India vs South Africa 1st ODI
ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಟೆಸ್ಟ್ ಸರಣಿ ಅಂತ್ಯಕಂಡಿದೆ. 1-2 ಅಂತರದಿಂದ ಟೀಮ್ ಇಂಡಿಯಾ ಸರಣಿಯಲ್ಲಿ ಸೋಲು ಕಂಡಿದ್ದು, ಐತಿಹಾಸಿಕ ಗೆಲುವು ಸಾಧಿಸುವಲ್ಲಿ ಎಡವಿತು. ಸದ್ಯ ಟೆಸ್ಟ್ ಸರಣಿ ಬಳಿಕ ಇದೀಗ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಯಾರಾಗುತ್ತಿದ್ದು ಸೇಡಿ ತೀರಿಸಿಕೊಳ್ಳುವ ತವಕದಲ್ಲಿದೆ. ನಾಳೆ (ಜ. 19) ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಏಕದಿನ ಪಂದ್ಯ ಪಾರ್ಲ್ನ ಬೋಲ್ಯಾಂಡ್ ಪಾರ್ಕ್ನಲ್ಲಿ ನಡೆಯಲಿದೆ. ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಇಲ್ಲಿಗೆ ತಲುಪಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಕೆಎಲ್ ರಾಹುಲ್ (KL Rahul) ಮುನ್ನಡೆಸುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಉಪ ನಾಯಕನಾಗಿದ್ದಾರೆ. ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ಸರಣಿಯನ್ನು ಮುನ್ನಡೆಸುತ್ತಿರುವ ರಾಹುಲ್ ಅಭ್ಯಾಸದ ವೇಳೆ ತಮ್ಮ ಸಹ ಆಟಗಾರರೊಂದಿಗೆ ಸುದೀರ್ಘ ಚರ್ಚೆಯಲ್ಲಿ ತೊಡಗಿ ಗೇಮ್ ಪ್ಲಾನ್ ರೂಪಿಸುತ್ತಿದ್ದಾರೆ.
ಇಂಡೋ-ಆಫ್ರಿಕಾ ಮೊದಲ ಏಕದಿನ ಪಂದ್ಯ ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?, ಭಾರತ ತಂಡ ಹೇಗಿದೆ? ಎಂಬ ಬಗೆಗಿನ ಮಾಹಿತಿಯನ್ನು ನೋಡುವುದಾದರೆ…
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಜನವರಿ 19 ರಿಂದ ಆರಂಭವಾಗಲಿದೆ.
ಮೊದಲ ಪಂದ್ಯ ಪಾರ್ಲ್ನ ಬೋಲ್ಯಾಂಡ್ ಪಾರ್ಕ್ನಲ್ಲಿ ನಡೆಯಲಿದೆ.
ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎಲ್ಲ ಏಕದಿನ ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರ ಕಾಣಲಿದೆ. ಡಿಸ್ನಿ+ ಹಾಟ್ಸ್ಟಾರ್ನಲ್ಲೂ ಲೈವ್ ಸ್ಟ್ರೀಮ್ ಆಗಲಿದೆ.
ವೆಂಕಟೇಶ್ ಅಯ್ಯರ್ ಪದಾರ್ಪಣೆ:
ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಪದಾರ್ಪಣೆ ಮಾಡುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಾಯಕ ಕೆಎಲ್ ರಾಹುಲ್ ಸುಳಿವು ನೀಡಿದ್ದಾರೆ. “ಮುಂದಿನ ಸರಣಿಗಾಗಿ ತಂಡದಲ್ಲಿ ಕೆಲವು ಬದಲಾವಣೆಯನ್ನು ಮಾಡಲು ನಾನು ಹೆದರುವುದಿಲ್ಲ. ನಮ್ಮ ಗುರಿ ವಿಶ್ವಕಪ್ ಮೇಲಿದೆ. ಹೀಗಾಗಿ ನಾನು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. 6ನೇ ಬೌಲಿಂಗ್ ಆಯ್ಕೆ ಬಹಳ ಮುಖ್ಯವಾಗಿದೆ. ನಮ್ಮಲ್ಲಿ ವೆಂಕಟೇಶ್ ಅಯ್ಯರ್ ಇರುವುದರಿಂದ ಅವರಿಗೆ ಅವಕಾಶ ನೀಡವ ಬಗ್ಗೆ ಯೋಚಿಸುತ್ತೇವೆ. ಹಿಂದಿನ ಪಂದ್ಯಗಳಲ್ಲಿ ತಂಡಕ್ಕೆ ಅವರು ಉತ್ತಮ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ 6ನೇ ಬೌಲರ್ ಆಯ್ಕೆ ಬಹಳ ಮುಖ್ಯ ಪಾತ್ರವಹಿಸಲಿದೆ. ಎಲ್ಲ ತಂಡ ಅದರ ಕಡೆ ಗಮನ ಹರಿಸುತ್ತಿದೆ”, ಎಂದು ರಾಹುಲ್ ಹೇಳಿದ್ದಾರೆ.
ಉಭಯ ತಂಡಗಳು ಇಂತಿವೆ:
ಭಾರತ ತಂಡ: ಕೆ.ಎಲ್.ರಾಹುಲ್ (ನಾಯಕ), ಜಸ್ಪ್ರೀತ್ ಬುಮ್ರಾ (ಉಪ-ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್ಕೀಪರ್), ಇಶಾನ್ ಕಿಶನ್ (ವಿಕೆಟ್ಕೀಪರ್), ಯುಜ್ವೇಂದ್ರ ಚಹಾಲ್, ಆರ್. ಅಶ್ವಿನ್, ಭುವನೇಶ್ವರ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್ ಹಾಗೂ ನವದೀಪ್ ಸೈನಿ.
ದ. ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್ (ಉಪನಾಯಕ), ಕ್ವಿಂಟನ್ ಡಿ ಕಾಕ್, ಯನಮಾನ್ ಮಲನ್, ಜುಬೇರ್ ಹಮ್ಜಾ, ಮಾರ್ಕೊ ಯಾನ್ಸನ್, ಸಿಸಂದಾ ಮಂಗ್ಲಾ, ಏಡನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ವೇಯ್ನ್ ಪಾರ್ನೆಲ್, ಆಂಡಿಲ್ ಫೆಹ್ಲುಕ್ವಾಯೊ, ಡ್ವೇಯ್ನ್ ಪ್ರಿಟೋರಿಯಸ್, ಕಾಗಿಸೋ ರಬಡಾ , ತಬ್ರೇಜ್ ಶಂಬಾಡಾ , ರಾಸಿ ವಾನ್ ಡೆರ್ ಡುಸ್ಸೆನ್, ಕೈಲ್ ವೆರೆನ್.
KL Rahul Press Conference: ಕೆಎಲ್ ರಾಹುಲ್ ಸುದ್ದಿಗೋಷ್ಠಿ: ಏನೆಲ್ಲ ಹೇಳಿದ್ರು?, ಇಲ್ಲಿದೆ ಸಂಪೂರ್ಣ ಮಾಹಿತಿ