Reporter’s Diary: ಉಂಡು ಹೊರಟಿದ್ದವರ ಬಲಿ ಪಡೆದ ಉಂಡುಬತ್ತಿ ಕೆರೆ | Reporters Diary Undbatti kere bus fall incident reporting experience shared by tv9 kannada reporter Ram


Reporter’s Diary: ಉಂಡು ಹೊರಟಿದ್ದವರ ಬಲಿ ಪಡೆದ ಉಂಡುಬತ್ತಿ ಕೆರೆ

ರಾಮ್​, ಟಿವಿ9 ಕನ್ನಡ ವರದಿಗಾರ, ಮೈಸೂರು

Undbatti Kere : ಸಾಕಷ್ಟು ಅಪಘಾತದ ಸುದ್ದಿಗಳನ್ನು ವರದಿ ಮಾಡಿದ್ದೇನೆ. ಭೀಕರ ಅಪಘಾತಗಳನ್ನು ಕಂಡಿದ್ದೇನೆ. ಆದರೆ ಇಂತಹ ಘೋರ ಅಪಘಾತವನ್ನು ನಾ ಕಂಡಿಲ್ಲ. ಅವತ್ತೇ ಅಂದುಕೊಂಡೆ, ಆ ದೇವರು ಅಂತಾ ಇದ್ದರೆ ಇಂತಹ ಘಟನೆಗಳು ಇನ್ನೆಂದೂ ನಡೆಯದಿರಲಿ ಅಂತ.

Reporter’s Diary : ಅದು 2010ರ ಡಿಸೆಂಬರ್ 14 ಮಂಗಳವಾರ ಸಂಜೆ ಕಚೇರಿಯಲ್ಲಿ ಕುಳಿತಿದ್ದೆ. ಬೆಳಗ್ಗೆಯಿಂದ ಅಷ್ಟಾಗಿ ಕೆಲಸ ಇರಲಿಲ್ಲ.‌ ಸಾಮಾನ್ಯವಾಗಿ ಬೆಳಗ್ಗೆಯಿಂದ ಯಾವ ಸುದ್ದಿಯೂ ಸಿಗದಿದ್ದರೆ ಸಂಜೆ ವೇಳೆಗೆ ಯಾವುದೋ ದೊಡ್ಡ ಸುದ್ದಿ ಕಾದಿದೆ ಅನ್ನೋದೊಂದು ಪರಂಪರೆಯಂತೆ ಇಂದಿಗೂ ನಡೆದುಕೊಂಡು ಬಂದಿದೆ. ಏನು ಸುದ್ದಿ ಕೊಡುವುದು ಎಂದು ಯೋಚಿಸುತ್ತಾ ಕಚೇರಿಯಲ್ಲಿ ಕುಳಿತಿದ್ದೆ. ನನ್ನ ಮಂಡ್ಯದ ಸ್ನೇಹಿತನೊಬ್ಬ ಕರೆ ಮಾಡಿ ನಮ್ಮ‌ಊರಿನವರು, ಕಾರ್ಯಕ್ರಮ, ಕೆರೆಗೆ ಬಿದ್ರು, ಅಂತಾ ಗಾಬರಿಯಲ್ಲಿ ಹೇಳುತ್ತಿದ್ದ. ನನಗೆ ಏನು ಅರ್ಥವಾಗುತ್ತಿರಲಿಲ್ಲ. ಆತನಿಗೆ ಸಮಾಧಾನ ಮಾಡಿಕೊಳ್ಳುವಂತೆ ಹೇಳಿ ಸರಿಯಾಗಿ ಏನಾಗಿದೆ ಅಂತ ಹೇಳು ಅಂದೆ. ಸ್ವಲ್ಪ ಸಮಯದ ನಂತರ ಆತ ಗಾಬರಿಯಿಂದಲೇ ನಂಜನಗೂಡು ರಸ್ತೆಯ ಕೆರೆಗೆ ಟೆಂಪೋ ಬಿದ್ದಿದೆ ತುಂಬಾ ಜನ ಅದರಲ್ಲಿ ಇದ್ದಾರೆ ಅಂದ. ಅಲ್ಲಿಗೆ ಏನೋ‌ ದೊಡ್ಡ ಅನಾಹುತ ಆಗಿದೆ ಅನ್ನೋದು ಗೊತ್ತಾಗಿ ಹೋಯ್ತು. ತಕ್ಷಣ ನಾನು‌ ಕಾರ್ಯಪ್ರವೃತ್ತನಾದೆ.
ರಾಮ್, ವರದಿಗಾರ, ಟಿವಿ9 ಕನ್ನಡ, ಮೈಸೂರು

ಹಿಂದೆ ಮುಂದೆ ನೋಡದೆ ಓಡಿದೆ

ಸಾಮಾನ್ಯವಾಗಿ ನನಗೆ ಯಾವುದೇ ಮೂಲಗಳಿಂದ ಸುದ್ದಿ ಸಿಕ್ಕಿದರು ಅದನ್ನು ಅಧಿಕೃತವಾಗಿ ಸಂಬಂಧಪಟ್ಟವರಿಂದ ಮಾಹಿತಿ ಪಡೆಯುವುದು ನನ್ನ ಅಭ್ಯಾಸ. ಅದರಂತೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಆಗಿದ್ದ ಗೋಪಾಲ್ ಕೃಷ್ಣ ಅವರಿಗೆ ಪೋನ್ ಮಾಡಿದೆ. ಅವರ ನಂಬರ್ ನಿರಂತರವಾಗಿ ಕಾಲ್ ವೇಯ್ಟಿಂಗ್ ಇತ್ತು. ಅಲ್ಲಿಗೆ ಅವಘಡ ಸಂಭವಿಸಿರೋದು ಬಹುತೇಕ ಖಚಿತವಾಗಿತ್ತು. ನನ್ನ ಕ್ಯಾಮೆರಾಪರ್ಸನ್ ಕರೆದುಕೊಂಡು ಬೈಕ್‌ನಲ್ಲಿ ಹೊರಟೆ ಜಿಟಿ‌ ಜಿಟಿ‌ ಮಳೆ ಬೇರೆ. ಆದರೂ ಲೆಕ್ಕಿಸದೇ ಸ್ಥಳವನ್ನು ತಲುಪಿದಾಗ ಅದಾಗಲೇ ಅಲ್ಲಿ ಜನ ಜಂಗುಳಿ ಸೇರಿತ್ತು. ಕೆರೆಯಲ್ಲಿ ಟೆಂಪೋ ಆಗ ತಾನೇ ಮುಳುಗಿತ್ತು. ನಾನು ಸ್ಥಳಕ್ಕೆ ಹೋದಾಗ ಮುಳುಗಿದ ಜಾಗದಲ್ಲಿ ಇನ್ನು ಗುಳ್ಳೆ ಏಳುತಿತ್ತು. ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕಾಗಲೇ ಆಗಮಿಸಿದ್ದರು. ಮುಳುಗು ತಜ್ಞರು ಕೆರೆಗೆ ಹಾರಲು ಸಿದ್ದರಾಗಿದ್ದರು. ತಕ್ಷಣ ನಮ್ಮ ಕ್ಯಾಮೆರಾಪರ್ಸನ್ ಕ್ಯಾಮೆರಾ ತೆಗೆದವರೇ ಶೂಟ್ ಮಾಡಲು ಶುರು ಮಾಡಿದ್ರು. ನಾನು ಅಲ್ಲಿದ್ದವರಿಂದ ಮಾಹಿತಿ ಕಲೆ ಹಾಕಲು ಶುರು ಮಾಡಿದೆ.

