Samantha Birthday: ಸಮಂತಾ ಜನ್ಮದಿನ: ಮದುವೆ, ವಿಚ್ಛೇದನ ಏನೇ ಆದ್ರೂ ಕಮ್ಮಿ ಆಗಿಲ್ಲ ಈ ನಟಿಯ ಚಾರ್ಮ್​; ಕಾರಣವೇನು? | Samantha Birthday: Here is the reason for Samantha success even after marriage and divorce


Samantha Birthday: ಸಮಂತಾ ಜನ್ಮದಿನ: ಮದುವೆ, ವಿಚ್ಛೇದನ ಏನೇ ಆದ್ರೂ ಕಮ್ಮಿ ಆಗಿಲ್ಲ ಈ ನಟಿಯ ಚಾರ್ಮ್​; ಕಾರಣವೇನು?

ಸಮಂತಾ

ನಟಿ ಸಮಂತಾ (Samantha) ಅವರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಣ್ಣದ ಲೋಕದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿರುವ ಅವರು ಇಂದಿಗೂ ಬಹುಬೇಡಿಕೆಯ ಕಲಾವಿದೆಯಾಗಿ ಚಾರ್ಮ್​ ಉಳಿಸಿಕೊಂಡಿದ್ದಾರೆ. ಮದುವೆ, ವಿಚ್ಛೇದನ ಆದ ಬಳಿಕವೂ ಅವರಿಗೆ ಇದ್ದ ಡಿಮ್ಯಾಂಡ್​ ಕಮ್ಮಿ ಆಗಿಲ್ಲ. ಇಂದು (ಏ.28) ಸಮಂತಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸಮಂತಾ ಬರ್ತ್​ಡೇ (Samantha Birthday) ಪ್ರಯುಕ್ತ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಹಾಗೂ ಆಪ್ತರು ಶುಭಾಶಯ ತಿಳಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಈಗ ಸಮಂತಾಗೆ 35 ವರ್ಷ ವಯಸ್ಸು. ಅನೇಕ ಸಿನಿಮಾಗಳನ್ನು (Samantha Movies) ಅವರು ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಕಾಲ್​ಶೀಟ್​ ಪಡೆಯಲು ನಿರ್ಮಾಪಕರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಬದುಕಿನಲ್ಲಿ ಸಮಂತಾ ತೆಗೆದುಕೊಂಡು ಕೆಲವು ಗಟ್ಟಿ ನಿರ್ಧಾರಗಳೇ ಅವರ ಈ ಯಶಸ್ಸಿಗೆ ಕಾರಣ. ಆ ನಿರ್ಧಾರಗಳು ಅವರ ಖಾಸಗಿ ಜೀವನದ ಮೇಲೆ ಪರಿಣಾಮ ಬೀರಿರಬಹುದು. ಆದರೆ ವೃತ್ತಿಜೀವನದಲ್ಲಿ ಅವರಿಗೆ ಗೆಲುವು ತಂದುಕೊಟ್ಟಿವೆ. ಭಾಷೆ ಮತ್ತು ರಾಜ್ಯಗಳ ಗಡಿಯನ್ನೂ ಮೀರಿ ಸಮಂತಾ ಸಾಧನೆ ಮಾಡುತ್ತಿದ್ದಾರೆ.

ಚಿತ್ರರಂಗದಲ್ಲಿ ಮದುವೆ ಬಳಿಕ ನಟಿಯರ ವೃತ್ತಿಜೀವನ ಮುಕ್ತಾಯ ಆಗುತ್ತದೆ ಎಂಬ ಸವಕಲು ಮಾತಿದೆ. ಅದನ್ನು ಸುಳ್ಳು ಮಾಡಿದ ಕೆಲವೇ ಕೆಲವು ನಟಿಯರಲ್ಲಿ ಸಮಂತಾ ಕೂಡ ಪ್ರಮುಖರು. ನಾಗ ಚೈತನ್ಯ ಜೊತೆ ಮದುವೆ ಆದ ನಂತರವೂ ಅವರು ನಟನೆ ಮುಂದುವರಿಸಿದರು. ಒಂದಕ್ಕಿಂತ ಒಂದು ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಾವು ಈಗಲೂ ಚಾಲ್ತಿಯಲ್ಲಿರುವ ನಟಿ ಎಂದು ಸಾಬೀತು ಮಾಡಿದರು.

