
ಸಿದ್ದರಾಮಯ್ಯ
ಆರ್ಎಸ್ಎಸ್ನವರು ಮೂಲ ಭಾರತೀಯರಾ? ಅವರು ದ್ರಾವಿಡರಾ ಅಥವಾ ಆರ್ಯನ್ನರಾ? ಎಂದು ಪ್ರಶ್ನಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದ ಸಿದ್ದರಾಮಯ್ಯನವರಿಗೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ನಾಯಕರ ಹೆಸರಿನ ಮೂಲವನ್ನು ಬಿಜೆಪಿ ಕೆದಕಿದೆ.
ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಆರ್ಎಸ್ಎಸ್ನವರು ಆರ್ಯರಾ? ಅಥವಾ ದ್ರಾವಿಡರಾ? ಎಂದು ಕೇಳುವ ಮೂಲಕ ಶುಕ್ರವಾರ ಆರ್ಎಸ್ಎಸ್ (RSS) ಮೂಲವನ್ನು ಕೆದಕಿದ್ದರು. ಈ ಮೂಲಕ ಅವರು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ( ಆರ್ಎಸ್ಎಸ್) ಮೂಲವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಣಕಿರುವುದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಬುರುಡೆರಾಮಯ್ಯ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸರಣಿ ಕೂ (KOO) ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.
ಆರ್ಎಸ್ಎಸ್ ಮೂಲವನ್ನು ಕೆಣಕಿರುವ ಸಿದ್ದರಾಮಯ್ಯ ಅವರಿಗೆ ಅವರೇ ಕಾಂಗ್ರೆಸ್ ಪಕ್ಷದ ನಾಯಕರ ಹೆಸರಿನ ಮೂಲವೇನೆಂದು ಕೇಳುವ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಅಫ್ಘಾನಿಸ್ತಾನದ ಬಾಬರ್ ಸಮಾಧಿಗೆ, 1959ರಲ್ಲಿ ನೆಹರೂ, 1968ರಲ್ಲಿ ಇಂದಿರಾ ಗಾಂಧಿ, 2005ರಲ್ಲಿ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ! ಭೇಟಿಯ ಬಳಿಕ “ಮೈ ಟ್ರೂ ಹೋಮ್ ಕಮಿಂಗ್” ಎಂದು ಉದ್ಘರಿಸಿದ್ದರು ಇಂದಿರಾ!!! ಹಾಗಾದರೆ, ಸಾವಿರಾರು ಹಿಂದೂಗಳನ್ನು ಹತ್ಯೆಗೈದ ಬಾಬರ್ ಎಂಬ ಮತಾಂಧನ ಮೂಲ ಹಾಗೂ ಇವರ ಮೂಲ ಎರಡೂ ಒಂದೇ ಎಂದು ಅರ್ಥವೇ? ಎಂದು #ಬುರುಡೆರಾಮಯ್ಯ ಹ್ಯಾಷ್ಟ್ಯಾಗ್ ಮೂಲಕ ಬಿಜೆಪಿ ಕೂ ಮಾಡಿದೆ.
ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈಗಿರುವ ಕಾಂಗ್ರೆಸ್ ಪಕ್ಷ ಇಂದಿರಾ ಕಾಂಗ್ರೆಸ್ ಪಕ್ಷ ಮತ್ತು ನಕಲಿ ಗಾಂಧಿಗಳ ಪಕ್ಷ. ಅಂದಹಾಗೆ ಸಿದ್ದರಾಮಯ್ಯನವರೇ, ನೀವು ಕೂಡ ಜನತಾದಳ ಪಕ್ಷದಿಂದ, ಅಧಿಕಾರದ ಮೋಹದಿಂದ ನಕಲಿ ಗಾಂಧಿ ಪಕ್ಷಕ್ಕೆ ಬಂದವರಲ್ಲವೇ? ಎಂದು ಬಿಜೆಪಿ ಲೇವಡಿ ಮಾಡಿದೆ.