RBI Direct Scheme: ಪ್ರಧಾನಿ ನರೇಂದ್ರ ಮೋದಿಯಿಂದ ನ.12ಕ್ಕೆ ರೀಟೇಲ್ ಹೂಡಿಕೆದಾರರಿಗೆ ಆರ್​ಬಿಐ ಡೈರೆಕ್ಟ್ ಯೋಜನೆ ಆರಂಭ | PM Narendra Modi To Inaugurate RBI Direct Scheme On November 12th Must Know Details By Retail Investors


RBI Direct Scheme: ಪ್ರಧಾನಿ ನರೇಂದ್ರ ಮೋದಿಯಿಂದ ನ.12ಕ್ಕೆ ರೀಟೇಲ್ ಹೂಡಿಕೆದಾರರಿಗೆ ಆರ್​ಬಿಐ ಡೈರೆಕ್ಟ್ ಯೋಜನೆ ಆರಂಭ

ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಸರ್ಕಾರಿ ಸೆಕ್ಯೂರಿಟೀಸ್​ಗಳಲ್ಲಿ ರೀಟೇಲ್ ಭಾಗವಹಿಸುವಿಕೆ ಹೆಚ್ಚಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ, ಅಂದರೆ ನವೆಂಬರ್ 12ರಂದು ಹೂಡಿಕೆದಾರರಿಗೆ ‘ಆರ್‌ಬಿಐ ರೀಟೇಲ್ ಡೈರೆಕ್ಟ್ ಸ್ಕೀಮ್’ ಪ್ರಾರಂಭಿಸಲಿದ್ದಾರೆ. ಚಿಲ್ಲರೆ ಹೂಡಿಕೆದಾರರು ತಮ್ಮ ಸರ್ಕಾರಿ ಸೆಕ್ಯೂರಿಟೀಸ್ ಖಾತೆಗಳನ್ನು (ಗಿಲ್ಟ್ ಖಾತೆಗಳನ್ನು) ರಿಸರ್ವ್ ಬ್ಯಾಂಕ್‌ನಲ್ಲಿ ತೆರೆಯಬಹುದು ಮತ್ತು ನಿರ್ವಹಿಸಬಹುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ, ಉಚಿತವಾಗಿರುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗಿಲ್ಟ್ ಸೆಕ್ಯೂರಿಟೀಸ್ ಖಾತೆಯನ್ನು ತೆರೆಯುವ ಸೌಲಭ್ಯದೊಂದಿಗೆ (‘ರೀಟೇಲ್ ಡೈರೆಕ್ಟ್’) ಸರ್ಕಾರಿ ಸೆಕ್ಯೂರಿಟೀಸ್ ಮಾರುಕಟ್ಟೆಗೆ – ಪ್ರಾಥಮಿಕ ಮತ್ತು ಸೆಕೆಂಡರಿ ಎರಡೂ – ಆನ್‌ಲೈನ್ ಪ್ರವೇಶದ ಮೂಲಕ ರೀಟೇಲ್ ಹೂಡಿಕೆದಾರರಿಗೆ ಸುಲಭವಾಗಿ ಪಡೆಯುವುದಕ್ಕೆ ಅನುಕೂಲ ಆಗುವಂತೆ “RBI ರಿಟೇಲ್ ಡೈರೆಕ್ಟ್” ಸೌಲಭ್ಯವನ್ನು ಈ ವರ್ಷದ ಫೆಬ್ರವರಿಯಲ್ಲಿ ಘೋಷಿಸಲಾಯಿತು.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಫೆಬ್ರವರಿಯ ದ್ವೇಮಾಸಿಕ ಹಣಕಾಸು ನೀತಿ ಪರಾಮರ್ಶೆಯ ವೇಳೆಯಲ್ಲಿ ಈ ಕ್ರಮವನ್ನು “ಪ್ರಮುಖ ರಚನಾತ್ಮಕ ಸುಧಾರಣೆ” ಎಂದು ಕರೆದರು. ಜುಲೈನಲ್ಲಿ ಕೇಂದ್ರೀಯ ಬ್ಯಾಂಕ್ ಹೇಳಿರುವ ಪ್ರಕಾರ, ಹೂಡಿಕೆದಾರರು ಪ್ರಾಥಮಿಕ ಹರಾಜಿನಲ್ಲಿ ಬಿಡ್ಡಿಂಗ್ ಮಾಡುವುದಕ್ಕೆ ಮತ್ತು ನೆಗೋಷಿಯೇಟೆಡ್ ಡೀಲಿಂಗ್ ಸಿಸ್ಟಂ-ಆರ್ಡರ್ ಮ್ಯಾಚಿಂಗ್ ಸೆಗ್ಮೆಂಟ್ ಅಥವಾ NDS-OM ಎಂದು ಕರೆಯುವ ಸರ್ಕಾರದ ಸೆಕ್ಯೂರಿಟಿಗಳಲ್ಲಿ ಕೇಂದ್ರೀಯ ಬ್ಯಾಂಕ್‌ನ ವ್ಯಾಪಾರ ಪ್ಲಾಟ್​ಫಾರ್ಮ್​ಗೆ ಸಂಪರ್ಕವನ್ನು ಹೊಂದಿರುತ್ತಾರೆ ಎಂದು ಹೇಳಿದರು. ‘ಆರ್‌ಬಿಐ ರಿಟೇಲ್ ಡೈರೆಕ್ಟ್’ ಯೋಜನೆಯು ವೈಯಕ್ತಿಕ ಹೂಡಿಕೆದಾರರಿಂದ ಸರ್ಕಾರಿ ಸೆಕ್ಯೂರಿಟಿಗಳಲ್ಲಿ ಹೂಡಿಕೆಯನ್ನು ಸುಲಭಗೊಳಿಸಲು ಒನ್-ಸ್ಟಾಪ್ ಪರಿಹಾರವಾಗಿದೆ.