ಕೆಲವು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಕುಟುಂಬದವರ ಅನುಮತಿ ಪಡೆಯುವುದು ಅನಿವಾರ್ಯ ಆಗಬಹುದು. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಸಮಂತಾ ಅವರು ರಾಜಿ ಎಂಬ ಬೋಲ್ಡ್​ ಪಾತ್ರ ಮಾಡಿದ್ದರು. ಅದು ನಾಗ ಚೈತನ್ಯ ಮತ್ತು ಅವರ ಕುಟುಂಬಕ್ಕೆ ಹಿಡಿಸಲಿಲ್ಲ ಎಂಬ ಗಾಸಿಪ್​ ಕೇಳಿಬಂತು. ‘ಕುಟುಂಬಕ್ಕೆ ಮುಜುಗರ ಆಗುವಂತಹ ಪಾತ್ರವನ್ನು ನಾನು ಮಾಡಲ್ಲ’ ಎಂದು ಬೇರೊಂದು ಸಂದರ್ಶನದಲ್ಲಿ ನಾಗ ಚೈತನ್ಯ ಹೇಳಿದ್ದು ಇದೇ ಕಾರಣಕ್ಕಾಗಿ ಎಂದು ಜನರು ಮಾತನಾಡಿಕೊಂಡಿದ್ದುಂಟು. ಅದೇನೇ ಇರಲಿ, ಸಮಂತಾ ಅವರು ತಮಗೆ ಸರಿ ಎನಿಸಿದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದು ಕೂಡ ಅವರ ಗೆಲುವಿಗೆ ಕಾರಣ ಆಗಿದೆ.

ಕೇವಲ ಹೀರೋಯಿನ್​ ಆಗಿಯೇ ಇರುತ್ತೇನೆ ಎಂದು ಸಮಂತಾ ಬೌಂಡರಿ ಹಾಕಿಕೊಂಡು ಕುಳಿತಿಲ್ಲ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಅವರು ಮಾಡಿದ್ದು ವಿಲನ್​ ಪಾತ್ರ. ಬಳಿಕ ‘ಪುಷ್ಪ 2’ ಚಿತ್ರದಲ್ಲಿ ಐಟಂ ಡ್ಯಾನ್ಸರ್​. ಒಪ್ಪಿಕೊಂಡ ಕೆಲಸವನ್ನು ದಿ ಬೆಸ್ಟ್​ ಎಂಬ ರೀತಿಯಲ್ಲಿ ಮಾಡಿದ್ದಕ್ಕಾಗಿ ಅವರಿಗೆ ಯಶಸ್ಸು ಸಿಕ್ಕಿದೆ. ಈಗ ‘ಕಾದು ವಾಕುಲ ರೆಂಡು ಕಾದಲ್​’ ಚಿತ್ರದಲ್ಲಿ ಅವರು ನಯನತಾರಾ ಜೊತೆ ಎರಡನೇ ನಾಯಕಿ ಆಗಿ ತೆರೆಹಂಚಿಕೊಂಡಿದ್ದಾರೆ. ‘ಅರೇಂಜ್​ಮೆಂಟ್ಸ್​ ಆಫ್​ ಲವ್’ ಚಿತ್ರದಲ್ಲಿ ಕೂಡ ಅವರು ಡಿಫರೆಂಟ್​ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ‘ಯಶೋದಾ’ ಹಾಗೂ ‘ಶಾಕುಂತಲಂ’ ಸಿನಿಮಾಗಳು ಸಹ ಹೆಚ್ಚು ನಿರೀಕ್ಷೆ ಹುಟ್ಟುಹಾಕಿವೆ.

TV9 Kannada


Leave a Reply

Your email address will not be published. Required fields are marked *