SIIMA Awards: ಮೊದಲ ಬಾರಿ ಬೆಂಗಳೂರಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ; ಪುನೀತ್​ಗೆ ವಿಶೇಷ ಗೌರವಾರ್ಪಣೆ | SIIMA awards 10th year event will take place in Bengaluru


10ನೇ ವರ್ಷದ ಸೈಮಾ ಅವಾರ್ಡ್ಸ್​ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಬೆಂಗಳೂರಿನಲ್ಲಿ ಈ ಸಮಾರಂಭ ಜರುಗಲಿದೆ.

SIIMA Awards: ಮೊದಲ ಬಾರಿ ಬೆಂಗಳೂರಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ; ಪುನೀತ್​ಗೆ ವಿಶೇಷ ಗೌರವಾರ್ಪಣೆ

‘ಸೈಮಾ’ ಸುದ್ದಿಗೋಷ್ಠಿ

ಕಳೆದ 10 ವರ್ಷಗಳಿಂದ ಸೈಮಾ ಪ್ರಶಸ್ತಿ ಪ್ರದಾನ (SIIMA Awards) ಸಮಾರಂಭವನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಾರತ ಮತ್ತು ವಿದೇಶದ ಬೇರೆ ಬೇರೆ ನಗರಗಳಲ್ಲಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ‘ಸೈಮಾ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ ಎಂಬುದು ವಿಶೇಷ. 2022ನೇ ಸಾಲಿನ ಸಮಾರಂಭವು ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ ನಡೆಯಲಿದೆ. ಅದಕ್ಕಾಗಿ ಸೆಪ್ಟೆಂಬರ್​ 10 ಮತ್ತು 11ರಂದು ದಿನಾಂಕ ನಿಗದಿ ಆಗಿದೆ. ಈ ಕುರಿತು ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಲಾಯಿತು. ಸೈಮಾ ಅವಾರ್ಡ್ಸ್​ ಮುಖ್ಯಸ್ಥೆ ಬೃಂದಾ ಪ್ರಸಾದ್​, ನಟರಾದ ಡಾಲಿ ಧನಂಜಯ್ (Daali Dhananjay)​, ರಾಣಾ ದಗ್ಗುಬಾಟಿ, ನಟಿಯರಾದ ಶ್ರೀಲೀಲಾ, ಫಾರಿಯಾ ಅಬ್ದುಲ್ಲಾ, ಶಾನ್ವಿ ಶ್ರೀವಾಸ್ತವ್​ ಮುಂತಾದವರು ಭಾಗಿ ಆಗಿದ್ದರು.

‘ಬೆಂಗಳೂರಲ್ಲಿ ‘ಸೈಮಾ’ ಅವಾರ್ಡ್ಸ್ ನಡೆಸಲು 2 ಪ್ರಮುಖ ಕಾರಣಗಳಿವೆ. ಒಂದು, ನಮ್ಮೆಲ್ಲರ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ‌. ಮತ್ತೊಂದು, ಕನ್ನಡ ಚಿತ್ರಗಳು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯವಾಗುತ್ತಿವುದು. ಹಾಗಾಗಿ ಈ ಬಾರಿ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದಿದ್ದಾರೆ ಬೃಂದಾ ಪ್ರಸಾದ್.

‘ನನಗೆ ಸೈಮಾ ಎಂದರೆ ಬರೀ ಪ್ರಶಸ್ತಿ ಅಲ್ಲ. ಅದೊಂದು ನೆನಪು. ನಾನು ಮೊದಲ ಬಾರಿ ಈ ಪ್ರಶಸ್ತಿ ಸ್ವೀಕರಿಸಲು ಮಲೇಷಿಯಾಗೆ ಹೋದ ನೆನಪು ನನ್ನ ಹೃದಯದಲ್ಲಿ ಇನ್ನೂ ಹಸಿರಾಗಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲಿ ಈ ಸಮಾರಂಭ ನಡೆಯುತ್ತಿರುವುದು ಹೆಚ್ಚು ಖುಷಿ ತಂದಿದೆ. ನಿಮ್ಮೆಲ್ಲರಿಗೂ ನಮ್ಮೂರಿಗೆ ಆತ್ಮೀಯ ಸ್ವಾಗತ. ಪದೇಪದೇ ಬೆಂಗಳೂರಿನಲ್ಲೇ ಈ ಸಮಾರಂಭ ಮಾಡಬೇಕು ಅನಿಸಬೇಕು. ಆ ಮಟ್ಟದಲ್ಲಿ ಈ ಸಮಾರಂಭ ಯಶಸ್ವಿಯಾಗಲಿ‌’ ಎಂದು ಧನಂಜಯ್​ ಶುಭ ಹಾರೈಸಿದ್ದಾರೆ.

‘ಹತ್ತು ವರ್ಷಗಳ ಕಾಲ ಒಂದು ಪ್ರಶಸ್ತಿ ಸಮಾರಂಭವನ್ನು ನಡೆಸುವುದು ಸುಲಭವಲ್ಲ. ಆ ಸಾಧನೆಗಾಗಿ ಬೃಂದಾ ಪ್ರಸಾದ್ ಮತ್ತು ತಂಡಕ್ಕೆ ನಾನು ಅಭಿನಂದನೆ ತಿಳಿಸುತ್ತೇನೆ. ಈ ಬಾರಿ 10ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನನ್ನ ಇಷ್ಟದ ಬೆಂಗಳೂರಿನಲ್ಲಿ ನಡೆಸುತ್ತಿರುವುದು ಸಂತಸದ ವಿಷಯ’ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೈಮಾ ಜೊತೆಗಿನ ತಮ್ಮ ಅನುಭವ ಮತ್ತು ನೆನಪುಗಳನ್ನು ಶಾನ್ವಿ ಶ್ರೀವಾಸ್ತವ್​, ಶ್ರೀಲೀಲಾ ಹಾಗೂ ಫಾರಿಯಾ ಅಬ್ದುಲ್ಲಾ ಹಂಚಿಕೊಂಡರು.

TV9 Kannada


Leave a Reply

Your email address will not be published.