
ರಾಮ್, ಟಿವಿ9 ಕನ್ನಡ, ಮೈಸೂರು
Mother and Child : ಅವತ್ತೊಂದು ದಿನ ವ್ಯಾನ್ನಲ್ಲಿ ಬಂದ ಪತಿ ಏಕಾಏಕಿ ಹಾಲು ಕುಡಿಯುತ್ತಿದ್ದ ಹಸುಗೂಸು ಹಾಗೂ ಮತ್ತೊಂದು ಮಗುವನ್ನು ಎತ್ತಿಕೊಂಡು ಹೋಗಿಬಿಟ್ಟ. ಆಕೆಗೆ ಏನಾಗುತ್ತಿದೆ ಅಂತಾ ಗೊತ್ತಾಗುವ ಮುನ್ನವೇ ಮಗುವಿನ ಜೊತೆ ಪತಿ ನಾಪತ್ತೆಯಾಗಿದ್ದ.
Reporter’s Dairy : ಸುದ್ದಿಮನೆಯ ಧಾವಂತ, ಹುಡುಕಾಟ ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರತಿನಿತ್ಯ ಹೊಸತೊಂದು ಸ್ಟೋರಿಯ ಹುಡುಕಾಟದಲ್ಲಿ ನಿರತರಾಗಿರುವುದು ನಮ್ಮ ನಿತ್ಯದ ಕಾಯಕ. ಅದು 2010 ಇದೇ ರೀತಿಯ ಸುದ್ದಿಯ ಹುಡುಕಾಟದಲ್ಲಿ ನಾನಿದ್ದೆ. ಆ ವೇಳೆ ನನ್ನ ಪರಿಚಯದ ಹಿರಿಯ ವಕೀಲರೊಬ್ಬರು ನನಗೆ ಕರೆ ಮಾಡಿದರು. ರಾಮ್, ನನ್ನ ಸ್ನೇಹಿತೆಯ ಬಳಿ ಒಬ್ಬರು ಜ್ಯೂನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಕೆ ತುಂಬಾ ಸಮಸ್ಯೆಯಲ್ಲಿದ್ದಾರೆ. ಪೊಲೀಸ್ ಸ್ಟೇಷನ್ಗೆ ಹೋದ್ರು ನ್ಯಾಯ ಸಿಕ್ಕಿಲ್ಲ. ಸ್ವಲ್ಪ ನೀವು ಸಹಾಯ ಮಾಡಿ ಅಂತಾ ಕೇಳಿಕೊಂಡರು. ನಾನು ಸರಿ ಆಯ್ತು ಅಂತಾ ಅಂದೆ. ಇದಾದ ಸ್ವಲ್ಪ ಸಮಯದ ನಂತರ ಒಬ್ಬರು ಕಿರಿಯ ವಕೀಲರು ನಮ್ಮ ಮೈಸೂರು ಟಿವಿ9 ಕಚೇರಿಗೆ ಬಂದರು. ಬಂದವರ ಕಣ್ಣಲ್ಲಾಗಲೇ ನೀರು ತುಂಬಿಕೊಂಡಿತ್ತು. ಅವರಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಬರೀ ಅಳು, ಅಳು. ಅವರು ಏನನ್ನು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಸುಮಾರು ಅರ್ಧ ಗಂಟೆಗಳ ನಂತರ ಸಾವರಿಸಿಕೊಂಡು ಬಿಕ್ಕುತ್ತಲೆ ತಮ್ಮ ಎಲ್ಲಾ ಕಥೆಯನ್ನು ಹೇಳಿದರು. ರಾಮ್, ವಿಶೇಷ ಪ್ರತಿನಿಧಿ, ಟಿವಿ9 ಕನ್ನಡ, ಮೈಸೂರು
ಪೊಲೀಸ್ ಅಧಿಕಾರಿಯಿಂದ ಬಂದ ವಾರ್ನಿಂಗ್