ಮಂಡ್ಯ ಜಿಲ್ಲೆಯ ನತದೃಷ್ಟ ಮಹಿಳೆಯರು

ಅಲ್ಲಿ ಅವತ್ತು ಕೆರೆಗೆ ಬಿದ್ದ ಟೆಂಪೋದಲ್ಲಿ ಇದ್ದ ಎಲ್ಲರೂ ಮಂಡ್ಯ ಜಿಲ್ಲೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆ, ಕಟ್ಟೇರಿ, ಎಲೆಕೆರೆ, ಹಿರಿಮಳಲಿ, ದಿಮಂಗನಹಳ್ಳಿ, ಬಳ್ಳೇಕೆರೆಯ ನಿವಾಸಿಗಳು. ಇವರೆಲ್ಲರೂ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಬೀಗರ ಔತಣ ಕಾರ್ಯಕ್ರಮಕ್ಕೆ‌ ಎಂದು ಆಗಮಿಸಿದ್ರು. ಬೀಗರ ಊಟ ಮುಗಿಸಿ ಟೆಂಪೋ ಹತ್ತಿ ತಮ್ಮ ಗ್ರಾಮಗಳತ್ತ ಹೊರಟಿದ್ರು. ನಂಜನಗೂಡಿನಿಂದ ಒಂದು 15 ಕಿಲೋ‌ ಮೀಟರ್ ಬಂದಿರಬೇಕು ಅಷ್ಟೇ ಟೆಂಪೋ ಚಾಲಕನ ನಿಯಂತಣ ತಪ್ಪಿ ಕರೆಗೆ ಬಿದ್ದಿದೆ. ಆ ಕೆರೆಗೆ ಬಿದ್ದ ಟೆಂಪೋದಲ್ಲಿ ಇದ್ದವರು ಬಹುತೇಕ ಮಹಿಳೆಯರು ಹಾಗೂ ಮಕ್ಕಳು. ಟೆಂಪೋ ಕೆರೆಗೆ ಬೀಳುತ್ತಿದ್ದಂತೆ ಚಾಲಕ ಹಾಗೂ ಕ್ಲೀನರ್ ಕೆರೆಯಿಂದ ಈಜಿಕೊಂಡು ಹೊರ ಬಂದಿದ್ದಾರೆ. ಆದ್ರೆ ಟೆಂಪೋದಲ್ಲಿದ್ದವರಿಗೆ ಆ ಅದೃಷ್ಟ ಇರಲಿಲ್ಲ. ಆ ಟೆಂಪೋದಲ್ಲಿದ್ದವರು ಕೆರೆಗೆ ಹಾರವಾಗಿದ್ದರು.

