Photosynthesis : ನಮ್ಮ ಕೊಲ್ಲೂರು ಘಾಟಿಯಲ್ಲಿರುವ ಕಾಡಿನಲ್ಲಿ ಸೂರ್ಯನ ಬೆಳಕೇ ಕಾಡಿನ ಒಳಗೆ ಬೀಳದಿದ್ದರೂ ಒಂದಿಂಚೂ ಜಾಗವಿಲ್ಲದಂತೆ ಗಿಡ, ಪೊದೆಗಳು, ಪುಟ್ಟ ಮರಬಳ್ಳಿಗಳು ಬೆಳೆದಿವೆಯಲ್ಲ ಹೇಗೆ? – ಪ್ರಶ್ನೆ ಕೇಳಿದವರು ಸಾಗರದ ವತ್ಸಲಾ ಮೂರ್ತಿ.
ಜೀವವೆಂಬ ಜಾಲದೊಳಗೆ | Jeevavemba Jaaladolage : ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ವಾತಾವರಣದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರನ್ನು ಹೀರಿಕೊಂಡು ಸೂರ್ಯನ ಬೆಳಕಿನ ಸಹಾಯದಿಂದ ಗ್ಲೂಕೋಸ್ ಮತ್ತು ಆಮ್ಲಜನಕವನ್ನು ತಯಾರಿಸುವ ಕ್ರಿಯೆಗೆ ದ್ಯುತಿ ಸಂಶ್ಲೇಷಣೆ ಎಂದು ಹೆಸರು. ಸೂರ್ಯನ ಬೆಳಕು ಈ ಕ್ರಿಯೆಗೆ ಅತೀ ಮುಖ್ಯ. ಸಮಭಾಜಕ ವೃತ್ತ ಹಾಗೂ ಅದರ ಆಸುಪಾಸಿನಲ್ಲಿರುವ ಸ್ಥಳಗಳಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುತ್ತದೆ. ಇದೇ ಕಾರಣದಿಂದಾಗಿ ಇಲ್ಲಿ ಬಿಸಿಲು ಹೆಚ್ಚು. ಹಾಗೆಯೇ ಪ್ರತೀ ದಿನವೆಂಬಂತೆ ಮಳೆಯೂ ಬರುತ್ತದೆ. ಹೆಚ್ಚಿನ ಸೂರ್ಯರಶ್ಮಿ, ನೀರು, ಹದವಾದ ಉಷ್ಣತೆ ಸಸ್ಯಗಳ ಬೆಳವಣಿಗೆಗೆ ಹೇಳಿ ಮಾಡಿಸಿದ ವಾತಾವರಣವಾದ್ದರಿಂದ ಈ ಪ್ರದೇಶಗಳಲ್ಲಿ ದಟ್ಟವಾದ ಕಾಡುಗಳಿದ್ದು ಇವು ಮಳೆಕಾಡುಗಳೆಂದೇ ಪ್ರಸಿದ್ಧವಾಗಿವೆ. ಪ್ರಪಂಚದಲ್ಲಿ ಅತೀ ಹೆಚ್ಚು ಆಮ್ಲಜನಕದ ಉತ್ಪತ್ತಿ ಮಳೆಕಾಡುಗಳಲ್ಲಿ ಆಗುವುದರಿಂದ ಇವುಗಳನ್ನು ನಮ್ಮ ಭೂಗೋಲದ ಶ್ವಾಸಕೋಶಗಳೆಂದು ಕರೆಯುತ್ತಾರೆ. ನಮ್ಮ ದೇಶದ ಪಶ್ಚಿಮಘಟ್ಟದ ಕಾಡುಗಳೂ ಸಹ ಮಳೆಕಾಡುಗಳು. ಕೊಲ್ಲೂರು ಘಾಟಿ ಇದೇ ಪಶ್ಚಿಮಘಟ್ಟಗಳಲ್ಲಿದೆ.
ಸುಮಾ ಸುಧಾಕಿರಣ, ಪರಿಸರ ವಿಜ್ಞಾನ ಲೇಖಕಿ (Suma Sudhakiran)
ಈ ಮಳೆಕಾಡುಗಳಲ್ಲಿ ಜೀವಜಾಲವು ನಾಲ್ಕು ಅಂತಸ್ತುಗಳಲ್ಲಿ ಹರಡಿರುತ್ತದೆ. ಅತ್ಯಂತ ಮೇಲೆ ಸಿಗುವುದು “ಎಮರ್ಜೆಂಟ್” ಎಂಬ ಅಂತಸ್ತು. ಸುಮಾರು 80-100 ಅಡಿಗಳಷ್ಟು ಎತ್ತರಕ್ಕೆ ಬೆಳೆವ ಮರಗಳು ಇಲ್ಲಿರುತ್ತವೆ. ಇವುಗಳ ಸಂಖ್ಯೆ ವಿರಳವಾಗಿರುತ್ತದೆ. ಇವುಗಳಿಗೆ ಸೂರ್ಯನ ಬೆಳಕು ಗಾಳಿ ಎಲ್ಲವೂ ಹೇರಳವಾಗಿ ಸಿಗುತ್ತದೆ. ಸದೃಢವಾದ ಕಾಂಡಗಳನ್ನುಳ್ಳ ಮರಗಳ ಬೀಜಗಳು ಗಾಳಿಯಲ್ಲೇ ಪ್ರಸರಣಗೊಳ್ಳುವಂತಹುದಾಗಿರುತ್ತದೆ. ಇಲ್ಲಿ ಅನೇಕ ಕೀಟಗಳೂ, ಹದ್ದು, ಗಿಡುಗಳಂತಹ ಪಕ್ಷಿಗಳು ವಾಸಿಸುತ್ತವೆ. ಇದಕ್ಕಿಂತ ಸ್ವಲ್ಪ ಕೆಳಗಿರುವುದು ದಟ್ಟವಾಗಿ ಬೆಳೆದಿರುವ “ಕೆನೊಪಿ” ಅಂತಸ್ತು. ಇಲ್ಲಿ ಸಹ ಸೂರ್ಯನ ಬೆಳಕು ಹಾಗೂ ಗಾಳಿಗೆ ಕೊರತೆಯಿರುವುದಿಲ್ಲ. ಅಧಿಕ ಸಂಖ್ಯೆಯ ಮರಗಳು ಒಂದಕ್ಕೊಂದು ಪೈಪೋಟಿ ನೀಡುವಂತೆ ಇಲ್ಲಿ ಬೆಳೆದಿರುತ್ತವೆ. ಒತ್ತೊತ್ತಾಗಿರುವ ರೆಂಬೆಗಳ ಎಲೆಗಳು ಹೆಚ್ಚು ಹೆಚ್ಚು ಸೂರ್ಯನ ಬೆಳಕು ಹಾಗೂ ಗಾಳಿಯನ್ನು ಪಡೆಯವ ಉದ್ದೇಶದಿಂದ ಸ್ಥಳವನ್ನು ಆಕ್ರಮಿಸಿಕೊಂಡಿರುತ್ತವೆ.