Asia’s Richest Women: ಸಾವಿತ್ರಿ ಅವರ ಪತಿ ಓಪಿ ಜಿಂದಾಲ್ 2005ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದರು. ಆಗ ಸಾವಿತ್ರಿ ಜಿಂದಾಲ್ ಅನಿವಾರ್ಯವಾಗಿ ಗಂಡನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು.
ನವದೆಹಲಿ: ಏಷ್ಯಾದ ಶ್ರೀಮಂತ ಮಹಿಳೆಯ ಪಟ್ಟದಲ್ಲಿದ್ದ ಚೀನಾದ ಯಾಂಗ್ ಹುಯಿಯಾನ್ (Yang Huiyan) ಇನ್ನು ಮುಂದೆ ಆ ಸ್ಥಾನದಲ್ಲಿ ಇರುವುದಿಲ್ಲ. ಏಕೆಂದರೆ, ಭಾರತದ ಸಾವಿತ್ರಿ ಜಿಂದಾಲ್ (Savitri Jindal) ಏಷ್ಯಾದ ಅತಿ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನಲ್ಲಿ ಯಾಂಗ್ ಅವರನ್ನು ಹಿಂದಿಕ್ಕಿದ ಭಾರತದ ಸಾವಿತ್ರಿ ಜಿಂದಾಲ್ ಏಷ್ಯಾದ ಅತಿ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.
ಲೋಹಗಳು ಮತ್ತು ವಿದ್ಯುತ್ ಉತ್ಪಾದನೆ ಸೇರಿದಂತೆ ಅನೇಕ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಜಿಂದಾಲ್ ಗ್ರೂಪ್ಗೆ ಸಂಬಂಧಿಸಿರುವ ಸಾವಿತ್ರಿ ಜಿಂದಾಲ್ 11.3 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ. 2005ರಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದ ತನ್ನ ತಂದೆಯ ಪಾಲನ್ನು ಪಿತ್ರಾರ್ಜಿತವಾಗಿ ಪಡೆದ ಯಾಂಗ್ಗೆ ಇದು ಭಾರೀ ಹಿನ್ನೆಡೆಯಾಗಿದೆ. ಇವರು ಜಗತ್ತಿನ ಅತ್ಯಂತ ಕಿರಿಯ ಬಿಲಿಯನೇರ್ಗಳಲ್ಲಿ ಒಬ್ಬರೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದ ಇವರು ಏಷ್ಯಾದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದರು. ಆದರೀಗ ಅವರು ಆ ಪಟ್ಟದಿಂದ ಕೆಳಗಿಳಿದಿದ್ದಾರೆ.
72 ವರ್ಷದ ಸಾವಿತ್ರಿ ಜಿಂದಾಲ್ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದು, ಇದೀಗ ಏಷ್ಯಾ ಖಂಡದ ಅತಿ ಶ್ರೀಮಂತ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ಸಾವಿತ್ರಿ ಜಿಂದಾಲ್ ಅವರ ಪತಿ ಓಪಿ ಜಿಂದಾಲ್ ಅವರು 2005ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಅದಾಗಿ ಕೆಲವು ಸಮಯದ ನಂತರ ಸಾವಿತ್ರ ಅವರು ಜಿಂದಾಲ್ ಗ್ರೂಪ್ನ ಅಧ್ಯಕ್ಷರಾದರು. ಈ ಜಿಂದಾಲ್ ಕಂಪನಿಯು ಭಾರತದಲ್ಲಿ ಉಕ್ಕನ್ನು ಉತ್ಪಾದಿಸುವ 3ನೇ ಅತಿದೊಡ್ಡ ಸಂಸ್ಥೆಯಾಗಿದೆ.