ಪಾಸ್‌ಪೋರ್ಟ್
ಇ-ಕಾಮರ್ಸ್ ಕಂಪನಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜನರು ಹೊರಗೆ ಹೋಗಿ ಶಾಪಿಂಗ್ ಮಾಡುವ ಬದಲು ಮನೆಬಾಗಿಲಿಗೇ ವಸ್ತುಗಳನ್ನು ತಂದುಕೊಡುವ ವೆಬ್ಸೈಟ್ಗಳ ಮೂಲಕ ಆನ್ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಈ ಇ-ಕಾಮರ್ಸ್ ಸೈಟ್ಗಳಲ್ಲಿ ಮೋಸ ಹೋಗುವವರಿಗೇನೂ ಕಡಿಮೆಯಿಲ್ಲ. ಏನನ್ನೋ ಆರ್ಡರ್ ಮಾಡಿದವರಿಗೆ ಇನ್ನೇನೋ ಸಿಕ್ಕಿರುವ ಸಾಕಷ್ಟು ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಐಫೋನ್ ಆರ್ಡರ್ ಮಾಡಿದವನಿಗೆ ಸೋಪ್ ಸಿಕ್ಕಿದ್ದು, ವಾಚ್ ಬುಕ್ ಮಾಡಿದವನಿಗೆ ವಾಚ್ ಬಾಕ್ಸ್ ಮಾತ್ರ ಸಿಕ್ಕಿದ್ದು ಹೀಗೆ ಹಲವಾರು ಉದಾಹರಣೆಗಳಿವೆ. ಅದೇ ರೀತಿ ಪಾಸ್‌ಪೋರ್ಟ್ ಕವರ್ ಒಂದನ್ನು ಅಮೇಜಾನ್ನಲ್ಲಿ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರು ತನಗೆ ಬಂದ ಪಾರ್ಸಲ್ ನೋಡಿ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಪಾಸ್‌ಪೋರ್ಟ್ ಕವರ್ ಬದಲು ಅವರಿಗೆ ಬಂದಿದ್ದಾದರೂ ಏನು?
ಕೇರಳದಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು, ಕೇರಳದ ವಯನಾಡ್ ಜಿಲ್ಲೆಯ ಕಣಿಯಂಬೆಟ್ಟಾ ಮೂಲದ ಮಿಥುನ್ ಬಾಬು ಎಂಬ ವ್ಯಕ್ತಿ ಇ-ಕಾಮರ್ಸ್ ಕಂಪನಿಯಾದ ಅಮೆಜಾನ್‌ನಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಪಾಸ್‌ಪೋರ್ಟ್ ಕವರ್‌ಗೆ ಬದಲಾಗಿ ಒರಿಜಿನಲ್ ಪಾಸ್‌ಪೋರ್ಟ್ ಅನ್ನೇ ಪಡೆದಿದ್ದಾನೆ. ವಯನಾಡ್‌ನ ವ್ಯಕ್ತಿ ಅಕ್ಟೋಬರ್ 30ರಂದು ಅಮೆಜಾನ್‌ನಿಂದ ಪಾಸ್‌ಪೋರ್ಟ್ ಕವರ್ ಅನ್ನು ಆರ್ಡರ್ ಮಾಡಿದ್ದರು. ನವೆಂಬರ್ 1ರಂದು ಅವರಿಗೆ ಆರ್ಡರ್ ಅನ್ನು ಡೆಲಿವರಿ ಮಾಡಲಾಗಿತ್ತು. ಆರ್ಡರ್ ಮಾಡಿದಾತ ಡೆಲಿವರಿ ಪ್ಯಾಕೆಟ್ ಅನ್ನು ತೆರೆದಾಗ ಕವರ್ ಜೊತೆಗೆ ನಿಜವಾದ ಪಾಸ್‌ಪೋರ್ಟ್ ಇರುವುದು ಗೊತ್ತಾಯಿತು! ಅಂದಹಾಗೆ ಆ ಪಾಸ್‌ಪೋರ್ಟ್ ತ್ರಿಶೂರ್‌ನ ಕುನ್ನಂಕುಲಂ ನಿವಾಸಿ ಮುಹಮ್ಮದ್ ಸಾಲಿಹ್ ಎಂಬುವವರಿಗೆ ಸೇರಿದ್ದಾಗಿತ್ತು.
ಒರಿಜಿನಲ್ ಪಾಸ್‌ಪೋರ್ಟ್ ಹೇಗೆ ಅಮೆಜಾನ್ನಲ್ಲಿ ಬಂದಿತು ಎಂದು ತಿಳಿಯದೆ ಕಂಗಾಲಾದ ಆ ಗ್ರಾಹಕ ತಕ್ಷಣ ಅಮೆಜಾನ್ ಕಸ್ಟಮರ್ ಕೇರ್ಗೆ ಫೋನ್ ಮಾಡಿದ್ದಾರೆ. ಆದರೆ, ಕಸ್ಟಮರ್ ಕೇರ್ ಸಿಬ್ಬಂದಿ ಈ ವಿಷಯ ತಿಳಿದು ಇನ್ನಷ್ಟು ಆಘಾತಕಾರಿಯಾದ ಪ್ರತಿಕ್ರಿಯೆ ನೀಡಿದರು. ಇನ್ನು ಮುಂದೆ ಈ ರೀತಿಯ ಯಾವ ಘಟನೆಯೂ ನಡೆಯುವುದಿಲ್ಲ. ನಮ್ಮ ಸೇಲ್ಸ್ನವರಿಗೆ ಮುಂದಿನ ಬಾರಿ ಹೆಚ್ಚು ಎಚ್ಚರಿಕೆಯಿಂದ ಇರಲು ಸೂಚಿಸುತ್ತೇನೆ ಎಂದು ಆತ ಹೇಳಿದ್ದಾರೆ. ಇದನ್ನು ಕೇಳಿ ಗ್ರಾಹಕನಿಗೆ ಶಾಕ್ ಆಗಿದೆ.
ಅಂದರೆ, ಒರಿಜಿನಲ್ ಪಾಸ್ಪೋರ್ಟ್ಗೆ ಯಾವುದೇ ಬೆಲೆಯಿಲ್ಲದೆ ಆನ್ನೈನ್ನಲ್ಲಿ ಯಾರ್ಯಾರಿಗೋ ಕಳುಹಿಸಿದರೂ ಕಸ್ಟಮರ್ ಕೇರ್ ಸಿಬ್ಬಂದಿ ತಲೆ ಕೆಡಿಸಿಕೊಳ್ಳದಿರುವುದನ್ನು ನೋಡಿ ಆತನಿಗೆ ಶಾಕ್ ಆಗಿದೆ. ಅಲ್ಲದೆ, ಆ ಪಾಸ್‌ಪೋರ್ಟ್ ಅನ್ನು ಏನು ಮಾಡಬೇಕು, ಅದರ ಮಾಲೀಕರಿಗೆ ಹೇಗೆ ತಲುಪಿಸಬೇಕೆಂಬ ಬಗ್ಗೆ ಕೂಡ ಅವರು ಮಾಹಿತಿ ನೀಡಿಲ್ಲ. ಆದ್ದರಿಂದ ಗ್ರಾಹಕ ಮಿಥುನ್ ಬಾಬು ತಾನೇ ಖುದ್ದಾಗಿ ಪಾಸ್‌ಪೋರ್ಟ್ ಅನ್ನು ಅದರ ಮಾಲೀಕರಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: Viral News: ಮದುವೆಯಾದ ಮರುದಿನವೇ ಗರ್ಲ್ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!