Rohit Sharma: ಫಿಟ್​ನೆಸ್​ ಬಗ್ಗೆ ಪ್ರಶ್ನಿಸಿದವರಿಗೆ ಅದ್ಭುತ ಕ್ಯಾಚ್ ಮೂಲಕ ಉತ್ತರ ನೀಡಿದ ಹಿಟ್​ಮ್ಯಾನ್ | IND vs WI: Captain Rohit Sharma Takes An Incredible Leaping Catch


Rohit Sharma: ಫಿಟ್​ನೆಸ್​ ಬಗ್ಗೆ ಪ್ರಶ್ನಿಸಿದವರಿಗೆ ಅದ್ಭುತ ಕ್ಯಾಚ್ ಮೂಲಕ ಉತ್ತರ ನೀಡಿದ ಹಿಟ್​ಮ್ಯಾನ್

Rohit Sharma

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ T20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ದರು. ಕೋಲ್ಕತ್ತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ರೋಹಿತ್ ಬಿರುಸಿನ ಇನ್ನಿಂಗ್ಸ್ ಆಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಕೇವಲ 19 ಎಸೆತಗಳಲ್ಲಿ 40 ರನ್ ಗಳಿಸಿದ ಹಿಟ್​ಮ್ಯಾನ್ ಭರ್ಜರಿ ಫಾರ್ಮ್​ನಲ್ಲಿರುವುದನ್ನು ಮತ್ತೊಮ್ಮೆ ತೋರಿಸಿದರು. ಅಷ್ಟೇ ಅಲ್ಲದೆ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮೈದಾನಕ್ಕೆ ಮರಳಿರುವುದನ್ನೂ ಕೂಡ ಸಾಬೀತುಪಡಿಸಿದರು.

ಕಳೆದ ಕೆಲ ತಿಂಗಳಿಂದ ಫಿಟ್​ನೆಸ್​ ಕಾರಣ ಮೈದಾನದಿಂದ ಹೊರಗುಳಿದಿದ್ದ ಹಿಟ್​ಮ್ಯಾನ್ ವೆಸ್ಟ್ ಇಂಡೀಸ್ ಸರಣಿ ಮೂಲಕ ಕಂಬ್ಯಾಕ್ ಮಾಡಿದ್ದರು. ಹೀಗಾಗಿಯೇ ರೋಹಿತ್ ಶರ್ಮಾ ಅವರ ಫಿಟ್​ನೆಸ್ ಬಗ್ಗೆ ಪ್ರಶ್ನೆಗಳು ಎದ್ದಿತ್ತು. ಆದರೆ ವಿಂಡೀಸ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ರೋಹಿತ್ ಶರ್ಮಾ ತಮ್ಮ ಫೀಲ್ಡಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.

ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನ 20 ನೇ ಓವರ್‌ನಲ್ಲಿ ಓಡಿಯನ್ ಸ್ಮಿತ್ ಭರ್ಜರಿ ಹೊಡೆತಕ್ಕೆ ಮುಂದಾದರು. ಹರ್ಷಲ್ ಪಟೇಲ್ ಅವರ ಕೊನೆಯ ಎಸೆತದಲ್ಲಿ ಸ್ಮಿತ್ ಲಾಗ್ ಆನ್ ಕಡೆಗೆ ನೇರವಾಗಿ ಹೊಡೆದರು…ಚೆಂಡು ಆಕಾಶದತ್ತ ಚಿಮ್ಮಿತ್ತು. ಗಾಳಿಯಲ್ಲಿದ್ದ ಚೆಂಡನ್ನು ಗುರುತಿಸಿದ ಸೂರ್ಯಕುಮಾರ್ ಯಾದವ್ ಓಡಿ ಬಂದರು, ಮತ್ತೊಂದು ಬದಿಯಿಂದ ರೋಹಿತ್ ಶರ್ಮಾ ಕೂಡ ಓಡಿ ಬಂದರು.

ಇನ್ನೇನು ಚೆಂಡು ಮೈದಾನಕ್ಕೆ ತಾಗಲಿದೆ ಎನ್ನುವಷ್ಟರಲ್ಲಿ ರೋಹಿತ್ ಶರ್ಮಾ ಓಡಿ ಬಂದು ಡೈವಿಂಗ್ ಮಾಡುವ ಮೂಲಕ ಕಠಿಣ ಕ್ಯಾಚ್ ಹಿಡಿದರು. ಹಿಟ್ ಮ್ಯಾನ್ ಹಿಡಿದ ಈ ಕ್ಯಾಚ್ ನೋಡಿ ಸಹ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ಅಚ್ಚರಿಗೊಂಡರು. ಇದೀಗ ಈ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೋಹಿತ್ ಶರ್ಮಾ ಅವರ ಫೀಲ್ಡಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಕೋಲಸ್ ಪೂರನ್ (61 ರನ್) ಅವರ ಅರ್ಧಶತಕದ ನೆರವಿನಿಂದ 157 ರನ್​ ಕಲೆಹಾಕಿತ್ತು. 158 ರನ್ ಗಳ ಗುರಿಗಳ ಪಡೆದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಸ್ಪೋಟಕ ಆರಂಭ ಒದಗಿಸಿದ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 7.3 ಓವರ್‌ಗಳಲ್ಲಿ 64 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅದರಂತೆ ಅಂತಿಮವಾಗಿ ಟೀಮ್ ಇಂಡಿಯಾ 18.5 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

TV9 Kannada


Leave a Reply

Your email address will not be published. Required fields are marked *