SC, ST ವಿದ್ಯಾರ್ಥಿಗಳ ಟೂಲ್ಕಿಟ್ ಪೂರೈಕೆ ಟೆಂಡರ್ನಲ್ಲಿ 22 ಕೋಟಿ ಹಗರಣ: ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಆಮ್ ಆದ್ಮಿ ಪಾರ್ಟಿ ದೂರು | SC, ST students toolkit supply tender scam Aam Aadmi Party file complaint against Minister Ashwath Narayan


ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಸಲಕರಣೆಗಳನ್ನ ಪೂರೈಕೆ ಮಾಡಲು ಈ ಟೆಂಡರ್ ಕರೆಯಲಾಗಿತ್ತು ಆದ್ರೆ ಈ ಟೆಂಡರ್ ನಲ್ಲಿ ಭಾರೀ ಗೋಲ್ಮಾಲ್ ನಡೆದಿದೆ.

SC, ST ವಿದ್ಯಾರ್ಥಿಗಳ ಟೂಲ್ಕಿಟ್ ಪೂರೈಕೆ ಟೆಂಡರ್ನಲ್ಲಿ 22 ಕೋಟಿ ಹಗರಣ: ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಆಮ್ ಆದ್ಮಿ ಪಾರ್ಟಿ ದೂರು

ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಬೆಂಗಳೂರು: ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಟೂಲ್ ಕಿಟ್ ಪೂರೈಕೆ ಟೆಂಡರ್ ನಲ್ಲಿ 22 ಕೋಟಿ ಬೃಹತ್ ಹಗರಣ ನಡೆದಿದ್ದು ಇದರಲ್ಲಿ ಸಚಿವ ಅಶ್ವಥ್ ನಾರಾಯಣ್(Minister Ashwath Narayan) ನೇರ ಕೈವಾಡ ಇರುವ ಆರೋಪ ಕೇಳಿ ಬಂದಿದೆ. ಈ ಹಗರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆ ಸಮೇತ ಆಮ್ ಆದ್ಮಿ ಪಾರ್ಟಿ, ಉಪಾಧ್ಯಕ್ಷ ಭಾಸ್ಕರ್ ರಾವ್ ಹಾಗೂ ರಾಜ್ಯ ವಕ್ತಾರ ಮಥಾಯಿ ನೇತೃತ್ವದಲ್ಲಿ ಲೋಕಾಯುಕ್ತರಿಗೆ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ದೂರು ಸಲ್ಲಿಸಲಾಗಿದೆ.

ಪರಿಶಿಷ್ಟ ಜಾತಿ & ಪಂಗಡಗಳ 13 ಸಾವಿರ ವಿದ್ಯಾರ್ಥಿಗಳಿಗೆ 22 ಕೋಟಿ ವೆಚ್ಚದಲ್ಲಿ ಟೂಲ್ ಖರೀದಿಸುವ ಟೆಂಡರ್ ಕರೆಯಲಾಗಿತ್ತು. ಇದು ರಾಜ್ಯದ ಕೈಗಾರಿಕಾ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪೂರೈಸುವ ಸಲಕರಣೆಗಳ ಟೂಲ್ ಕಿಟ್ ಟೆಂಡರ್ ಆಗಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಸಲಕರಣೆಗಳನ್ನ ಪೂರೈಕೆ ಮಾಡಲು ಈ ಟೆಂಡರ್ ಕರೆಯಲಾಗಿತ್ತು ಆದ್ರೆ ಈ ಟೆಂಡರ್ ನಲ್ಲಿ ಭಾರೀ ಗೋಲ್ಮಾಲ್ ನಡೆದಿದೆ. ಕೈಗಾರಿಕಾ ತರಬೇತಿ & ಉದ್ಯೋಗ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಚಿವ ಅಶ್ವಥ್ ನಾರಾಯಣ್ ಇದರಲ್ಲಿ ನೇರ ಹಸ್ತಕ್ಷೇಪ ಮಾಡಿದ್ದಾರೆ ಎಂದು ಎಎಪಿ ರಾಜ್ಯಾಧ್ಯಕ್ಷ ಫೃಥ್ವಿರೆಡ್ಡಿ ಆರೋಪ ಮಾಡಿದ್ದಾರೆ.