ಮೃತ ದೇಹ ಹೊರ ತೆಗೆಯುವ ಸಾಹಸ

ಇ‌ನ್ನು ಅಲ್ಲಿದ್ದ ಸ್ಥಳೀಯರಿಗೆ ಆ ಕೆರೆಯ ಹೆಸರೇ ಗೊತ್ತಿರಲಿಲ್ಲ. ನಂತರ ನನಗೆ ಗೊತ್ತಾಗಿದ್ದು ಅಸಲಿಗೆ ಅದು ಕೆರೆಯೇ ಆಗಿರಲಿಲ್ಲ ಬದಲಿಗೆ ಅಲ್ಲಿ ಇಟ್ಟಿಗೆಗಾಗಿ ಮಣ್ಣು ತೆಗೆದು‌ ತೆಗೆದು ಹಳ್ಳವಾಗಿತ್ತು. ಆ ಹಳ್ಳದಲ್ಲಿ ಮಳೆಯ ನೀರು ಬಂದು ತುಂಬಿಕೊಂಡು ಕೆರೆಯಂತಾಗಿತ್ತು. ಇನ್ನು ಕಾರ್ಯಾಚರಣೆ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಒಬ್ಬ ಮಹಿಳೆಯ ಮೃತದೇಹ ಸಿಕ್ಕಿತು. ಅಲ್ಲಿದ್ದವರ ದುಖಃ ನರಳಾಟ ಮುಗಿಲು‌ ಮುಟ್ಟಿತು. ಅದಾದ ನಂತರ ಒಂದರ ಹಿಂದೊಂದರಂತೆ ಮೃತದೇಹಗಳನ್ನು ಹೊರ ತೆಗೆದಾಗಲೂ ಸಂಬಂಧಿಕರ ಕಣ್ಣೀರ ಕಟ್ಟೆಯೊಡೆಯುತಿತ್ತು. ಆ್ಯಂಬುಲೆನ್ಸ್ ಮುಖಾಂತರ ತೆಗೆದ ಶವಗಳನ್ನು ಕೆ ಆರ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗುತಿತ್ತು. ಅಲ್ಲಿದ್ದ ಯಾರಿಗೂ ಟೆಂಪೋ ಒಳಗೆ ಎಷ್ಟು ಜನರಿದ್ದರು ಯಾರು ಯಾರು ಇದ್ದರು ಅನ್ನೋದರ ಬಗ್ಗೆ ನಿಖರ ಮಾಹಿತಿ ಇರಲಿಲ್ಲ. ಮೃತದೇಹಗಳ‌ನ್ನು ಹೊರತೆಗೆದಾಗಲೂ ಅದನ್ನೇ ಎಣಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ನಾನು ನನ್ನ ಇನ್ನೊಬ್ಬ ಕ್ಯಾಮೆರಾಪರ್ಸನ್‌ನ್ನು ಮೈಸೂರಿನ ಕೆ ಆರ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದೆ. ಇಲ್ಲಿಂದ ಹೊರಟ ಮೃತದೇಹ ಶವಾಗಾರಕ್ಕೆ ಬಂದ ಮೃತದೇಹಗಳನ್ನು ಟ್ಯಾಲಿ ಮಾಡಲು ಶುರು ಮಾಡಿದೆವು. ಮೊದಲ ಮೃತದೇಹದಿಂದ ಆರಂಭವಾದ ಸಂಖ್ಯೆ ಒಂದಲ್ಲ, ಎರಡಲ್ಲ, ಮೂರಲ್ಲ ಬರೋಬ್ಬರಿ 31 ಶವಗಳನ್ನು ಹೊರತೆಗೆಯಲಾಯ್ತು. ಎಲ್ಲಾ ಶವಗಳು ಸುಲಭವಾಗಿ ಸಿಕ್ಕವು. ಯಾಕಂದ್ರೆ ಬಹುತೇಕ ಮೃತದೇಹಗಳು ಟೆಂಪೋ ಒಳಗಡೆಯೇ ಇದ್ದವು. ಕೆಲವು ಮೃತದೇಹಗಳು ಟೆಂಪೋ ಮುಳುಗಿದ ಸ್ಥಳದ ಸುತ್ತಮುತ್ತ ಸಿಕ್ಕಿದವು. ಸೂರ್ಯ ಮುಳುಗುವ ಸಮಯಕ್ಕೆ ಬಹುತೇಕ‌ ಮೃತದೇಹಗಳನ್ನು ತೆಗೆಯುವ ಕೆಲಸ‌ ಮುಗಿದಿತ್ತು.

