RR vs GT, IPL 2022: ಅಗ್ರಸ್ಥಾನಕ್ಕೇರಿದ ಗುಜರಾತ್: ಚೊಚ್ಚಲ ಆವೃತ್ತಿಯಲ್ಲೇ ಹಾರ್ದಿಕ್ ಟೀಮ್ ಬೊಂಬಾಟ್ ಆಟ | Hardik Pandya led from the front with a an unbeaten half century as Gujarat Titans beat Rajasthan Royals by 37 runs


RR vs GT, IPL 2022: ಅಗ್ರಸ್ಥಾನಕ್ಕೇರಿದ ಗುಜರಾತ್: ಚೊಚ್ಚಲ ಆವೃತ್ತಿಯಲ್ಲೇ ಹಾರ್ದಿಕ್ ಟೀಮ್ ಬೊಂಬಾಟ್ ಆಟ

RR vs GT IPL 2022

ಇಂಡಿಯನ್ ಪ್ರೀಮಿಯರ್ ಲೀಗ್​ 15ನೇ ಆವೃತ್ತಿಯಲ್ಲಿ ನಡೆದ 24ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಗುಜರಾತ್ ಟೈಟಾನ್ಸ್ (RR vs GT) ಭರ್ಜರಿ ಗೆಲುವು ಸಾಧಿಸಿದೆ. ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಮಿಂಚಿದ ಹಾರ್ದಿಕ್ (Hardik Pandya) ಪಡೆ 37 ರನ್​​ಗಳ ಜಯ ತನ್ನದಾಗಿಸಿತು. ಈ ಮೂಲಕ ಜಿಟಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿದ ಐದು ಪಂದ್ಯಗಳಲ್ಲಿ ಕೇವಲ ಒಂದು ಸೋಲನ್ನಷ್ಟೆ ಕಂಡು ನಾಲ್ಕು ಗೆಲುವಿನೊಂದಿಗೆ 8 ಅಂಕ ಸಂಪಾದಿಸಿದೆ. ಇತ್ತ ಸ್ಯಾಮ್ಸನ್ (Sanju Samsion) ಪಡೆ ಎರಡನೇ ಸೋಲಿನ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ. ಗುಜರಾತ್ ನೀಡಿದ್ದ ದೊಡ್ಡ ಟಾರ್ಗೆಟ್ ಅನ್ನು ಬೆನ್ನಟ್ಟುವಾಗ ಆರ್​ಆರ್​ ಸ್ಫೋಟಕ ಆರಂಭ ಪಡೆದುಕೊಂಡರೂ ನಂತರ ಸರಾಗವಾಗಿ ವಿಕೆಟ್ ಕಳೆದುಕೊಂಡು ಸಾಗಿತು. ನಾಯಕನೇ ಈ ಬಾರಿ ಕೂಡ ಮತ್ತೊಮ್ಮೆ ವಿಫಲವಾಗಿದ್ದು ತಂಡಕ್ಕೆ ಪ್ರಮುಖ ಹಿನ್ನಡೆಯಾಯಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್‌ ತಂಡ ಉತ್ತಮ ಆರಂಭ ಪಡೆಯಲು ವಿಫಲಗೊಂಡಿತು. ಆರಂಭಿಕ ಬ್ಯಾಟರ್ ಮ್ಯಾಥ್ಯೂ ವೇಡ್ 12ರನ್‌ಗೆ ರನೌಟ್‌ಗೆ ಬಲಿಯಾದರೆ, ಶುಭ್ಮನ್ ಗಿಲ್ 13ರನ್‌ಗಳಿಸಿದರು. ಇನ್ನು ಸಾಯಿ ಸುದರ್ಶನ್ ಬದಲು ಸ್ಥಾನ ಪಡೆದಿದ್ದ ಆಲ್‌ರೌಂಡರ್ ವಿಜಯ್ ಶಂಕರ್ ಕೇವಲ 2ರನ್‌ಗೆ ಕುಲ್‌ದೀಪ್ ಸೇನ್‌ಗೆ ವಿಕೆಟ್ ಒಪ್ಪಿಸಿದ್ದು ಬಹಳ ನಿರಾಸೆ ಮೂಡಿಸಿತು. 53ರನ್‌ಗೆ ಮೂರು ವಿಕೆಟ್ ಕಳೆದುಕೊಂಡ ಗುಜರಾತ್​ಗೆ ಮತ್ತೊಮ್ಮೆ ನಾಯಕ ಹಾರ್ದಿಕ್ ಪಾಂಡ್ಯ ಆಧಾರವಾದರು.

ಅಬ್ಬರದ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 52 ಎಸೆತಗಳಲ್ಲಿ ಅಜೇಯ 87 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು. ಪಾಂಡ್ಯ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 4 ಸ್ಫೋಟಕ ಸಿಕ್ಸರ್‌ಗಳಿದ್ದವು. ಹಾರ್ದಿಕ್ ಪಾಂಡ್ಯಗೆ ಉತ್ತಮ ಸಾಥ್ ಕೊಟ್ಟ ಕನ್ನಡಿಗ ಅಭಿನವ್ ಮನೋಹರ್ 28 ಎಸೆತಗಳಲ್ಲಿ 43 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಸಹಿತ ಎರಡು ಸಿಕ್ಸರ್‌ಗಳಿದ್ದವು. ಕೊನೆಯಲ್ಲಿ ಪಾಂಡ್ಯಗೆ ಉತ್ತಮ ಸಾಥ್ ಕೊಟ್ಟ ಡೇವಿಡ್ ಮಿಲ್ಲರ್ 14 ಎಸೆತಗಳಲ್ಲಿ ಅಜೇಯ 31ರನ್ ಕಲೆಹಾಕುವ ಮೂಲಕ ತಂಡದ ಸ್ಕೋರನ್ನು 190ರ ಗಡಿದಾಟಿಸಿದರು. ಅಂತಿಮವಾಗಿ ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು.

ಸವಾಲಿನ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ಗೆ ಜೋಸ್ ಬಟ್ಲರ್ ಬಿರುಸಿನ ಆರಂಭವೊದಗಿಸಿದರು. ಆದರೆ ವಿಕೆಟ್‌ನ ಮತ್ತೊಂದು ತುದಿಯಿಂದ ಉತ್ತಮ ಬೆಂಬಲ ಸಿಗಲಿಲ್ಲ. ದೇವದತ್ ಪಡಿಕ್ಕಲ್ (0) ಹಾಗೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸಿಗಿಳಿದಿದ್ದ ಆರ್. ಅಶ್ವಿನ್ (8) ನಿರಾಸೆ ಮೂಡಿಸಿದರು. ಅತ್ತ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಬಟ್ಲರ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಪವರ್ ಪ್ಲೇಯ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. 24 ಎಸೆತಗಳನ್ನು ಎದುರಿಸಿದ ಬಟ್ಲರ್ 54 ರನ್ (8 ಬೌಂಡರಿ, 3 ಸಿಕ್ಸರ್) ಗಳಿಸಿದರು. ಇದಾದ ಬೆನ್ನಲ್ಲೇ ನಾಯಕ ಸಂಜು ಸ್ಯಾಮ್ಸನ್ (11) ರನೌಟ್ ಆದರು. ರಸ್ಸಿ ವಾನ್ ಡರ್ ದುಸಾನ್ (6) ಪೆವಿಲಿಯನ್ ಸೇರುವುದರೊಂದಿಗೆ ರಾಜಸ್ಥಾನ್ 90 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಕೊನೆಯ ಹಂತದಲ್ಲಿ ಶಿಮ್ರಾನ್ ಹೆಟ್ಮೆಯರ್ (29), ರಿಯಾನ್ ಪರಾಗ್ (18) ಹಾಗೂ ಜೇಮ್ಸ್ ನೀಶಮ್ (17) ಪ್ರಯತ್ನಿಸಿದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಗುಜರಾತ್ ಪರ ಲಾಕಿ ಫರ್ಗ್ಯುಸನ್ ಹಾಗೂ ಚೊಚ್ಚಲ ಪಂದ್ಯ ಆಡಿದ ಯಶ್ ದಯಾಲ್ ತಲಾ ಮೂರು ವಿಕೆಟ್ ಕಬಳಿಸಿದರು. ಈ ಜಯದೊಂದಿಗೆ ಗುಜರಾತ್ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದರೆ ಆರ್​ಆರ್​ ಮೂರನೇ ಸ್ಥಾನಕ್ಕ ಕುಸಿಯಿತು.

IPL 2022: 3 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಸಿದ ಯುವ ವೇಗಿಗೆ ಅವಕಾಶ ನೀಡಿದ ಗುಜರಾತ್ ಟೈಟನ್ಸ್

TV9 Kannada


Leave a Reply

Your email address will not be published. Required fields are marked *