ಹಿರಿಯ ನಟ ಶಿವರಾಂ (ಸಂಗ್ರಹ ಚಿತ್ರ)
ಸ್ಯಾಂಡಲ್ವುಡ್ ಹಿರಿಯ ನಟ ಎಸ್.ಶಿವರಾಂ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲು ಕನ್ನಡ ಚಿತ್ರರಂಗದ ಹಿರಿಯರು ಆಸ್ಪತ್ರೆಗೆ ಆಗಮಿಸಿದ್ದಾರೆ. ಶಿವರಾಂ ಅವರಿಗೆ ಅಪಘಾತದಲ್ಲಿ ತಲೆಯ ಭಾಗಕ್ಕೆ ತೀವ್ರ ಏಟು ಬಿದ್ದಿತ್ತು. ಚಿತ್ರರಂಗದ ಹಿರಿಯ ಕಲಾವಿದರಾದ ದೊಡ್ಡಣ್ಣ, ಭಾರತಿ ವಿಷ್ಣುವರ್ಧನ್, ಗಿರಿಜಾ ಲೋಕೇಶ್ ಮೊದಲಾದವರು ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ. ಶಿವರಾಜ್ ಕುಮಾರ್ ಕೂಡ ಸದ್ಯದಲ್ಲೇ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಿವರಾಂ ಅವರ ಆರೋಗ್ಯ ಸುಧಾರಣೆಗೆ ಎಲ್ಲರೂ ಪ್ರಾರ್ಥನೆ ಮಾಡೋಣ ಎಂದು ಭಾರತಿ ವಿಷ್ಣುವರ್ಧನ್ ನುಡಿದಿದ್ದಾರೆ. ‘‘ಬೇರೆ ಏನನ್ನೂ ಹೇಳುವ ಸ್ಥಿತಿಯಲ್ಲಿ ನಾನಿಲ್ಲ. ಆದಷ್ಟು ಬೇಗ ಅವರು ಚೇತರಿಸಿಕೊಳ್ಳಬೇಕು’’ ಎಂದು ಭಾರತಿಯವರು ಹೇಳಿದ್ದಾರೆ.
ಯಾರಿಗೆ ಏನೇ ಆದ್ರೂ ಶಿವರಾಮಣ್ಣ ಮೊದಲು ಅಲ್ಲಿ ಇರುತ್ತಿದ್ದರು,ಅ ವರು ಗುಣವಾಗಬೇಕು: ಗಿರಿಜಾ ಲೋಕೇಶ್
ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಗಿರಿಜಾ ಲೋಕೇಶ್, ‘‘ಯಾವಾಗಲೂ ಚಿತ್ರ ರಂಗದ ಬಗ್ಗೆ ಹೇಳ್ತಾ ಇದ್ದರು. ಕಳೆದ ವಾರ ಅವರ ಜೊತೆ ಸತ್ಯ ಧಾರವಾಹಿಯಲ್ಲಿ ಅಭಿನಯಿಸಿದ್ದೆ. ಈ ವಯಸ್ಸಿನಲ್ಲೂ ಅವರು ಬಣ್ಣ ಹಚ್ಚುತ್ತಿದ್ದುದನ್ನು ನೋಡಿ ಖುಷಿ ಆಗ್ತಿತ್ತು. ವೈದ್ಯರು ಏನು ಹೇಳೋ ಸ್ಥಿತಿಯಲ್ಲಿ ಇಲ್ಲ ಅಂದರು. ಇದನ್ನ ಕೇಳಿ ತುಂಬಾ ಬೇಜಾರಾಯ್ತು. ಯಾರಿಗೆ ಏನೇ ಆದರೂ ಮೊದಲು ಶಿವರಾಮಣ್ಣ ಅಲ್ಲಿ ಇರ್ತಿದ್ದರು. ಈಗ ಇಂತಹ ಸ್ಥಿತಿಗೆ ಬಂದಿದ್ದಾರೆ. ಅವರು ಗುಣ ಆಗಬೇಕು ಅಂತ ಕೇಳಿಕೊಳ್ಳುತ್ತೇನೆ’’ ಎಂದು ಹೇಳಿದ್ದಾರೆ.
ಗುಣಮುಖರಾಗಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ: ಹಿರಿಯ ನಟ ದೊಡ್ಡಣ್ಣ
ಹಿರಿಯ ನಟ ದೊಡ್ಡಣ್ಣ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾತನಾಡಿದ ಅವರು, ‘‘ಶಿವರಾಂ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ರಾಜ್ ಕುಮಾರ್ ಕಾಲದಿಂದ ಚಿತ್ರರಂಗದಲ್ಲಿ ಇದ್ದವರು ಅವರು. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಅವರಿಗೆ ಈ ರೀತಿ ಆಗಬಾರದಿತ್ತು. ಅದಷ್ಟು ಬೇಗ ಗುಣಮುಖರಾಗಿ ಬರಲಿ ಅನ್ನೋದೆ ನಮ್ಮ ಎಲ್ಲರ ಹಾರೈಕೆ’’ ಎಂದು ಹೇಳಿದ್ದಾರೆ.
‘‘ಹಿರಿಯ ನಟ ಶಿವರಾಮಣ್ಣವರು ಮನೆಯಲ್ಲಿ ಪೂಜೆ ಮಾಡುವಾಗ ಬಿದ್ದು ಗಾಯಗೊಂಡಿದ್ದರು. ಅವರು ಕನ್ನಡ ಚಿತ್ರರಂಗದ ಹಿರಿಯಕೊಂಡಿ. ಡಾ.ರಾಜ್ಕುಮಾರ್ ಜತೆ ಹೆಚ್ಚಿನ ಒಡನಾಟ ಇಟ್ಕೊಂಡಿದ್ದರು. ಅವರು ಆಸ್ಪತ್ರೆಗೆ ದಾಖಲಾದ ವಿಚಾರ ತಿಳಿದು ಗಾಬರಿಯಾದೆ. ಗುಣಮುಖರಾಗಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ’’ ಎಂದು ಇದೇ ವೇಳೆ ದೊಡ್ಡಣ್ಣ ಭಾವುಕರಾಗಿ ನುಡಿದಿದ್ದಾರೆ.
ಆಸ್ಪತ್ರೆಯ ವೈದ್ಯರು ಶಿವರಾಂ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿದ್ದು, ಅವರ ಬ್ರೈನ್ ಡ್ಯಾಮೇಜ್ ಆಗಿದೆ ಎಂದಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಆಗಲು ಪವಾಡ ಸಂಭವಿಸಬೇಕು ಎಂದು ಇದೇ ವೇಳೆ ಅವರು ಹೇಳಿದ್ದಾರೆ. ನಾಡಿನೆಲ್ಲೆಡೆ ಶಿವರಾಂ ಅವರ ಆರೆಓಗ್ಯ ಸುಧಾರಣೆಗೆ ಅಭಿಮಾನಿಗಳು ಭಗವಂತನಲ್ಲಿ ಮೊರೆ ಇಟ್ಟಿದ್ದಾರೆ.