ಶವ ಹಿಡಿದ ಇನ್ಸಪೆಕ್ಟರ್ ಕಣ್ಣಲ್ಲಿ ಜಿನುಗಿತು ನೀರು

ಒಂದಲ್ಲ ಎರಡಲ್ಲ 31 ಮೃತದೇಹಗಳನ್ನು ಹೊರಗೆ ತೆಗೆದಾಗಲೂ ಎಲ್ಲರ ದುಖಃ ಮುಗಿಲು ಮುಟ್ಟುತ್ತಿತ್ತು. ಅದರಲ್ಲೂ ಆ ಬಾಲಕಿಯ ಶವ ಹೊರ ತೆಗೆದಾಗಲಂತೂ ಅಬ್ಬಾ ಆ ದೃಶ್ಯ ನೆನೆಸಿಕೊಂಡರೆ ಈಗಲೂ ಕಣ್ಣಾಲಿಗಳು ತೇವಗೊಳ್ಳುತ್ತವೆ, ಕೊರಳು ಉಬ್ಬಿ ಬರುತ್ತದೆ. ಬಹುಶಃ 5ರಿಂದ 6 ವರ್ಷದ ಬಾಲಕಿಯ ಮೃತದೇಹ ಅದಾಗಿತ್ತು. ಕೆರೆಯಿಂದ ಮೇಲೆತ್ತಿ ಕೆರೆಯ ದಡದಲ್ಲಿದ್ದ ಇನ್ಸಪೆಕ್ಟರ್ ಗೋಪಾಲಕೃಷ್ಣ ಅವರ ಕೈಗೆ ನೀಡಲಾಯ್ತು. ನೀಲಿ ಬಣ್ಣದ ಹೊಸ ಲಂಗ ದಾವಣಿ ತೊಟ್ಟಿದ್ದ ಬಾಲಕಿಯ ಶವ ಕೈಗೆ ಬರುತ್ತಿದ್ದಂತೆ ನೆರೆದಿದ್ದವರೆಲ್ಲರ ಕಣ್ಣುಗಳು ತೇವಗೊಂಡವು. ಇನ್ಸಪೆಕ್ಟರ್ ಗೋಪಾಲಕೃಷ್ಣ ಗಳಗಳನೇ ಅತ್ತುಬಿಟ್ಟರು. ಆ ಮಗುವಿನ ಮೃತದೇಹವನ್ನು ಎರಡು ಕೈಗಳಲ್ಲಿ ಚಾಚಿ ಎತ್ತುಕೊಂಡಾಗ ಆ ಮಗುವಿನ ಕುತ್ತಿಗೆ ಕೆಳ ಭಾಗಕ್ಕೆ ಜೀಗಿತು ಆ ದೃಶ್ಯ ನೋಡಿದ ಮೇಲಂತೂ ನೆರೆದಿದ್ದವರ ಕಣ್ಣೀರಿನ‌ ಕಟ್ಟೆಯೊಡೆಯಿತು. ಬಾಲಕಿಯ ಮೃತ ದೇಹ ನೋಡಿ ಮೃತರ ಸಂಬಂಧಿಕರು ಮಾತ್ರವಲ್ಲ ಅಲ್ಲಿದ್ದ ಎಲ್ಲರೂ ಕಣ್ಣೀರಾಕಿದರು. ಆ ಕ್ರೂರ ವಿಧಿಯನ್ನು ಶಪಿಸಿದರು.

