ಸಾಂಕೇತಿಕ ಚಿತ್ರ
ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮಾಡುವ ಸಾಹಸ ಅಷ್ಟಿಷ್ಟಲ್ಲ. ಧೂಳು, ಒತ್ತಡದ ಬದುಕು, ನಿದ್ದೆಯ ಕೊರತೆ, ಹಾರ್ಮೋನುಗಳ ವ್ಯತ್ಯಾಸ ಹೀಗೆ ಹಲವು ಕಾರಣದಿಂದ ಮುಖದ ಕಾಂತಿ ಕುಂದುತ್ತದೆ. ಅದಕ್ಕಾಗಿ ಮಾರುಕಟ್ಟೆ ಉತ್ಪನ್ನಗಳನ್ನು ಬಳಸುವುದು ಅಥವಾ ಪಾರ್ಲರ್ಗಳಿಗೆ ತೆರಳಿ ಪೇಸ್ ಸ್ಕ್ರಬ್ಗೆ ಮೊರೆಹೋಗುತ್ತೇವೆ. ಅದರ ಬದಲು ಮನೆಯಲ್ಲಿಯೇ ಒಂದಷ್ಟು ಕ್ರಮಗಳನ್ನು ಕೈಗೊಂಡರೆ ನಿಮ್ಮ ತ್ವಚೆಯ ಸಮಸ್ಯೆ ಪರಿಹಾರವಾಗಲಿದೆ. ಅದಕ್ಕೆ ಉತ್ತಮ ಮಾರ್ಗವೆಂದರೆ ಟೀ ಟ್ರೀ ಎಣ್ಣೆಯ ಬಳಕೆ ಮಾಡುವುದು. ಟೀ ಮರದ ಎಲೆಯನ್ನು ಬಟ್ಟಿಳಿಸುವಿಕೆ ವಿಧಾನದಲ್ಲಿ ಸೋಸಿ ತಯಾರಿಸಲಾಗುತ್ತದೆ. ಇದು ನಿಮ್ಮ ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ನೆರವಾಗಿತ್ತದೆ.
ಟೀ ಟ್ರೀ ಎಣ್ಣೆಯನ್ನು ಸಾಮಾನ್ಯವಾಗಿ ಶ್ಯಾಂಪೂ, ಪೇಸ್ವಾಶ್ಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಜತೆಗೆ ನಿಮ್ಮ ಸೌಂದರ್ಯವರ್ದಕವಾಗಿ ಟೀ ಟ್ರೀ ಎಣ್ಣೆ ಕೆಲಸ ಮಾಡುವುದರಲ್ಲಿ ಅನುಮಾನವಿಲ್ಲ. ಹಾಗಾದರೆ ಟೀ ಟ್ರೀ ಎಣ್ಣೆಯ ಉಪಯೋಗಗಳೇನು? ಇಲ್ಲಿದೆ ಮಾಹಿತಿ…
ಮೊಡವೆಗಳ ನಿವಾರಣೆ
ಧೂಳು, ಎಣ್ಣೆಯುಕ್ತ ಚರ್ಮ, ಒತ್ತಡ, ನಿದ್ದೆಯ ಕೊರತೆ ಸೇರಿದಂತೆ ಹಲವು ಕಾರಣದಿಂದ ಮುಖದ ಮೇಲೆ ಮೊಡವೆಗಳು ಮೂಡುತ್ತವೆ. ಬ್ಯಾಕ್ಟೀರಿಯಾಗಳಿಂದ ಕೂಡಿದ ಗುಳ್ಳೆಗಳು ನೋವನ್ನು ನೀಡಿ ಮುಖದ ಇತರ ಭಾಗಗಳಿಗೂ ಹರಡುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವಾಗಿ ಟೀ ಟ್ರೀ ಎಣ್ಣೆಯನ್ನು ಬಳಸಬಹುದು. ಮೊಡವೆಇರುವ ಜಾಗದಲ್ಲಿ ಟೀ ಟ್ರೀ ಎಣ್ಣೆಯನ್ನು 2 ಡ್ರಾಪ್ ಅಷ್ಟು ಹಚ್ಚಿ 20 ನಿಮಿಷಗಳ ನಂತರ ತೊಳದುಕೊಳ್ಳಿ. ಇದು ನಿಮ್ಮ ಮೊಡವೆಯನ್ನು ನಿವಾರಿಸುತ್ತದೆ. ಮತ್ತು ಮುಖದ ಇತರ ಭಾಗಗಳಿಗೆ ಹರಡದಂತೆ ತಡೆಯುತ್ತದೆ.
