RCB vs SRH: ಇದು ಬೌಲರ್​​ಗಳ ತಂಡ: ಸತತ ಐದನೇ ಪಂದ್ಯವನ್ನೂ ಗೆದ್ದ ಸನ್​ರೈಸರ್ಸ್​​ ಹೈದರಾಬಾದ್ | Sunrisers Hyderabad Bowlers Power SRH Easy Win Over Royal Challengers Bangalore in IPL 2022


RCB vs SRH: ಇದು ಬೌಲರ್​​ಗಳ ತಂಡ: ಸತತ ಐದನೇ ಪಂದ್ಯವನ್ನೂ ಗೆದ್ದ ಸನ್​ರೈಸರ್ಸ್​​ ಹೈದರಾಬಾದ್

RCB vs SRH IPL 2022

ಟಿ20 ಕ್ರಿಕೆಟ್​​ನಲ್ಲಿ ಹೆಚ್ಚು ಬ್ಯಾಟರ್​​ಗಳದ್ದೇ ಪಾರುಪತ್ಯ ಎಂಬ ಕಾಲವಿತ್ತು. ಆದರೆ ಇದೀಗ ನಿಧಾನವಾಗಿ ಬದಲಾಗುತ್ತಿದೆ. ಬೌಲರ್​​ಗಳು ಕೂಡ ತಮ್ಮ ಮಾರಕ ದಾಳಿಯಿಂದ ಮೇಲುಗೈ ಸಾಧಿಸುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಐಪಿಎಲ್ 2022 ರಲ್ಲಿರುವ (IPL 2022) ಸನ್​ರೈಸರ್ಸ್​ ಹೈದರಾಬಾದ್ ತಂಡ. ಹೌದು, 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮೊದಲ ಎರಡು ಪಂದ್ಯ ಸೋತು ಕಳಪೆ ಆರಂಭ ಪಡೆದುಕೊಂಡಿದ್ದ ಕೇನ್ ವಿಲಿಯಮ್ಸನ್ (Kane Williamson) ಪಡೆ ನಂತರ ಕಮ್​ಬ್ಯಾಕ್ ಮಾಡಿದ್ದು ಊಹಿಸಲಾಗದ ರೀತಿ. ತಮ್ಮ ಘಾತಕ ಬೌಲರ್​​ಗಳಿಂದಲೇ ಹೈದರಾಬಾದ್ ಇದೀಗ ಸತತವಾಗಿ ಐದನೇ ಪಂದ್ಯ ಗೆದ್ದು ಬೀಗಿದೆ. ಅದರಲ್ಲೂ ಶನಿವಾರ ನಡೆದ ರಾಯಲ್ ಚಾಲೆಂಜರ್ಸ್​​ ಬೆಂಗಳೂರು (RCB vs SRH) ವಿರುದ್ಧದ ಪಂದ್ಯದಲ್ಲಂತು ಎಸ್​ಆರ್​ಹೆಚ್ ಬೌಲರ್​ಗಳು ನೀಡಿದ ಪ್ರದರ್ಶನಕ್ಕೆ ಇತರೆ ತಂಡಗಳು ಕೂಡ ತಲೆಕೆಡಿಸಿಕೊಂಡಿದೆ. ಸಂಘಟಿತ ಪ್ರದರ್ಶನ ತೋರಿದ ಹೈದರಾಬಾದ್ 9 ವಿಕೆಟ್​ಗಳ ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲೂ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಒಂದು ಕಡೆಯಲ್ಲಿ ಸನ್​ರೈಸರ್ಸ್​​ಗೆ ಅದೃಷ್ಟ ಕೂಡ ಕೈಹಿಡಿಯುತ್ತಿದೆ ಎನ್ನಬಹುದು. ಯಾಕೆಂದರೆ ಐಪಿಎಲ್ 2022 ರಲ್ಲಿ ಕೇನ್ ವಿಲಿಯಮ್ಸನ್ ಎಲ್ಲ ಟಾಸ್ ಅನ್ನು ಕೂಡ ಗೆದ್ದಿದ್ದಾರೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲೂ ಟಾಸ್ ಗೆದ್ದ ಕೇನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಬೆಂಗಳೂರಿಗೆ ಎರಡನೇ ಓವರ್​ನಲ್ಲೇ ಕಾದಿತ್ತು ಆಘಾತ. ಮಾರ್ಕೋ ಜಾನ್ಸನ್ ಎಸೆದ ಈ ಓವರ್‌ನಲ್ಲಿ ಆರ್‌ಸಿಬಿ ತನ್ನ ಅಗ್ರ ಕ್ರಮಾಂಕದ ಮೂವರು ದಾಂಡಿಗರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಾಯಕ ಫಾಫ್ ಡುಪ್ಲೆಸಿಸ್ (5), ವಿರಾಟ್ ಕೊಹ್ಲಿ ಹಾಗೂ ಅನುಜ್ ರಾವತ್ ಎರಡನೇ ಓವರ್‌ನಲ್ಲಿ ಫೆವಿಲಿಯನ್‌ಗೆ ಸೇರಿಕೊಂಡರು. ಕೊಹ್ಲಿ ಸತತ ಎರಡನೇ ಬಾರಿಗೆ ಗೋಲ್ಡನ್ ಡಕ್‌ಗೆ ಔಟ್ ಆದರು. ನಂತರ ಬಂದ ಬ್ಯಾಟರ್‌ಗಳು ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾದರು. ಗ್ಲೆನ್ ಮ್ಯಾಕ್ಸ್‌ವಲ್ ಹಾಗೂ ಸುಯೇಶ್ ಪ್ರಭುದೇಸಾಯಿ ಮಾತ್ರವೇ ಈ ಪಂದ್ಯದಲ್ಲಿ ಎರಡಂಕಿ ದಾಟಿದರು. ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ರನ್ ಖಾತೆ ತೆರೆಯಲು ವಿಫಲರಾದರು. ಉಳಿದ ಎಲ್ಲಾ ಆಟಗಾರರು ಕೂಡ ಒಂದಂಕಿಗೆ ವಿಕೆಟ್ ಒಪ್ಪಿಸಿದ್ದಾರೆ. ಮೂವರು ಆಟಗಾರರು ಶೂನ್ಯ ಸಂಪಾದನೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ವಿಭಾಗ ಸಂಪೂರ್ಣ ಶ್ರೇಯಸ್ಸು ತನ್ನದಾಗಿಸಿಕೊಂಡಿತು. ಮಾರ್ಕೋ ಜಾನ್ಸನ್ ಹಾಗೂ ಟಿ ನಟರಾಜನ್ ತಲಾ ಮೂರು ವಿಕೆಟ್ ಸಂಪಾದಿಸಿದರೆ ಸ್ಪಿನ್ನರ್ ಜಗದೀಶ ಸುಚಿತ್ 2 ವಿಕೆಟ್ ಹಾಗೂ ಭುವನೇಶ್ವರ್ ಕುಮಾರ್ ಹಾಗೂ ಉಮ್ರಾನ್ ಮಲಿಕ್ ತಲಾ ಒಂದು ವಿಕೆಟ್ ತನ್ನದಾಗಿಸಿಕೊಂಡರು. ಆರ್​ಸಿಬಿ 16.1 ಓವರ್​ನಲ್ಲಿ ಕೇವಲ 68 ರನ್​ಗೆ ಆಲೌಟ್ ಆಯಿತು. ಇದರೊಂದಿಗೆ ಐಪಿಎಲ್​ನಲ್ಲಿ 70 ರನ್ ಅಥವಾ ಅದಕ್ಕಿಂತ ಕಡಿಮೆ ರನ್​ಗಳ ಒಳಗೆ ಅತೀ ಹೆಚ್ಚು ಬಾರಿ ಆಲೌಟ್ ಆದ ತಂಡ ಎಂಬ  ಕೆಟ್ಟ ದಾಖಲೆಯೊಂದು ಆರ್​ಸಿಬಿ ಪಾಲಾಯಿತು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೇವಲ 8 ಓವರ್‌ಗಳಲ್ಲಿ ಈ ಗುರಿಯನ್ನು ತಲುಪಿತು. ಆರಂಭಿಕ ಆಟಗಾರ ಅಭಿಶೇಕ್ ಶರ್ಮಾ 28 ಎಸೆತಗಳಲ್ಲಿ 47 ರನ್‌ ಸಿಡಿಸಿ ವಿಕೆಟ್ ಕಳೆದುಕೊಂಡರೆ ನಾಯಕ ಕೇನ್ ವಿಲಿಯಮ್ಸನ್ 16 ರನ್ ಹಾಗೂ ರಾಹುಲ್ ತ್ರಿಪಾಠಿ 7 ರನ್‌ಗಳಿಸಿ ಅಜೇಯವಾಗುಳಿದರು. ಈ ಗೆಲುವಿನೊಂದಿಗೆ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ನೆಟ್ ರನ್‌ರೇಟ್ ಕೂಡ ಹೆಚ್ಚಿಸಿಕೊಂಡಿದೆ. ಸೋಲು ಅನುಭವಿಸಿರುವ ಆರ್​ಸಿಬಿ 4ನೇ ಸ್ಥಾನಕ್ಕೆ ಕುಸಿದಿದೆ.

Khelo India University Games: ನಾಳೆಯಿಂದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಚಾಲನೆ

TV9 Kannada


Leave a Reply

Your email address will not be published. Required fields are marked *