ಕಿರಿಯ ವಕೀಲೆಯ ಆರೋಪ ತನ್ನ ಪತಿ ಹಾಗೂ ಪತಿಯ ಸಹೋದರಿಯ ಬಗ್ಗೆಯಾಗಿತ್ತು. ಇಂಟರೆಸ್ಟಿಂಗ್ ಅಂದ್ರೆ ಆಕೆಯ ಪತಿಯ ಸಹೋದರಿ ಕಿರಿಯ ನ್ಯಾಯಾಧೀಶೆಯಾಗಿದ್ದರು. ಇನ್ನು ಆ ಕಿರಿಯ ವಕೀಲೆ ನ್ಯಾಯಕ್ಕಾಗಿ ಟಿವಿ9 ಬಳಿ ಬಂದ ವಿಚಾರ ಪೊಲೀಸ್ ಅಧಿಕಾರಿಯೊಬ್ಬರಿಗೆ ಅದೇಗೋ ಗೊತ್ತಾಗಿದೆ. ನನ್ನ ಪರಿಯದವರು ಆಗಿದ್ದ ಅವರು ನನಗೆ ಕರೆ ಮಾಡಿದರು. ಯಾರಾದರೂ ಸಮಸ್ಯೆ ಹೇಳಿಕೊಂಡು ಬಂದಿದ್ದಾರಾ? ಏನು ಕಥೆ ಎಂದು ಕೇಳಿದರು. ಸ್ವಲ್ಪ ಸಮಯ ಸುಮ್ಮನಾದ ಆ ಅಧಿಕಾರಿ ನಂತರ, ರಾಮ್ ಅದು ನ್ಯಾಯಾಧೀಶರಿಗೆ ಸಂಬಂಧಪಟ್ಟಿದ್ದು ಸುಮ್ನೆ ಏಕೆ ಅಂದರು. ಅವರ ಮಾತಲ್ಲಿ ನನ್ನ ಬಗ್ಗೆ ಕಳಕಳಿಯಿತ್ತು, ಮುಂದುವರಿಯಬೇಡಿ ಅನ್ನೋ ಎಚ್ಚರಿಕೆಯಿತ್ತು. ನಾನು ಅವರನ್ನು ಕೇಳಿದೆ, ಸರ್ ಎಫ್ ಐ ಅರ್ ಆಗಿದೆ ಅಲ್ವಾ? ಅದರಲ್ಲಿ ಆ ನ್ಯಾಯಾಧೀಶರ ಹೆಸರು ಇದೆ ಅಲ್ವಾ? ಎಂದಾಗ ಅವರು ಹೌದೆಂದರು. ಸರಿ ಸರ್ ನೋಡ್ತೇನೆ ಅಂತಾ ಹೇಳಿ ಕಾಲ್ ಕಟ್ ಮಾಡಿದೆ.
ಏಕೋ ಪೊಲೀಸ್ ಅಧಿಕಾರಿ ಹೇಳಿದ ಮೇಲೆ ಇನ್ನಷ್ಟು ಮಾಹಿತಿ ಕಲೆ ಹಾಕಬೇಕು ಅನಿಸಿತು. ಮತ್ತೆ ಆ ಕಿರಿಯ ವಕೀಲೆಗೆ ಕರೆ ಮಾಡಿ ಸಂಪೂರ್ಣ ದಾಖಲೆಗಳು, ಫೋಟೋಗಳನ್ನು ಕಲೆ ಹಾಕಿದೆ. ಯಾವ ಕೋನದಲ್ಲಿ ನೋಡಿದರು. ಕಿರಿಯ ವಕೀಲೆಗೆ ಅನ್ಯಾಯವಾಗಿರೋದು ಸ್ಪಷ್ಟವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಆಕೆ ಅದಾಗಲೇ ನ್ಯಾಯಕ್ಕಾಗಿ ಹಲವು ಪತ್ರಿಕೆಗಳ ಕಚೇರಿ, ಸಂಘ ಸಂಸ್ಥೆಗಳು, ಪೊಲೀಸ್ ಅಧಿಕಾರಿಗಳ ಕಚೇರಿಗಳಿಗೆ ಅಲೆದು, ಅಲೆದು ಹೈರಾಣಾಗಿದ್ದರು. ಆದ್ರೆ ಅವರಿಗೆ ಸಾಂತ್ವನ ಹೇಳುವ ಅಥವಾ ಭರವಸೆ ಕೊಡುವ ಕೆಲಸ ಯಾರು ಮಾಡಿರಲಿಲ್ಲ. ನ್ಯಾಯಾಧೀಶರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಎಲ್ಲರೂ ಹಿಂದೇಟು ಹಾಕಿ ಬಿಡುತ್ತಿದ್ದರು. ಒಂದು ಸ್ಥಳೀಯ ಪತ್ರಿಕೆಯಲ್ಲಿ ಮಾತ್ರ ಆಕೆಯ ನೋವಿನ ಬಗ್ಗೆ ಒಂದು ಕಾಲಂನಷ್ಟು ಸುದ್ದಿಯಾಗಿತ್ತು ಅಷ್ಟೇ.
