RCB vs CSK: RCB ತಂಡದ ಪ್ರಮುಖ ಆಟಗಾರ ಅಲಭ್ಯ: ಯಾರಿಗೆ ಸಿಗಲಿದೆ ಚಾನ್ಸ್​? | Harshal Patel Unavailable For RCB vs CSK Match


RCB vs CSK: RCB ತಂಡದ ಪ್ರಮುಖ ಆಟಗಾರ ಅಲಭ್ಯ: ಯಾರಿಗೆ ಸಿಗಲಿದೆ ಚಾನ್ಸ್​?

RCB

IPL 2022: ಐಪಿಎಲ್​ ಸೀಸನ್ 15 ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ನಾಗಾಲೋಟ ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಸೋತ ಬಳಿಕ ಆರ್​ಸಿಬಿ ಬ್ಯಾಕ್ ಟು ಬ್ಯಾಕ್ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಪಾಯಿಂಟ್ ಟೇಬಲ್​ನಲ್ಲಿ 4ನೇ ಸ್ಥಾನ ಅಲಂಕರಿಸಿದೆ. ಇದೀಗ 5ನೇ ಪಂದ್ಯಕ್ಕೆ ಸಜ್ಜಾಗುತ್ತಿರುವ ಆರ್​ಸಿಬಿ ಪರ ಪ್ರಮುಖ ಬೌಲರ್ ಅಲಭ್ಯರಾಗಲಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದ ಬಳಿಕ ಆರ್​ಸಿಬಿ ತಂಡದ ಪ್ರಮುಖ ವೇಗಿ ಹರ್ಷಲ್ ಪಟೇಲ್ ಬಯೋಬಬಲ್​ನಿಂದ ಹೊರನಡೆದಿದ್ದರು. ಶನಿವಾರ ಆರ್​ಸಿಬಿಯ ಗೆಲುವಿನ ಬಳಿಕ ಹರ್ಷಲ್ ಪಟೇಲ್ ವೈಯಕ್ತಿಕ ಕಾರಣಗಳಿಂದಾಗಿ ಪುಣೆಯಿಂದ ನೇರವಾಗಿ ತಮ್ಮ ಮನೆಗೆ ತೆರಳಿದ್ದರು. ಆ ಬಳಿಕ ಹರ್ಷಲ್ ಪಟೇಲ್ ಅವರ ಸಹೋದರಿ ನಿಧನ ಹೊಂದಿದ ಕಾರಣ ಪಂದ್ಯ ಮುಗಿದ ಬಳಿಕ ಆರ್​ಸಿಬಿ ತಂಡವನ್ನು ತೊರೆದಿದ್ದರು ಎಂಬ ವಿಚಾರ ಬೆಳಕಿಗೆ ಬಂತು. ಇದರೊಂದಿಗೆ ಏಪ್ರಿಲ್ 12 ರಂದು ಸಿಎಸ್​ಕೆ ವಿರುದ್ಧ ಆಡಲಿರುವ ಪಂದ್ಯಕ್ಕೆ ಹರ್ಷಲ್ ಪಟೇಲ್ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಖಚಿತವಾಗಿದೆ.

ಇತ್ತ ಹರ್ಷಲ್ ಪಟೇಲ್ ಅವರ ಸ್ಥಾನದಲ್ಲಿ ಆರ್​ಸಿಬಿ ತಂಡದಲ್ಲಿ ಯಾರಿಗೆ ಚಾನ್ಸ್ ಸಿಗಲಿದೆ ಎಂಬುದೇ ಪ್ರಶ್ನೆಯಾಗಿದೆ. ಏಕೆಂದರೆ ತಂಡದಲ್ಲಿರುವ ಪ್ರಮುಖ ಬೌಲರ್​ಗಳು ಈಗಾಗಲೇ ಕಣಕ್ಕಿಳಿದಿದ್ದಾರೆ. ಹರ್ಷಲ್ ಪಟೇಲ್ ಅಲ್ಲದೆ, ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಆರ್​ಸಿಬಿ ಪ್ಲೇಯಿಂಗ್​ 11 ನಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆರ್​ಸಿಬಿ ತಂಡವು ಹರ್ಷಲ್ ಬದಲಿ ಆಟಗಾರನನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆಯಿದೆ.

ಒಂದು ವೇಳೆ ಆರ್​ಸಿಬಿ ಮತ್ತೋರ್ವ ವೇಗದ ಬೌಲರ್​ನನ್ನೇ ಕಣಕ್ಕಿಳಿಸಲು ಬಯಸಿದರೆ ಆರ್​ಸಿಬಿ ಮುಂದೆ 2 ಆಯ್ಕೆಯಿದೆ. ಹೀಗಾಗಿ ಸಿದ್ದಾರ್ಥ್ ಕೌಲ್ ಹಾಗೂ ಚಮಾ ಮಿಲಿಂದ್, ಇವರಿಬ್ಬರಲ್ಲಿ ಒಬ್ಬರು ಅವಕಾಶ ಪಡೆಯಬಹುದು. ಇಲ್ಲಿ ಚಮಾ ಮಿಲಿಂದ್ ಯುವ ವೇಗಿಯಾಗಿದ್ದರೆ ಸಿದ್ದಾರ್ಥ್ ಕೌಲ್ ಐಪಿಎಲ್ ಆಡಿದ ಅನುಭವಿ ವೇಗಿ. ಹೀಗಾಗಿ ಅನುಭವಕ್ಕೆ ಮಣೆಹಾಕಿದರೆ ಸಿದ್ದಾರ್ಥ್ ಕೌಲ್ ಅವಕಾಶ ಪಡೆಯಬಹುದು.

ಇನ್ನು ವೇಗದ ಬೌಲರ್​ನ ಕೈಬಿಟ್ಟರೆ ಆರ್​ಸಿಬಿ ತಂಡದಲ್ಲಿ ಸ್ಪಿನ್ನರ್ ಆಗಿ ಕರ್ಣ್ ಶರ್ಮಾ ಇದ್ದಾರೆ. ಆದರೆ ಈಗಾಗಲೇ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಪಿನ್ ಆಲ್​ರೌಂಡರ್​ಗಳಾಗಿ ವನಿಂದು ಹಸರಂಗ, ಗ್ಲೆನ್ ಮ್ಯಾಕ್ಸ್​ವೆಲ್, ಶಹಬಾಜ್ ಅಹ್ಮದ್ ಇರುವುದರಿಂದ ಮತ್ತೋರ್ವ ಸ್ಪಿನ್ನರ್​ಗೆ ಮಣೆಹಾಕುವುದು ಅನುಮಾನ.

ಇದಾಗ್ಯೂ ಮತ್ತೋರ್ವ ಬ್ಯಾಟ್ಸ್​ಮನ್​ ಅನ್ನು ಕಣಕ್ಕಿಳಿಸಲು ಬಯಸಿದರೆ ತಂಡದಲ್ಲಿ ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್ ಹಾಗೂ ಯುವ ಆಟಗಾರ ಅನೀಶ್ವರ್ ಗೌತಮ್ ಇದ್ದಾರೆ. ಹೀಗಾಗಿ ಇವರಲ್ಲಿ ಒಬ್ಬರಿಗೆ ಚಾನ್ಸ್ ಸಿಗಬಹುದು. ಆದರೆ ಪ್ರಸ್ತುತ ಆರ್​ಸಿಬಿ ತಂಡದ ಬೌಲಿಂಗ್ ಕಳಪೆಯಾಗಿರುವ ಕಾರಣ ಬೌಲರ್​ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು. ಹೀಗಾಗಿ ಸಿದ್ದಾರ್ಥ್ ಕೌಲ್, ಚಮಾ ಮಿಲಿಂದ್ ಹಾಗೂ ಕರ್ಣ್​ ಶರ್ಮಾ ಇವರಲ್ಲಿ ಒಬ್ಬರು ಹರ್ಷಲ್ ಪಟೇಲ್ ಸ್ಥಾನದಲ್ಲಿ ಕಣಕ್ಕಿಳಿಯಬಹುದು.

RCB ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.

TV9 Kannada


Leave a Reply

Your email address will not be published. Required fields are marked *