Rashmika Mandanna: ‘ಅವರ ಪಾಡಿಗೆ ಇರಲು ಬಿಡಿ’: ಟ್ರೋಲ್​ ಕುರಿತ ಚರ್ಚೆಯಲ್ಲಿ ರಶ್ಮಿಕಾ ಪರ ನಿಂತ ರಮ್ಯಾ – Ramya Divya Spandana reaction on Rashmika Mandanna post about troll


Ramya | Rashmika Mandanna: ಚಿತ್ರರಂಗದ ಹಲವು ಬೆಳವಣಿಗೆಗಳ ಬಗ್ಗೆ ರಮ್ಯಾ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಮಾಡಿರುವ ಪೋಸ್ಟ್​ ಕುರಿತು ರಮ್ಯಾ ಈಗ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಟ್ರೋಲ್​ (Troll) ಕಾಟ ಇಂದು ನಿನ್ನೆಯದಲ್ಲ. ವೃತ್ತಿಜೀವನ ಆರಂಭಿಸಿದ ದಿನದಿಂದಲೂ ಅವರು ಅನೇಕರಿಂದ ಕಟು ಟೀಕೆ ಎದುರಿಸುತ್ತಲೇ ಬರುತ್ತಿದ್ದಾರೆ. ಈ ಕುರಿತು ಈಗ ತಮ್ಮ ಅಳಲು ತೋಡಿಕೊಂಡಿದ್ದಾರೆ. ಟ್ರೋಲ್​ ಮತ್ತು ನೆಗೆಟಿವಿಟಿ ಕಾರಣದಿಂದ ನಮಗೆ ಆಗಿರುವ ತೊಂದರೆ ಕುರಿತು ಅವರು ಬಹಿರಂಗ ಪತ್ರ ಬರೆದಿದ್ದಾರೆ. ಅದಕ್ಕೆ ನಟಿ ರಮ್ಯಾ (Ramya Divya Spandana) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಬರೆದುಕೊಂಡ ಸಾಲುಗಳ ಬಗ್ಗೆ ರಮ್ಯಾ ಸಹಮತ ಸೂಚಿಸಿದ್ದಾರೆ. ಟ್ರೋಲ್​ ಕುರಿತು ತಮ್ಮ ಅನಿಸಿಕೆ ಏನು ಎಂಬುದನ್ನು ಅವರು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಪೋಸ್ಟ್​ ವೈರಲ್​ ಆಗಿದೆ. ದುಲ್ಕರ್​ ಸಲ್ಮಾನ್​, ತಾನ್ಯಾ ಹೋಪ್​ ಮುಂತಾದವರು ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ರಮ್ಯಾ ಅವರು ಮತ್ತೆ ನಟನೆಗೆ ಮರಳಿದ್ದಾರೆ. ನಿರ್ಮಾಪಕಿ ಆಗಿಯೂ ಅವರು ಚಿತ್ರರಂಗದಲ್ಲಿ ಹೊಸ ಜರ್ನಿ ಆರಂಭಿಸಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ಅವರು ಬಂಡವಾಳ ಹೂಡುತ್ತಿದ್ದಾರೆ. ಡಾಲಿ ಧನಂಜಯ್​ ಜೊತೆಗೆ ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನೇಕ ಚಿತ್ರತಂಡಗಳಿಗೆ ಬೆನ್ನು ತಟ್ಟುತ್ತಿದ್ದಾರೆ. ಚಿತ್ರರಂಗದ ಹಲವು ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಈಗ ರಶ್ಮಿಕಾ ಕುರಿತು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

‘ಟ್ರೋಲಿಂಗ್​ ಎಂಬುದು ಕೆಟ್ಟದ್ದು. ಜನರ ಜೀವನದ ಬಗ್ಗೆ ನಾವು ಅಭಿಪ್ರಾಯಗಳನ್ನು ಹೇರೋಕೆ ಆಗಲ್ಲ. ವಾಸ್ತವ ಏನು ಎಂಬುದು ಆ ವ್ಯಕ್ತಿಗೆ ಮಾತ್ರ ಗೊತ್ತಿರುತ್ತದೆ. ಅವರ ಪಾಡಿಗೆ ಅವರನ್ನು ಇರಲು ಬಿಡಿ’ ಎಂದು ರಮ್ಯಾ ಬರೆದುಕೊಂಡಿದ್ದಾರೆ.

ರಶ್ಮಿಕಾ ಪೋಸ್ಟ್​ ಮಾಡಿದ್ದು ಏನು?

‘ಇತ್ತೀಚಿನ ವರ್ಷಗಳಲ್ಲಿ ನನಗೆ ಕೆಲವು ವಿಚಾರಗಳು ಸಾಕಷ್ಟು ತೊಂದರೆ ನೀಡಿವೆ. ಈ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು’ ಎಂದು ರಶ್ಮಿಕಾ ಮಂದಣ್ಣ ಅವರು ಬರಹ ಆರಂಭಿಸಿದ್ದಾರೆ. ‘ವೃತ್ತಿ ಜೀವನ ಆರಂಭ ಆದಾಗಿನಿಂದಲೂ ನನ್ನನ್ನು ದ್ವೇಷಿಸಲಾಗುತ್ತಿದೆ. ಟ್ರೋಲ್​ ಮತ್ತು ನೆಗೆಟಿವಿಟಿಗೆ ನಾನು ಪಂಜಿಂಗ್​ ಬ್ಯಾಗ್​ ರೀತಿ ಆಗಿದ್ದೇನೆ. ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಹಾಗಿದೆ. ಎಲ್ಲರೂ ನನ್ನನ್ನು ಪ್ರೀತಿಸಲೇಬೇಕು ಅಂತೇನಿಲ್ಲ. ನನ್ನ ಬಗ್ಗೆ ನಿಮಗೆ ಸಹಮತ ಇಲ್ಲ ಎಂದಮಾತ್ರಕ್ಕೆ ನೀವು ನೆಗೆಟಿವಿಟಿ ಹಬ್ಬಿಸಬಹುದು ಅಂತ ಅರ್ಥವಲ್ಲ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

‘ನಿಮ್ಮೆಲ್ಲರನ್ನು ರಂಜಿಸಲು ನಾನು ಸತತ ಶ್ರಮಪಡುತ್ತಿದ್ದೇನೆ. ಆ ಕೆಲಸದ ಬಗ್ಗೆ ನಾನು ಹೆಚ್ಚು ಯೋಚಿಸುತ್ತೇನೆ. ನಾನು ಮತ್ತು ನೀವು ಇಬ್ಬರೂ ಹೆಮ್ಮೆ ಪಡುವಂತಹ ಕೆಲಸ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಹೇಳಿಲ್ಲದೇ ಇರುವ ವಿಚಾರಕ್ಕೆ ನನ್ನನ್ನು ಟ್ರೋಲ್​ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ’ ಎಂದು ರಶ್ಮಿಕಾ ಅವರು ತಮ್ಮ ಬೇಸರ ತೋಡಿಕೊಂಡಿದ್ದಾರೆ.

TV9 Kannada


Leave a Reply

Your email address will not be published.