Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು? | Shocking News Pakistan pilot refuses to fly plane mid journey because his shift had ended


Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?

ಪಾಕಿಸ್ತಾನದ ವಿಮಾನ

ಉದ್ಯೋಗದಲ್ಲಿರುವ ಯಾರಿಗೇ ಆದರೂ ಅವರದೇ ಆದ ವೈಯಕ್ತಿಕ ಬದುಕು ಕೂಡ ಇರುತ್ತದೆ ಅಲ್ವ? ಆಫೀಸಿನ ಶಿಫ್ಟ್ ಮುಗಿದ ಮೇಲೂ ಮತ್ತೆ ಕೆಲಸ ಮಾಡಬೇಕು ಎಂದು ಹೇಳಿದರೆ ಯಾರಿಗಾದರೂ ಕೋಪ ಬಂದೇ ಬರುತ್ತದೆ. ಆದರೆ, ಕೆಲವೊಂದ ಅನಿವಾರ್ಯ ಪರಿಸ್ಥಿತಿಯಲ್ಲಿ ನಮ್ಮ ಕೆಲಸದ ಅವಧಿ ಮುಗಿಯಿತು ಅಂತ ಕೈ ಕೊಡವಿಕೊಂಡು ಹೋಗಿಬಿಟ್ಟರೆ ನಮ್ಮ ಮೇಲೆ ನಂಬಿಕೆಯಿಟ್ಟ ಕಂಪನಿ ಭಾರೀ ನಷ್ಟ ಅನುಭವಿಸಬೇಕಾದ ಪರಿಸ್ಥಿತಿಯೂ ಉಂಟಾಗುತ್ತದೆ. ಇದು ಎಲ್ಲ ರೀತಿಯ ಉದ್ಯೋಗಗಳಿಗೂ ಅನ್ವಯವಾಗದೆ ಇರಬಹುದು. ಆದರೆ, ರಸ್ತೆಯಲ್ಲಿ ಬಸ್ ಅಥವಾ ರೈಲು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲೇ ನನ್ನ ಶಿಫ್ಟ್ ಮುಗಿಯಿತು ಎಂದು ಡ್ರೈವರ್ ಕೆಳಗಿಳಿದು ಹೋದರೆ ಪ್ರಯಾಣಿಕರ ಗತಿಯೇನು? ಬಸ್, ರೈಲಿನ ಕತೆಯಾದರೂ ಬಿಡಿ; ಆಕಾಶದಲ್ಲಿ ವಿಮಾನ ಹಾರುತ್ತಿರುವಾಗ ಮಾರ್ಗ ಮಧ್ಯೆ ನನ್ನ ಶಿಫ್ಟ್ ಮುಗಿಯಿತು ಎಂದು ಪೈಲಟ್ ವಿಮಾನ ಹಾರಿಸುವುದಿಲ್ಲ ಎಂದು ಹಠ ಹಿಡಿದರೆ ಅಲ್ಲಿನ ಪರಿಸ್ಥಿತಿ ಹೇಗಿರುತ್ತದೆ? ಎಂದು ನೀವು ಊಹೆ ಕೂಡ ಮಾಡಿಕೊಳ್ಳಲು ಅಸಾಧ್ಯ. ಇಂಥದ್ದೇ ಒಂದು ಶಾಕಿಂಗ್ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಕೆಲಸದ ಅವಧಿಯ ನಂತರವೂ ಕೆಲಸ ಮಾಡುವುದು ಬಹುತೇಕರಿಗೆ ಇಷ್ಟವಾಗುವುದಿಲ್ಲ. ಆದರೆ ಕೆಲಸದ ಪಾಳಿ ಮುಗಿದ ನಂತರ ಕೆಲಸ ಮಾಡಲು ನಿರಾಕರಿಸುವ ಧೈರ್ಯ ಎಲ್ಲರಿಗೂ ಇರುವುದಿಲ್ಲ. ಬಾಸ್​ಗೆ ಹೆದರಿಯೋ, ಮನಸ್ಸಾಕ್ಷಿಗೆ ಹೆದರಿಯೋ ಅವರು ತಮ್ಮ ಶಿಫ್ಟ್ ಮುಗಿದರೂ ಕೆಲಸ ಮಾಡುತ್ತಲೇ ಇರುತ್ತಾರೆ. ಪಾಕಿಸ್ತಾನದ ವಿಮಾನವೊಂದು ಟೇಕಾಫ್ ಆಗುವುದು ತಡವಾಗಿತ್ತು. ಆ ವಿಮಾನದ ಮಾರ್ಗ ಮಧ್ಯೆ ಅದರ ಪೈಲಟ್ ನನ್ನ ಶಿಫ್ಟ್ ಮುಗಿದಿದೆ. ಇನ್ನು ನಾನು ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ. ಆತನ ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶವಾದ ಆ ವಿಮಾನಕ್ಕೆ ಬೇರೊಬ್ಬ ಪೈಲಟ್​ನನ್ನು ನಿಯೋಜನೆ ಮಾಡಿ ಮತ್ತೆ ವಿಮಾನ ಹಾರಿಸಲಾಯಿತು.

ಪಾಕಿಸ್ತಾನ ದೇಶದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ವಿಮಾನವೊಂದು ಭಾನುವಾರ ಸೌದಿ ಅರೇಬಿಯಾದ ರಿಯಾದ್‌ನಿಂದ ಇಸ್ಲಾಮಾಬಾದ್‌ಗೆ ಟೇಕ್ ಆಫ್ ಆಗಬೇಕಿತ್ತು. ಆದರೆ, PK-9754 ವಿಮಾನ ರಿಯಾದ್‌ನಿಂದ ಹೊರಡುವಾಗ ಕೆಟ್ಟ ಹವಾಮಾನದಿಂದಾಗಿ ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಆದರೆ, ವಾತಾವರಣ ಸರಿಯಾಗುವಷ್ಟರಲ್ಲಿ ವಿಮಾನದ ಕ್ಯಾಪ್ಟನ್ ತನ್ನ ಕರ್ತವ್ಯದ ಅವಧಿ ಮುಗಿದ ಕಾರಣ ದಮ್ಮಾಮ್‌ನಿಂದ ಇಸ್ಲಾಮಾಬಾದ್‌ಗೆ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಲು ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿದರು.

ಅಂತಿಮವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ವಿಮಾನ ನಿಲ್ದಾಣದ ಅಧಿಕಾರಿಗಳು ಭದ್ರತಾ ಸಿಬ್ಬಂದಿಯನ್ನು ಕರೆಸಬೇಕಾಯಿತು. ಆ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಹೋಟೆಲ್ ವ್ಯವಸ್ಥೆ ಮಾಡಲಾಗಿತ್ತು. ಪ್ರಯಾಣಿಕರು ಅದೇ ದಿನ ರಾತ್ರಿ 11 ಗಂಟೆಗೆ ಇಸ್ಲಾಮಾಬಾದ್‌ ತಲುಪಿದರು.

TV9 Kannada


Leave a Reply

Your email address will not be published. Required fields are marked *