RRR Star Ram Charan Talks About Nepotism and Talent Of Actor Yash | ಡ್ರೈವರ್ ಮಗ ಯಶ್ ಸ್ಟಾರ್, ನೀವು ಸ್ಟಾರ್ ಮಗ: ನೆಪೊಟಿಸಮ್ ಕುರಿತ ಪ್ರಶ್ನೆಗೆ ರಾಮ್ ಚರಣ್ ಉತ್ತರ


ಡ್ರೈವರ್ ಮಗ ಯಶ್ ಸ್ಟಾರ್, ನೀವು ಸ್ಟಾರ್ ಮಗ ಎಂದು ಸಂದರ್ಶನ ಕೇಳಿದ ನೆಪೊಟಿಸಮ್ ಕುರಿತಾದ ಪ್ರಶ್ನೆಗೆ ನಟ ರಾಮ್ ಚರಣ್ ನೀಡಿದ ಉತ್ತರವಿದು.

ಡ್ರೈವರ್ ಮಗ ಯಶ್ ಸ್ಟಾರ್, ನೀವು ಸ್ಟಾರ್ ಮಗ: ನೆಪೊಟಿಸಮ್ ಕುರಿತ ಪ್ರಶ್ನೆಗೆ ರಾಮ್ ಚರಣ್ ಉತ್ತರ

ಯಶ್-ರಾಮ್ ಚರಣ್

ದಕ್ಷಿಣದ ನಟರು ಗಡಿ ದಾಟಿ ಬಾಲಿವುಡ್​ಗೆ (Bollywood) ಹೆಜ್ಜೆ ಇಡುತ್ತಿದ್ದಂತೆ ಅವರಿಗೂ ನೆಪೊಟಿಸಮ್ (Nepotism) ಚರ್ಚೆಯ ಬಿಸಿ ತಟ್ಟಲು ಆರಂಭಿಸಿದೆ. ನೆಪೊಟಿಸನ್​ನ ಶಿಖರ ಎನ್ನಬಹುದಾದ ತೆಲುಗು ಚಿತ್ರರಂಗದ (Tollywood) ಪ್ರಮುಖ ಸಿನಿಮಾ ಕುಟುಂಬದ ಕುಡಿ ರಾಮ್ ಚರಣ್ ಆರ್​ಆರ್​ಆರ್ ಬಳಿಕ ಬಾಲಿವುಡ್​ನಲ್ಲಿ ಸಹ ಸ್ಟಾರ್ ಎಂದೇ ಗುರುತಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ರಾಮ್ ಚರಣ್ ಭಾಗವಹಿಸಿದ್ದ ಸಂದರ್ಶನವೊಂದರಲ್ಲಿ ನೆಪೊಟಿಸಮ್ ಕುರಿತಾದ ಪ್ರಶ್ನೆ ಅವರಿಗೆ ಎದುರಾಗಿದೆ. ಕನ್ನಡದ ಸ್ಟಾರ್ ನಟ ಯಶ್ ಅವರನ್ನು ಉದಾಹರಣೆಯಾಗಿಟ್ಟುಕೊಂಡು ರಾಮ್ ಚರಣ್ ಅವರ ಸ್ಟಾರ್​ಗಿರಿಯನ್ನು ಪ್ರಶ್ನೆ ಮಾಡಲಾಗಿದೆ. ಅದಕ್ಕೆ ಸಾವಧಾನದ ಉತ್ತರವನ್ನೇ ರಾಮ್ ಚರಣ್ ನೀಡಿದ್ದಾರೆ.

ನೆಪೊಟಿಸಮ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಟ ರಾಮ್ ಚರಣ್, ”ಇದೊಂದು ಸಮೂಹ ಸನ್ನಿ ಅಥವಾ ಒಂದು ನಿರ್ದಿಷ್ಟ ಸಮೂಹದ ವಾದ ಎನಿಸುತ್ತದೆ. ಈಗ ಒಬ್ಬ ಒಳ್ಳೆಯ ಪತ್ರಕರ್ತನ ಮಗನಿಗೆ ಸಹಜವಾಗಿಯೇ ಪತ್ರಕರ್ತನಾಗುವ ಆಸೆಬರುತ್ತದೆ. ಒಬ್ಬ ಒಳ್ಳೆಯ ವೈದ್ಯ ತನ್ನ ಮಗನನ್ನು ವೈದ್ಯನನ್ನಾಗಿ ಮಾಡುವ ಪ್ರಯತ್ನವನ್ನೇ ಮಾಡುತ್ತಾನೆ. ಹಾಗೆಯೇ ನಾನು ಚಿಕ್ಕಂದಿನಿಂದಲೂ ಸಿನಿಮಾಗಳನ್ನು ನೋಡುತ್ತಾ ಅದೇ ಪರಿಸರದಲ್ಲಿಯೇ ಬೆಳೆದವನು ಹಾಗಾಗಿಯೇ ಸಹಜವಾಗಿ ನಾನು ಸಿನಿಮಾಗಳತ್ತ ಆಕರ್ಷಿತನಾದೆ. ನಾನು ಸಣ್ಣ ವಯಸ್ಸಿನಿಂದಲೇ ಸಿನಿಮಾ ಶಾಲೆಗಳಲ್ಲಿ ಕಲಿಯುತ್ತಾ ಬಂದಿದ್ದೇನೆ. ನನ್ನಲ್ಲಿ ಪ್ರತಿಭೆ ಇಲ್ಲದೇ ಇದ್ದಿದ್ದರೆ ಕಳೆದ 14 ವರ್ಷದಿಂದ ನಾನು ಚಿತ್ರರಂಗದಲ್ಲಿ ಇರಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಯಾರೋ ಒಬ್ಬರ ಮಗ ಎನ್ನುವ ಕಾರಣಕ್ಕೆ ಜನ ಹಣ ಕೊಟ್ಟು ಸಿನಿಮಾಕ್ಕೆ ಬರುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ” ಎಂದಿದ್ದಾರೆ ರಾಮ್ ಚರಣ್.