ಧೈರ್ಯ ತುಂಬಿದ ಲಾಗೈಡ್
ಸಾಮಾನ್ಯವಾಗಿ ನಾನು ಮೈಸೂರಿನಲ್ಲಿ ಯಾವುದೇ ಕಾನೂನಾತ್ಮಕವಾದ ಸ್ಟೋರಿಗಳನ್ನು ಮಾಡುವ ಮುನ್ನ ನಮ್ಮ ಟಿವಿ9 ಬೆಂಗಳೂರಿನ ಹಿರಿಯ ವರದಿಗಾರರಾದ ರಮೇಶ್ ಅವರನ್ನು ಸಂಪರ್ಕಿಸುತ್ತೇನೆ. ಅವರಿಗೆ ಸ್ಟೋರಿಯ ಮಾಹಿತಿ ಹಾಗೂ ಅದಕ್ಕೆ ಲಭ್ಯವಿರುವ ದಾಖಲೆ ಬಗ್ಗೆ ಹೇಳಿದರೆ ಮಾರ್ಗದರ್ಶನ ಮಾಡುತ್ತಾರೆ. ಈಗಲೂ ಅದು ಮುಂದುವರಿದಿದೆ. ಇನ್ನು ಇದರ ಜೊತೆಗೆ ನಮ್ಮ ಮೈಸೂರಿನ ಲಾಗೈಡ್ ಕನ್ನಡ ಕಾನೂನು ಮಾರ್ಗದರ್ಶಿಕೆಯ ಎಚ್. ಎನ್. ವೆಂಕಟೇಶ್ ಅವರನ್ನು ನಾನು ಸಂಪರ್ಕಿಸಿ ಈ ಬಗ್ಗೆ ಚರ್ಚೆ ಮಾಡಿದೆ. ಅವರ ಅಭಿಪ್ರಾಯ ಕೇಳಿದೆ. ಅವರು ಎಫ್ ಐ ಆರ್ನಲ್ಲಿ ನ್ಯಾಯಾಧೀಶರ ಹೆಸರು ಇದೆ. ಸಮಸ್ಯೆಗೊಳಗಾದವರು ಸಹಾ ಅವರ ಹೆಸರು ಹೇಳಿದ್ದಾರೆ ಖಂಡಿತಾ ಮಾಡಬಹುದು. ಕಾನೂನಾತ್ಮಕವಾಗಿ ಏನು ಸಮಸ್ಯೆ ಇಲ್ಲ ಅಂತಾ ತಿಳಿಸಿದರು. ಲಾಗೈಡ್ ವೆಂಕಟೇಶ್ ಅವರ ಈ ಸಲಹೆ ನನಗೆ ಆ ಸ್ಟೋರಿ ಮಾಡಲು ಧೈರ್ಯ ತುಂಬಿತು.