ಈ ಯೋಜನೆಯಡಿ ರೀಟೇಲ್ ಹೂಡಿಕೆದಾರರು (ವ್ಯಕ್ತಿಗಳು) ಆರ್‌ಬಿಐನಲ್ಲಿ ‘ರಿಟೇಲ್ ಡೈರೆಕ್ಟ್ ಗಿಲ್ಟ್ ಖಾತೆ’ (RDG ಖಾತೆ) ತೆರೆಯುವ ಮತ್ತು ನಿರ್ವಹಿಸುವ ಸೌಲಭ್ಯವನ್ನು ಹೊಂದಿರುತ್ತಾರೆ. ಯೋಜನೆಯ ಉದ್ದೇಶಕ್ಕಾಗಿ ಒದಗಿಸಲಾದ ‘ಆನ್‌ಲೈನ್ ಪೋರ್ಟಲ್’ ಮೂಲಕ RDG ಖಾತೆಯನ್ನು ತೆರೆಯಬಹುದು. ‘ಆನ್‌ಲೈನ್ ಪೋರ್ಟಲ್’ ನೋಂದಾಯಿತ ಬಳಕೆದಾರರಿಗೆ ಸರ್ಕಾರಿ ಸೆಕ್ಯೂರಿಟಿಗಳ ಪ್ರಾಥಮಿಕ ವಿತರಣೆ ಮತ್ತು NDS-OMಗೆ ಸಂಪರ್ಕದಂತಹ ಸೌಲಭ್ಯಗಳನ್ನು ನೀಡುತ್ತದೆ. NDS-OM ಎಂದರೆ ಸೆಕೆಂಡರಿ ಮಾರುಕಟ್ಟೆಯಲ್ಲಿ ಸರ್ಕಾರಿ ಸೆಕ್ಯೂರಿಟಿಗಳಲ್ಲಿ ವ್ಯಾಪಾರ ಮಾಡಲು RBIನ ಸ್ಕ್ರೀನ್ ಆಧಾರಿತ, ಅನಾಮಧೇಯ ಎಲೆಕ್ಟ್ರಾನಿಕ್ ಆರ್ಡರ್ ಮ್ಯಾಚಿಂಗ್ ಸಿಸ್ಟಮ್. ಹೂಡಿಕೆದಾರರ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವಾಗ ವೈಯಕ್ತಿಕ ಖರೀದಿದಾರರಿಗೆ ಭಾರತದ ಸವರನ್ ಬಾಂಡ್ ಮಾರುಕಟ್ಟೆಯನ್ನು ತೆರೆಯುವ ಕ್ರಮವಾಗಿ ಈ ಬಿಡುಗಡೆ ಆಗಿದೆ.

ಇದನ್ನೂ ಓದಿ: IMPS Transaction Limit: ಐಎಂಪಿಎಸ್​ ಮಿತಿಯನ್ನು 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಿದ ಆರ್​ಬಿಐ

TV9 Kannada


Leave a Reply

Your email address will not be published.