ಅದೇ ಚರ್ಚೆಯನ್ನು ಮುಂದುವರೆಸಿದ ಸಂದರ್ಶಕ, ”ಕೆಲವು ತಿಂಗಳ ಹಿಂದೆ ನಟ ಯಶ್ ಸಂದರ್ಶನ ನಡೆದಿತ್ತು, ಅವರೊಬ್ಬ ಡ್ರೈವರ್ ಮಗ, ಅವರೂ ಸ್ಟಾರ್, ನೀವು ಸ್ಟಾರ್ ನಟ ಚಿರಂಜೀವಿ ಮಗ ನೀವೂ ಸ್ಟಾರ್” ಎಂದಿದ್ದಾರೆ. ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ರಾಮ್ ಚರಣ್, ”ಪ್ರತಿಭೆಯೇ ಎಲ್ಲವನ್ನೂ ಮಾತನಾಡುತ್ತದೆ. ನಟ ಯಶ್ ಪ್ರತಿಭೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಈ ವರೆಗೆ ಯಶಸ್ಸುಗಳಿಸಿರುವ ಎಲ್ಲ ನಟರ ಯಶಸ್ಸಿಗೆ ಕಾರಣ ಅವರ ಪ್ರತಿಭೆ ಒಂದೇ” ಎಂದಿದ್ದಾರೆ ರಾಮ್ ಚರಣ್.

ದಕ್ಷಿಣ ಭಾರತ ಸಿನಿಮಾಗಳು ಮಾಡುತ್ತಿರುವ ಮೋಡಿಯ ಬಗ್ಗೆ ಮಾತನಾಡಿರುವ ನಟ ರಾಮ್ ಚರಣ್, ”ತೆಲುಗು ಚಿತ್ರರಂಗ ಹೊಸದೊಂದು ಹಾದಿಯನ್ನು ಕಂಡುಕೊಂಡಿದೆ. ಬಾಹುಬಲಿಯಿಂದ ಶುರುವಾದ ಈ ಜರ್ನಿ ಆರ್​ಆರ್​ಆರ್​ ವರೆಗೂ ಬಂದಿದೆ. ನನಗೆ ಅನ್ನಿಸುತ್ತದೆ, ನಾವು ನಮ್ಮತನವನ್ನು ಪ್ರತಿನಿಧಿಸುವ ಕತೆಗಳನ್ನು ಕೊಟ್ಟಾಗ ಖಂಡಿತ ಎಲ್ಲ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತದೆ. ಭಾರತದಲ್ಲಿ ಅಂಥಹಾ ಹಲವು ಒರಿಜಿನಲ್ ಕತೆಗಳಿವೆ, ಒರಿಜನಲ್ ಹೇಳಬಲ್ಲ ನಿರ್ದೇಶಕರುಗಳಿದ್ದಾರೆ” ಎಂದಿದ್ದಾರೆ ನಟ ರಾಮ್ ಚರಣ್.

ಆಸ್ಕರ್ ಗೆದ್ದಿರುವ ಆರ್​ಆರ್​ಆರ್​ ಸಿನಿಮಾದಲ್ಲಿ ಜೂ ಎನ್​ಟಿಆರ್ ಜೊತೆ ನಟಿಸಿರುವ ರಾಮ್ ಚರಣ್, ನಿನ್ನೆಯಷ್ಟೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆರ್​ಆರ್​ಆರ್ ಬಳಿಕ ಇದೀಗ ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಾಯಕಿ. ನಟ ಸುನಿಲ್ ಸಹ ಜೊತೆಗಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *