಆಪರೇಶನ್ ಕಮಲ ಎಂಬ ಪಾಪ ಎಸಗಿದ್ದೇಕೆ? ನಮ್ಮ ಶಾಸಕರ ಮನೆಯಲ್ಲಿ ಹಣ ಇಟ್ಟು ಬಂದ್ದಿದ್ದು ಯಾಕೆ? ಅಧಿಕಾರ ಬೇಕಿದ್ದರೆ ನೀವು ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗುವವರೆಗೂ ಕಾಯಬಹುದಿತ್ತಲ್ಲವೇ? ಆದರೆ, ಹಪಾಹಪಿಯಿಂದ ‘ಅಡ್ಡಮಾರ್ಗ’ ಹಿಡಿದಿದ್ದು ಏಕೆ? ಅಕ್ಕಪಕ್ಕದ ಪಕ್ಷಗಳ ಶಾಸಕರನ್ನು ಅಪಹರಿಸಿ ಆಪರೇಷನ್‌ ಕಮಲದ ಸರಕಾರ ಮಾಡಿದ್ದು ಯಾಕೆ? ಇದು ವಾಮಮಾರ್ಗವೋ? ಸನ್ಮಾರ್ಗವೋ? ಸ್ಪಲ್ಪ ಹೇಳಿ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಬಿಜೆಪಿ ಸರ್ಕಾರ ಬಂದ ಮೇಲೆ ರಾಮನಗರ ಜಿಲ್ಲೆಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಬಹಿರಂಗ ಚರ್ಚೆ ಮಾಡೋಣ ಬನ್ನಿ. ಆಗ ಯಾರ ಆತ್ಮಸಾಕ್ಷಿ ಏನು ಎಂಬುದು ಜನರಿಗೂ ತಿಳಿಯುತ್ತದೆ. ‘ಎಂಎಲ್‌ಸಿ ಕೋರಿಕೆ ಮೇರೆಗೆ…’ ಎಂದು ಬಿಡುಗಡೆ ಮಾಡಿದ 50 ಕೋಟಿ ರೂಪಾಯಿಯ ಒಳಗುಟ್ಟಿನ ಬಗ್ಗೆಯೂ ಚರ್ಚಿಸೋಣ ಬನ್ನಿ. ನಾನು ತಯಾರಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.