ಹಗರಣ ನಡೆದಿರುವುದು ಹೇಗೆ?

ರಿಜೆಕ್ಟ್ ಆದ ಗುತ್ತಿಗೆ ಕಂಪನಿಗೆ ಸರ್ಕಾರ ಮರು ಟೆಂಡರ್ ನೀಡಿದೆ. ಇಂಟಲೆಕ್ಟ್ ಸಿಸ್ಟಮ್ಸ್ ಸಂಸ್ಥೆ ಫೋರ್ಜರಿ ದಾಖಲೆ ಸೃಷ್ಟಿಸಿ ಟೆಂಡರ್ ಪಡೆದಿದೆ. ಇಂಟಲೆಕ್ಟ್ ಸಿಸ್ಟಮ್ಸ್ ಸಂಸ್ಥೆ ಟೆಂಡರ್ ಪಡೆಯಲು ಅರ್ಹತೆ ಇಲ್ಲದಿದ್ರೂ ನಕಲಿ ದಾಖಲೆಗಳನ್ನ ನೀಡಿ ತಾಂತ್ರಿಕ ಅನುಮೋದನೆ ಪಡೆದಿದೆ. ಸಚಿವ ಅಶ್ವಥ್ ನಾರಾಯಣ್ ಒತ್ತಡ ಹಾಗೂ ನೇರ ಹಸ್ತಕ್ಷೇಪದಿಂದ ಬೋಗಸ್ ಕಂಪನಿಗೆ 22 ಕೋಟಿ ಮೊತ್ತದ ಟೆಂಡರ್ ನೀಡಿರುವ ಆರೋಪ ಕೇಳಿ ಬಂದಿದೆ. ಇದು ರಾಜ್ಯ ಬಿಜೆಪಿ ಸರ್ಕಾರದ ಮತ್ತೊಂದು 40% ಹಗರಣ ಅಂತಾ AAP ಆರೋಪ ಮಾಡಿದೆ.
ಮೊದಲ ಬಾರಿಗೆ ಟೆಂಡರ್ ನಲ್ಲಿ ಭಾಗಿಯಾಗಿದ್ದ ಇಂಟಲೆಕ್ಟ್ ಸಿಸ್ಟಮ್ಸ್‌ ಕಂಪನಿ, ತಾಂತ್ರಿಕ ಅರ್ಹತೆ ಇಲ್ಲದ ಕಾರಣಕ್ಕಾಗಿ ಮೊದಲ ಬಾರಿ ಈ‌ ಕಂಪನಿಗೆ ಟೆಂಡರ್ ರಿಜೆಕ್ಟ್ ಮಾಡಲಾಗಿತ್ತು. ಬಳಿಕ ಇದೇ ಕಂಪನಿಗೆ ಟೆಂಡರ್ ನೀಡುವ ಸಲುವಾಗಿ ಇಡೀ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಲಾಗಿದೆ. ಮರು ಟೆಂಡರ್ ನಲ್ಲಿ ರಿಜೆಕ್ಟ್ ಆದ ಕಂಪನಿ ಬೋಗಸ್ ದಾಖಲೆ ಸೃಷ್ಟಿಸಿಕೊಟ್ಟು ಅದೇ ಕಂಪನಿಗೆ ಟೆಂಡರ್ ನೀಡಲಾಗಿದೆ.

ಏನೆಲ್ಲಾ ಬೋಗಸ್ ದಾಖಲೆ ಸೃಷ್ಟಿಸಲಾಗಿದೆ?

