Sachin Tendulkar: ಸವ್ಯಸಾಚಿ ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ 32 ವರ್ಷ! ಹೇಗಿತ್ತು ಗೊತ್ತಾ ಮೊದಲ ಪಂದ್ಯ? | Sachin Tendulkar test debut on this day against Pakistan along with Waqar Younis


Sachin Tendulkar: ಸವ್ಯಸಾಚಿ ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ 32 ವರ್ಷ! ಹೇಗಿತ್ತು ಗೊತ್ತಾ ಮೊದಲ ಪಂದ್ಯ?

ಅಜರ್​ ಜೊತೆ ಸಚಿನ್

15 ನವೆಂಬರ್ 1989 ರ ದಿನಾಂಕವು ಕ್ರಿಕೆಟ್ ಇತಿಹಾಸದ ಸುವರ್ಣ ದಿನಗಳಲ್ಲಿ ಒಂದಾಗಿದೆ. ಈ ದಿನ ಇಬ್ಬರು ಶ್ರೇಷ್ಠ ಆಟಗಾರರು ಒಟ್ಟಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಈ ದಿನಾಂಕದ ನಂತರ, ಅವರು ಹಲವಾರು ವರ್ಷಗಳ ಕಾಲ ಕ್ರಿಕೆಟ್ ಕ್ಷೇತ್ರವನ್ನು ಅಕ್ಷರಶಃ ಆಳಿದರು. ತಮ್ಮ ಆಟದಿಂದಾಗಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾಧಿಸಿದರು. ಈ ಆಟಗಾರರು ಸಚಿನ್ ತೆಂಡೂಲ್ಕರ್ ಮತ್ತು ವಕಾರ್ ಯೂನಿಸ್. ಸಚಿನ್ ತೆಂಡೂಲ್ಕರ್ 15 ನವೆಂಬರ್ 1989 ರಂದು ಪಾಕಿಸ್ತಾನದ ವಿರುದ್ಧ ಕರಾಚಿ ಟೆಸ್ಟ್‌ನಿಂದ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಈ ಪಂದ್ಯದಿಂದ ವಕಾರ್ ಯೂನಿಸ್ ಅವರ ಟೆಸ್ಟ್ ವೃತ್ತಿಜೀವನವೂ ಆರಂಭವಾಯಿತು. ಈ ಪಂದ್ಯ ಡ್ರಾ ಆಗಿದ್ದರೂ, ಈ ಇಬ್ಬರು ಆಟಗಾರರ ಚೊಚ್ಚಲ ಪಂದ್ಯದಿಂದಾಗಿ ಇದು ಸ್ಮರಣೀಯವಾಯಿತು. ಸಚಿನ್ ತನ್ನ ಮೊದಲ ಟೆಸ್ಟ್‌ನಲ್ಲಿ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಆದರೆ ವಕಾರ್ ನಾಲ್ಕು ವಿಕೆಟ್‌ಗಳನ್ನು ಪಡೆದು ಅದ್ಭುತ ಸಾಧನೆ ಮಾಡಿದರು.

ಸಚಿನ್ ತೆಂಡೂಲ್ಕರ್ ಟೆಸ್ಟ್ ಪದಾರ್ಪಣೆ ಮಾಡಿದಾಗ ಅವರ ವಯಸ್ಸು 16 ವರ್ಷ 205 ದಿನಗಳು. ಆಗ ಅವರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಮೂರನೇ ಕಿರಿಯ ಆಟಗಾರರಾಗಿದ್ದರು. ಪಾಕಿಸ್ತಾನದ ಮುಷ್ತಾಕ್ ಮೊಹಮ್ಮದ್ ಮತ್ತು ಆಕಿಬ್ ಜಾವೇದ್ ಚಿಕ್ಕ ವಯಸ್ಸಿನಲ್ಲೇ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ಭಾರತದಿಂದ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎನಿಸಿಕೊಂಡರು. ಅದೇ ಸಮಯದಲ್ಲಿ, ವಕಾರ್ ಯೂನಿಸ್ ಅವರ ಟೆಸ್ಟ್ ಪದಾರ್ಪಣೆಯ ಸಮಯದಲ್ಲಿ ವಯಸ್ಸು 17 ವರ್ಷ 364 ದಿನಗಳು. ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ಕ್ರಿಸ್ ಶ್ರೀಕಾಂತ್, ಪಾಕಿಸ್ತಾನದ ನಾಯಕ ಇಮ್ರಾನ್ ಖಾನ್ ಆಗಿದ್ದರು. ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕಪಿಲ್ ದೇವ್ ಉತ್ತಮ ಆರಂಭವನ್ನು ಪಡೆದರು. ಆರಂಭಿಕ ಅಮೀರ್ ಮಲಿಕ್ ಅವರನ್ನು ಖಾತೆ ತೆರೆಯದೆ ಔಟ್ ಮಾಡಿದರು. ಆದರೆ ಇದಾದ ನಂತರ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಿದರು. ಇಮ್ರಾನ್ ಖಾನ್ (ಔಟಾಗದೆ 109), ಜಾವೇದ್ ಮಿಯಾಂದಾದ್ (78), ಶೋಯೆಬ್ ಮೊಹಮ್ಮದ್ (67) ಅವರ ಇನ್ನಿಂಗ್ಸ್‌ನಿಂದ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 409 ರನ್ ಗಳಿಸಿತು. ಭಾರತ ಪರ ಮನೋಜ್ ಪ್ರಭಾಕರ್ ಐದು ಮತ್ತು ಕಪಿಲ್ ದೇವ್ ನಾಲ್ಕು ವಿಕೆಟ್ ಪಡೆದರು.