ಘಟನೆ ನಡೆದ ನಂತರವೂ ಬದಲಾಗದ ಪರಿಸ್ಥಿತಿ

ಇನ್ನು ಈ ಘೋರ ದುರ್ಘಟನೆಗೆ ಪ್ರಮುಖ ಕಾರಣ ಚಾಲಕನ ಬೇಜವಾಬ್ದಾರಿ ಹಾಗೂ ಆ ಕೆರೆಗೆ ಇಲ್ಲದ ತಡೆಗೋಡೆ. ಘಟನೆ ನಡೆದ ಬಳಿಕ ಜಿಲ್ಲಾಡಳಿತ ಇದೊಂದು ಕೆರೆಗೆ ತಡೆಗೋಡೆ ನಿರ್ಮಿಸಿ ಕೈ ತೊಳೆದುಕೊಂಡಿತು. ಉಳಿದಂತೆ ಇದೇ ಕೆರೆಯಂತೆ ಅಪಾಯವಿರುವ ದಳವಾಯಿ ಕೆರೆ ಮತ್ತು ಈ ಮಾರ್ಗದಲ್ಲಿ ಬರುವ ಇನ್ನಿತರೆ ಕೆರೆಗಳಿಗೆ ಮಾತ್ರ ರಕ್ಷಣಾ ತಡೆ ನಿರ್ಮಾಣ ಮಾಡುವ ಗೋಜಿಗೆ ಹೋಗಲಿಲ್ಲ. ಮೈಸೂರು ಬಳಿಯ ಮತ್ತೊಂದು ದೊಡ್ಡಕೆರೆ ವರುಣಾ ಕೆರೆಯೂ ಇಂಥದೇ ಅಪಾಯವನ್ನು ಹೊಂದಿದೆ. ಟಿ.ನರಸೀಪುರ ಮಾರ್ಗವಾಗಿ ಪ್ರಯಾಣಿಸುವವರು ಇದೇ
ಕೆರೆ ಏರಿ ಮೇಲೆ ಪ್ರಯಾಣಿಸಬೇಕು. ಇಲ್ಲಿ ಇದುವರೆಗೆ ರಕ್ಷಣಾ ತಡೆಯನ್ನು ನಿರ್ಮಿಸಿಲ್ಲ. ಒಂದು ಕೆರೆ ದುರಂತ ಇತರ ಕೆರೆಗಳ ಪಾಲಿಗೆ ಪಾಠವಾಗಿಲ್ಲ. ಮತ್ತೊಂದು ದುರಂತ ಸಂಭವಿಸಿದಾಗ ಇಂತಹ ಕೂಗುಗಳು ಮತ್ತೆ ಪ್ರತಿಧ್ವನಿಸುತ್ತವೆ. ಆದರೆ ಪರಿಸ್ಥಿತಿ ಮಾತ್ರ ಬದಲಾಗುವುದಿಲ್ಲ.

ಕೊನೆಯಾಗಲಿ ಎಂದು ಅಂದುಕೊಂಡೆ

ಈ ಘಟನೆಗೂ ಮುನ್ನ ಘಟನೆಯ ನಂತರವೂ ಹಲವು ಅಪಘಾತದ ಸುದ್ದಿಗಳನ್ನು ವರದಿ ಮಾಡಿದ್ದೇನೆ. ಭೀಕರ ಅಪಘಾತಗಳನ್ನು ಕಂಡಿದ್ದೇನೆ. ಆದರೆ ಇಂತಹ ಘೋರ ಅಪಘಾತವನ್ನು ನಾನು ಕಂಡಿಲ್ಲ. ಅವತ್ತು ನಾನು ಆ ದೇವರಲ್ಲಿ ಬೇಡಿಕೊಂಡಿದ್ದು, ಆ ದೇವರು ಅಂತಾ ಇದ್ದರೆ ಇಂತಹ ಘಟನೆಗಳು ಇನ್ನೆಂದೂ ನಡೆಯದಿರಲಿ ಅಂತ. ಅದನ್ನು ಬಿಟ್ಟು ಬೇರೆ ಏನು ಮಾಡದ ಸ್ಥಿತಿಯಲ್ಲಿ ಅಂದು ನಾನಿರಲಿಲ್ಲ. ಇನ್ನು ಆ ಘಟನೆ ನಡೆದು ಬರೋಬ್ಬರಿ 12 ವರ್ಷ ಕಳೆದಿದೆ. ಆದರೂ ಆ ಭೀಕರತೆ, ಕರಾಳತೆ, ಆ ಭಯಾನಕ‌ ಮನಕಲಕುವ ದೃಶ್ಯ, ಏನೂ ಅರಿಯದ ಮಹಿಳೆಯರು, ಮುಗ್ದ ಕಂದಮ್ಮಗಳು ಕೆರೆಗೆ ಹಾರವಾದ ಆ ದುರ್ಘಟನೆ ಈಗಲೂ ನನ್ನನ್ನು ಕಾಡುತ್ತಿರುವುದು ಸುಳ್ಳಲ್ಲ.

ಪ್ರತಿಕ್ರಿಯೆಗಾಗಿ : [email protected]

ಈ ಅಂಕಣದ ಎಲ್ಲಾ ಬರಹಗಳನ್ನೂ ಇಲ್ಲಿ ಓದಿ : https://tv9kannada.com/tag/reporters-diary

TV9 Kannada


Leave a Reply

Your email address will not be published. Required fields are marked *