ಮೊದಲ ಬಾರಿಗೆ ಟೆಂಡರ್ ನಲ್ಲಿ ಭಾಗಿಯಾಗಿದ್ದ ಕಂಪನಿ ಹಿಂದೆ 22 ಕೋಟಿ ಹಾಗೂ 11 ಕೋಟಿ ಮೊತ್ತದ ಸಾಮಾಗ್ರಿಗಳನ್ನ ಪೂರೈಸಿರೋದಾಗಿ ನಕಲಿ ಜಿಎಸ್ಟಿ ಬಿಲ್ ಗಳನ್ನು ಸೃಷ್ಟಿಸಿದೆ. ಸ್ವತಃ GST ಕಂಪನಿಯೇ ಈ ಬಿಲ್ ಗಳು ನಕಲಿ ಎಂದು ಸ್ಟೇಟ್ಮೆಂಟ್ ಕೊಟ್ಟಿದೆ. ಅದರ ದಾಖಲೆಗಳನ್ನು AAP ಬಿಡುಗಡೆ ಮಾಡಿದ್ದಾರೆ. ಅಲ್ಲದೇ 2021ರ ಸೆಪ್ಟೆಂಬರ್ ನಲ್ಲಿ ಈ ಟೆಂಡರ್ ಗೆ ಅಂತಾ 17 ಕೋಟಿಗೆ ಅನುಮೋದನೆಯಾಗಿದೆ. ಟೆಂಡರ್ ಕರೆದ ಬಳಿಕ ಏಕಾಏಕಿ ಅದನ್ನ 21 ಕೋಟಿಗೆ ಏರಿಕೆ ಮಾಡಲಾಗಿದೆ. ಇದ್ರಲ್ಲಿ ಸಚಿವ ಅಶ್ವಥ್ ನಾರಾಯಣ್ ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿ ಅಂತಾ ಆಮ್ ಆದ್ಮಿ ಪಾರ್ಟಿ ಗಂಭೀರ ಆರೋಪ ಮಾಡಿದ್ದು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.

ಸಿಎಂ ಅವರು ಮೂಖಪ್ರೇಕ್ಷಕರಾಗಿ ನೋಡ್ತಿದ್ದಾರೆ

ಇನ್ನು ಈ ಸಂಬಂಧ ಮಾಜಿ ಪೊಲೀಸ್ ಆಯುಕ್ತ, ಆಪ್ ಮುಖಂಡ ಭಾಸ್ಕರ್ ರಾವ್ ಮಾತನಾಡಿದ್ದು, ಹಿರಿಯ ಅಧಿಕಾರಿಗಳು ಭ್ರಷ್ಟಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸರಿಯಾದ ಜಿಎಸ್ ಟಿನ್ನೂ ಪೇ ಮಾಡಿಲ್ಲ ಅವರು. ಸಿಎಂ ಅವರು ಮೂಖಪ್ರೇಕ್ಷಕರಾಗಿ ನೋಡ್ತಿದ್ದಾರೆ. ಅಶ್ವಥ್ಥ್ ನಾರಾಯಣ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಲೋಕಾಯುಕ್ತದ ಮೇಲೆ ಭರವಸೆ ಇದೆ. ಲೋಕಾಯುಕ್ತರ ಗಮನಕ್ಕೆ ಎಲ್ಲವನ್ನೂ ತಂದಿದ್ದೇವೆ. ಭ್ರಷ್ಟಚಾರ ಅನ್ನೋದು ಮಿತಿ ಮೀರಿ ಹೋಗ್ತಿದೆ. ಲೋಕಾಯುಕ್ತರ ಬಳಿ ನಾವು ಕ್ರಮಕ್ಕೆ ಮನವಿ ಮಾಡಿದ್ದೇವೆ. ಜನರಿಗೆ ನ್ಯಾಯ ಕೊಡಿಸ್ತೀವಿ ಅನ್ನೋ ಭರವಸೆ ಕೊಟ್ಟಿದ್ದಾರೆ ಎಂದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *