Shivamogga Subbanna: ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ದತ್ತಾತ್ರೇಯ ಹೊಸಬಾಳೆ, ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿ ಹಲವರ ಸಂತಾಪ | Shivamogga Subbanna Condolence CM Basavaraj Bommai RSS Leader Dattatreya Hosabale Siddaramiah HD Kumaraswamy Others Remember Singer


ಶಿವಮೊಗ್ಗ ಸುಬ್ಬಣ್ಣ ಅವರ ಅಗಲಿಕೆ ಕನ್ನಡ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

Shivamogga Subbanna: ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ದತ್ತಾತ್ರೇಯ ಹೊಸಬಾಳೆ, ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿ ಹಲವರ ಸಂತಾಪ

ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ

ಬೆಂಗಳೂರು: ಸುಗಮ ಸಂಗೀತ ಕ್ಷೇತ್ರದ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ (83) (Shivamogga Subbanna) ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai), ಆರ್​ಎಸ್​ಎಸ್​ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale), ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್​ ನಾಯಕ ಎಚ್​.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಮುರುಗೇಶ್ ನಿರಾಣಿ, ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಕನ್ನಡ ಭಾವಗೀತೆಗಳಿಗೆ ಜೀವತುಂಬಿದ, ಕನ್ನಡದ ಮೊದಲ ರಜತ ಕಮಲ ಪ್ರಶಸ್ತಿಗೆ ಭಾಜನರಾದ ಅಪ್ರತಿಮ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಅಗಲಿಕೆ ಕನ್ನಡ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಅವರು ಸಹ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಸುಪ್ರಸಿದ್ಧ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ ಎಂಬುದು ಅಸಹನೀಯ ನೋವಿನ ಸಂಗತಿ. ಅವರ ಕುಟುಂಬದವರಿಗೆ ನನ್ನ ತೀವ್ರ ಸಂತಾಪಗಳು. ಶಿಶುನಾಳ ಷರೀಫರು, ಕುವೆಂಪು ಹಾಗೂ ಹಲವಾರು ಕನ್ನಡ ಕವಿಗಳ ಹಾಡುಗಳನ್ನು ಮನೆ ಮಾತಾಗಿಸಿದ ಅವರು ಸುಗಮ ಸಂಗೀತದ ದೊರೆಯಾಗಿದ್ದರು. ಇನ್ನು ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. ಗತಿಸಿದ ಅವರ ಆತ್ಮಕ್ಕೆ ಸದ್ಗತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ‘ ಎಂದು ದತ್ತಾತ್ರೇಯ ಹೊಸಬಾಳೆ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಸಂತಾಪ ಸಂದೇಶ ಹಂಚಿಕೊಂಡಿದ್ದಾರೆ. ‘ಸುಗಮ ಸಂಗೀತ ಲೋಕದ ಅನನ್ಯ ಪ್ರತಿಭೆ, ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ. ಕುವೆಂಪು, ಬೇಂದ್ರೆ ಸೇರಿ ಹೆಸರಾಂತ ಕವಿಗಳ ಗೀತೆಗಳಿಗೆ ಸ್ವರ ಕಟ್ಟಿದ ಸುಬ್ಬಣ್ಣ ಅವರ ಅಗಲಿಕೆ ನಾಡಿಗೆ ಬಹದೊಡ್ಡ ನಷ್ಟ. ಸುಬ್ಬಣ್ಣ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರು, ಅವರ ಸಂಗೀತ ಪರಿವಾರ ಹಾಗೂ ನಾಡಿನ ಜನತೆಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ಕನ್ನಡದ ಪ್ರಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದಿಂದ ಸಂಗೀತ ಲೋಕ ಮತ್ತು ಕನ್ನಡಿಗರಾದ ನಾವೆಲ್ಲರೂ ಸಿರಿಕಂಠವೊಂದನ್ನು ಕಳೆದುಕೊಂಡಿದ್ದೇವೆ. ಸುಬ್ಬಣ್ಣ ಅವರು ಹಾಡುಗಳ ಮೂಲಕ ನಮ್ಮೊಳಗೆ ಸದಾ ಜೀವಂತವಾಗಿರುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖ ದಲ್ಲಿ ನಾನೂ ಭಾಗಿಯಾಗಿದ್ದೇನೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಕಾಡು ಕುದುರೆ ಓಡಿ ಬಂದಿತ್ತಾ ಹಾಡಿನ ಮೂಲಕ ಜನಮಾನಸದಲ್ಲಿ ಉಳಿದ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣನವರ ಸಾವು ತೀವ್ರ ನೋವನ್ನುಂಟು ಮಾಡಿದೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಕುಟುಂಬಸ್ಥರಿಗೆ ಮತ್ತು ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ನೀಡಲಿ’ ಎಂದು ಪ್ರಲ್ಹಾದ ಜೋಶಿ ‘ಕೂ’ ಮಾಡಿದ್ದಾರೆ. ‘ಶಿವಮೊಗ್ಗ ಸುಬ್ಬಣ್ಣ ಅವರು ತಮ್ಮ ಅದ್ಭುತ ಕಂಠದ ಮೂಲಕ ಅವರು ಹೆಸರುವಾಸಿಯಾಗಿದ್ದರು’ ಎಂದು ಮುರುಗೇಶ್ ನಿರಾಣಿ ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *