ಬೆಂಗಳೂರು: ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಆರ್.ಟಿ.ಐ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಭೀಕರವಾಗಿ ದಾಳಿ ನಡೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರು ಹೊರವಲಯದ ತಾವರೆಕೆರೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸರ್ಕಾರದ ಹಣವನ್ನ ಲಪಟಾಯಿಸ್ತಿದ್ದ ಅಧಿಕಾರಿಗಳಿಗೆ ಹಲವು ಬಾರಿ ಬಿಸಿ ಮುಟ್ಟಿಸಿದ್ದ ವೆಂಕಟೇಶ್ ಎಂಬುವರ ಮೇಲೆ ದಾಳಿ ನಡೆಸಲಾಗಿದೆ. ಇತ್ತೀಚೆಗೆ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದ ವೆಂಕಟೇಶ್​ ಸರ್ಕಾರದ ಗಮನಕ್ಕೆ ತರುವ ಪ್ರಯತ್ನದಲ್ಲಿದ್ದರು. ಆದರೆ ಅವರ ಮೇಲೆ ಹಾಡಹಗಲಲ್ಲೇ ದುಷ್ಕರ್ಮಿಗಳು ಭೀಕರವಾಗಿ ದಾಳಿ ನಡೆಸಿಬಿಟ್ಟಿದ್ದಾರೆ.

ತಾವರೆಕೆರೆಯ ನಿವಾಸಿಯಾಗಿರುವ ವೆಂಕಟೇಶ್ ಅವರು ನಿನ್ನೆ 11 ಗಂಟೆ ಸುಮಾರಿಗೆ ತಮ್ಮ ಬೈಕ್​ನಲ್ಲಿ ಮನೆಯಿಂದ ಹೊರಬಂದಿದ್ದಾರೆ. ಈ ವೇಳೆ ಹಿಂಬದಿಯಿಂದ ನಾಲ್ಕು ಬೈಕ್​ನಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿಗಳು ವೆಂಕಟೇಶ್​ರನ್ನ ಹಿಂಬಾಲಿಸಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಪಾಸ್ ಆಗ್ತಿದ್ದಂತೆ, ದುಷ್ಕರ್ಮಿಗಳು ಅಡ್ಡಗಟ್ಟಿ ಲಾಂಗು, ಮಚ್ಚಿನಿಂದ ಭೀಕರ ದಾಳಿ ನಡೆಸಿದ್ದಾರೆ. ಪರಿಣಾಮ, ವೆಂಕಟೇಶ್ ಬಲಗೈನ ಮುಂಗೈ ಹಾಗೂ ಒಂದು ಕಾಲು ಕಟ್ ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಲ್ಲು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಹತ್ಯೆಗೆ ಯತ್ನ?
ಸದ್ಯ ಆರ್​.ಟಿ.ಐ ಕಾರ್ಯಕರ್ತ ವೆಂಕಟೇಶ್​ ಮೇಲಾದ ಈ ದಾಳಿ ಇಂಥದ್ದೊಂದು ಪ್ರಶ್ನೆ ಹುಟ್ಟು ಹಾಕಿದೆ. ಕಾರಣ, ಆರ್.ಟಿ.ಐ ಕಾರ್ಯಕರ್ತರಾಗಿದ್ದ ವೆಂಕಟೇಶ್ ತಾವರೆಕೆರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದ್ದ ಹಲವು ಅಕ್ರಮಗಳನ್ನ ಬಯಲಿಗೆಳಿದಿದ್ರು. ರಸ್ತೆ ಕಾಮಗಾರಿ ನಡೆಸದೇ, ಹಣ ಮಂಜೂರು ಮಾಡಿಸಿಕೊಂಡು ಲೂಟಿ ಮಾಡ್ತಿದ್ದ ಕಂಟ್ರಾಕ್ಟರ್​ಗಳ ಭ್ರಷ್ಟಾಚಾರಚನ್ನ ಬಯಲಿಗೆಳೆದಿದ್ರು. ಇದರಿಂದ ತಾವರೆಕೆರೆ ಪಂಚಾಯಿತಿ ವ್ಯಾಪ್ತಿಯ ಕಂಟ್ರಾಕ್ಟರ್​​ಗಳಿಂದ ಅನೇಕ ಬಾರಿ ಬೆದರಿಕೆಗಳು ಬಂದಿದ್ದವು ಎನ್ನಲಾಗಿದೆ. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ವೆಂಕಟೇಶ್​ ಅವರು ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸಿದ್ದರು.

ಹೀಗೆ ವೆಂಕಟೇಶ್​ ಮೇಲಿನ ಹಲ್ಲೆಯ ಹಿಂದೆ ಸಾಕಷ್ಟು ಅನುಮಾನ ಮೂಡಿವೆ. ಒಟ್ಟಿನಲ್ಲಿ ಆರ್.ಟಿ.ಐ ಕಾರ್ಯಕರ್ತ ವೆಂಕಟೇಶ್​ ಮೇಲೆ ಹಾಡಹಗಲೇ ನಡೆದಿರೋ ಈ ದಾಳಿಯಿಂದ ಇಡೀ ತಾವರೆಕೆರೆಯೇ ಬೆಚ್ಚಿಬಿದ್ದಿದೆ. ಘಟನೆ ನಡೆದ ಸ್ಥಳಕ್ಕೆ ರಾಮನಗರ ಎಸ್.ಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಆರೋಪಿಗಳ ದುಷ್ಕೃತ್ಯ ಸಂಪೂರ್ಣ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಶುರುವಾಗಿದೆ. ಪ್ರಕರಣದ ಸಂಬಂಧ ಐಪಿಸಿ 307 ಕೊಲೆಯತ್ನ ಅಡಿ ಕೇಸ್ ದಾಖಲಿಸಿಕೊಂಡಿರೋ ತಾವರೆಕೆರೆ ಪೊಲೀಸರು 3 ತಂಡಗಳಾಗಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

The post RTI ಕಾರ್ಯಕರ್ತನ ಕೈ, ಕಾಲು ಕಟ್ ಮಾಡಿ ಹತ್ಯೆಗೆ ಯತ್ನ; ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದೇ ತಪ್ಪಾಯ್ತಾ? appeared first on News First Kannada.

Source: newsfirstlive.com

Source link