ಭಾರತದ ಇನ್ನಿಂಗ್ಸ್
ಇದಕ್ಕೆ ಪ್ರತಿಯಾಗಿ ಭಾರತದ ಸ್ಥಿತಿ ಹದಗೆಟ್ಟಿತ್ತು. ವಾಸಿಂ ಅಕ್ರಮ್ ಮತ್ತು ವಕಾರ್ ಯೂನಿಸ್ 85 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಉರುಳಿಸಿದರು. ಕ್ರಿಸ್ ಶ್ರೀಕಾಂತ್ (4), ನವಜೋತ್ ಸಿಧು (0), ಸಂಜಯ್ ಮಂಜ್ರೇಕರ್ (3), ಮನೋಜ್ ಪ್ರಭಾಕರ್ (9), ಮೊಹಮ್ಮದ್ ಅಜರುದ್ದೀನ್ (35) ಮತ್ತು ಸಚಿನ್ ತೆಂಡೂಲ್ಕರ್ (15) ಅಗ್ಗವಾಗಿ ಔಟಾದರು. ಸಚಿನ್ ಅವರನ್ನು ವಕಾರ್ ಯೂನಸ್ ಬೇಟೆಯಾಡಿ ಬೌಲ್ಡ್ ಮಾಡಿದರು. ಸಚಿನ್ ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದರು. ಭವಿಷ್ಯದಲ್ಲಿ ಸಚಿನ್ ರನ್‌ಗಳ ರಾಜನಾಗುತ್ತಾನೆ ಮತ್ತು ಪ್ರತಿ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆಯುತ್ತಾನೆ ಎಂದು ಯಾರೂ ಭಾವಿಸಿರಲಿಲ್ಲ.

ಕಿರಣ್ ಮೋರೆ (58), ಕಪಿಲ್ ದೇವ್ (55) ಮತ್ತು ರವಿಶಾಸ್ತ್ರಿ (45) ಅವರ ಇನ್ನಿಂಗ್ಸ್‌ನಿಂದ ಭಾರತ 262 ರನ್ ಗಳಿಸಿತು. ಪಾಕ್ ಪರ ಪದಾರ್ಪಣೆ ಮಾಡಿದ ವಕಾರ್ ಯೂನಿಸ್ 80 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿ ಯಶಸ್ವಿಯಾದರು. ವಾಸಿಂ ಅಕ್ರಮ್ 83 ರನ್‌ಗಳಿಗೆ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು.

ಎರಡನೇ ಇನಿಂಗ್ಸ್‌ನಲ್ಲಿ ಮಂಜ್ರೇಕರ್ ಶತಕ
ಎರಡನೇ ಇನಿಂಗ್ಸ್‌ನಲ್ಲಿ ಸಲೀಂ ಮಲಿಕ್ (102) ಮತ್ತು ಶೋಯೆಬ್ ಮೊಹಮ್ಮದ್ (95) ಅವರ ಶತಕದ ನೆರವಿನಿಂದ ಪಾಕಿಸ್ತಾನ ಐದು ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತಕ್ಕೆ ಗೆಲ್ಲಲು 453 ರನ್ ಗಳ ಗುರಿ ನೀಡಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಭಾರತ ಅಮೋಘ ಆಟ ಪ್ರದರ್ಶಿಸಿತು. ಸಂಜಯ್ ಮಂಜ್ರೇಕರ್ (113) ಶತಕ ಹಾಗೂ ನವಜೋತ್ ಸಿಧು 85 ರನ್‌ಗಳ ಇನಿಂಗ್ಸ್‌ ಆಡಿದರು. ಡ್ರಾ ಒಪ್ಪಂದದ ವೇಳೆಗೆ ಭಾರತ ಮೂರು ವಿಕೆಟ್‌ಗೆ 303 ರನ್ ಗಳಿಸಿತ್ತು.

TV9 Kannada


Leave a Reply

Your email address will not be published. Required fields are marked *