Shocking Video: ಪಟಾಕಿಯಿದ್ದ ಸ್ಕೂಟರ್ ಸ್ಫೋಟಗೊಂಡು ಅಪ್ಪ-ಮಗನ ದೇಹ ಛಿದ್ರ; ಶಾಕಿಂಗ್ ವಿಡಿಯೋ ವೈರಲ್ | Shocking Video Puducherry Father, son die after firecrackers loaded on scooter explode Firecracker Blast


Shocking Video: ಪಟಾಕಿಯಿದ್ದ ಸ್ಕೂಟರ್ ಸ್ಫೋಟಗೊಂಡು ಅಪ್ಪ-ಮಗನ ದೇಹ ಛಿದ್ರ; ಶಾಕಿಂಗ್ ವಿಡಿಯೋ ವೈರಲ್

ಸ್ಕೂಟರ್ ಬ್ಲಾಸ್ಟ್ ಆದ ದೃಶ್ಯ

ಪುದುಚೆರಿ: ದೀಪಾವಳಿಯ ಸಂಭ್ರಮಕ್ಕಾಗಿ ಪಟಾಕಿಗಳನ್ನು ಖರೀದಿಸಿದ ಅಪ್ಪ-ಮಗ ಸ್ಕೂಟರ್​​ನಲ್ಲಿ ಹೋಗುತ್ತಿದ್ದರು. ಆ ವೇಳೆ ನಡು ರಸ್ತೆಯಲ್ಲಿ ಪಟಾಕಿ ಸ್ಫೋಟಗೊಂಡು, ಸ್ಕೂಟರ್ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಅಪ್ಪ-ಮಗ ಛಿದ್ರ ಛಿದ್ರವಾಗಿ ಬಿದ್ದಿರುವ ಆಘಾತಕಾರಿ ಘಟನೆ ಪುದುಚೆರಿಯಲ್ಲಿ ನಡೆದಿದೆ. ಸ್ಕೂಟರ್‌ನ ಡಿಕ್ಕಿಯಲ್ಲಿ ಪಟಾಕಿಗಳನ್ನು ಇಟ್ಟುಕೊಂಡು ಮನೆಗೆ ಹೋಗುತ್ತಿದ್ದಾಗ ಪಟಾಕಿ ಸಿಡಿದ ಪರಿಣಾಮ ಕಲೈನೇಸನ್ ಮತ್ತು ಅವರ ಮಗ ಸುಟ್ಟು ಕರಕಲಾಗಿದ್ದಾರೆ.

ಈ ಮೂಲಕ ಪುದುಚೆರಿಯ ಕಲೈನೇಸನ್ ಅವರ ಮನೆಯಲ್ಲಿ ಹಬ್ಬದ ದಿನವೇ ಸೂತಕದ ಛಾಯೆ ಆಚರಿಸಿದೆ. ಸಂಭ್ರಮದಿಂದ ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಮಾಡಬೇಕಾಗಿದ್ದವರು ಇಹಲೋಕ ತ್ಯಜಿಸಿದ್ದಾರೆ. ಪುದುಚೇರಿ-ವಿಲ್ಲುಪುರಂ ಗಡಿಯಲ್ಲಿ ಈ ಘಟನೆ ನಡೆದಿದೆ. ತಂದೆ ಕಲೈನೇಸನ್ ಮತ್ತು ಅವರ 7 ವರ್ಷದ ಮಗ ಪ್ರದೀಪ್ ನಿನ್ನೆ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಪೂರ್ವ ಕರಾವಳಿ ರಸ್ತೆಯಲ್ಲಿರುವ ಕೂನಿಮೇಡು ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಪಟಾಕಿಗಳ ಬಾಕ್ಸ್​ನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಡು ರಸ್ತೆಯಲ್ಲಿ ಪಟಾಕಿಯಿದ್ದ ಸ್ಕೂಟರ್ ಸಿಡಿದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಲೈನಾಸನ್ ಸ್ಕೂಟರ್ ಓಡಿಸುತ್ತಿದ್ದಾಗ, ಅವರ ಮಗ ಪ್ರದೀಪ್ ಮುಂಭಾಗದಲ್ಲಿ ಕುಳಿತುಕೊಂಡಿದ್ದ. ತಿರುವಿನಲ್ಲಿ ವೇಗವಾಗಿ ಬಂದ ಸ್ಕೂಟರ್ ಸ್ಫೋಟಗೊಂಡು ಬಾಲಕ ಮತ್ತು ಆತನ ತಂದೆ ಸ್ಥಳದಲ್ಲೇ ಸಾವನ್ನಪ್ಪಿರುವ ದೃಶ್ಯ ವಿಡಿಯೋದಲ್ಲಿದೆ.

ಈ ಘಟನೆಯಲ್ಲಿ ಸ್ಫೋಟಗೊಂಡ ಸ್ಕೂಟರ್ ಪಕ್ಕದಲ್ಲಿ ಬರುತ್ತಿದ್ದ ಇನ್ನೂ ಮೂವರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಜಿಪ್ಮರ್) ಗೆ ಕರೆದೊಯ್ಯಲಾಯಿತು. ಒಂದು ಲಾರಿ ಹಾಗೂ ಎರಡು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ.

ಘಟನೆ ನಡೆದ ಕೂಡಲೇ ವಿಲ್ಲುಪುರಂ ಜಿಲ್ಲಾ ಡಿಐಜಿ ಪಾಂಡಿಯನ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

Shocking News: ಅಮೆಜಾನ್​ನಲ್ಲಿ ಪಾಸ್​ಪೋರ್ಟ್ ಕವರ್​ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದೇನು ಗೊತ್ತಾ?

TV9 Kannada


Leave a Reply

Your email address will not be published. Required fields are marked *