ಚರ್ಮದ ಪೋಷಣೆ
ನಿಮ್ಮ ಮುಖದ ಚರ್ಮ ಡ್ರೈ ಅಥವಾ ಎಣ್ಣೆಯುಕ್ತ ಕೂಡಿದ್ದರೂ ತೊಂದರೆಯಿಲ್ಲ. ಮುಖಕ್ಕೆ ಟೀ ಟ್ರೀ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ನಿಮ್ಮ ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ. ಅಲ್ಲದೆ ಚರ್ಮಕ್ಕೆ ಬೇಕಾದ ಪೋಷಣೆ ಒದಗಿಸಿ ಮುಖವನ್ನು ಕಾಂತಿಯುತವಾಗಿಸುತ್ತದೆ. ಒಂದೆರಡು ಹನಿ ಟೀ ಟ್ರೀ ಎಣ್ಣೆಗೆ 2 ಹನಿ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚಿರಿ. ಇದು ನಿಮಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಕಾಂತಿಯುತ ಚರ್ಮ
ಟೀ ಟ್ರೀ ಎಣ್ಣೆಯು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಹೈಪರ್ಪಿಗ್ಮೆಂಟೇಷನ್ ಸಮಸ್ಯೆಯನ್ನೂ ನಿವಾರಿಸುತ್ತದೆ. ಮುಖದ ಮೇಲಿನ ಕಪ್ಪು ಕಲೆಯನ್ನು ನಿವಾರಿಸುವಲ್ಲಿ ಟೀ ಟ್ರೀ ಎಣ್ಣೆ ಸಹಾಯಕವಾಗಿದೆ. ಆದ್ದರಿಂದ ಪ್ರತಿದಿನ ಮಲಗುವ ಮೊದಲು ಮುಖಕ್ಕೆ ಹಚ್ಚಿ ಮಸಾಜ್ ಮಾಡಿರಿ.
ಮುಖದ ಉರಿಯನ್ನು ನಿವಾರಿಸುತ್ತದೆ.
ಬೇಸಿಗೆಯಲ್ಲಿ ಬಿಸಿಲಿಗೆ ಮುಖ ಉರಿದರೆ, ಚಳಿಗಾಲದಲ್ಲಿ ಚರ್ಮ ಒಡೆದು ಉರಿಯೂತ ಉಂಟಾಗುತ್ತದೆ. ಇದಕ್ಕೆ ಪರಿಹಾರವಾಗಿ ಟೀ ಟ್ರೀ ಎಣ್ಣೆಯನ್ನು ಬಳಸಿ. ಮುಖದ ಮೇಲೆ ಆಗುವ ಕೆಂಪು ಗುಳ್ಳೆಗಳನ್ನು ಇದು ನಿವಾರಿಸುತ್ತದೆ. ಜತೆಗೆ ನೋವಿನಿಂದ ಕೂಡಿದ ಒಡೆದ ಚರ್ಮವನ್ನು ಮೃದುಗೊಳಿಸಿ ಹಿತವಾದ ಅನುಭವ ನೀಡುತ್ತದೆ.
ಕಲೆಗಳ ನಿವಾರಣೆ
ಸಾಮಾನ್ಯವಾಗಿ ಮೊಡವೆಯಿಂದ ಮುಖದ ಮೇಲೆ ಕಪ್ಪಾದ ಕಲೆ ಅಥವಾ ಇನ್ನಿತರ ಟ್ಯಾಗಳು ಹಾಗೆಯೇ ಉಳಿದುಕೊಂಡಿರುತ್ತದೆ. ಅದನ್ನು ಹೋಗಲಾಡಿಸಲು ಟೀ ಟ್ರೀ ಎಣ್ಣೆಯನ್ನು ಬಳಸಿ. ಆ್ಯಂಟಿ ಬ್ಯಾಕ್ಟೀರಿಯಾದಂತೆ ಕೆಲಸ ಮಾಡುವ ಈ ಎಣ್ಣೆ ನಿಮ್ಮ ಮುಖದ ಚರ್ಮವನ್ನು ರಕ್ಷಿಸಲು ನೆರವಾಗುತ್ತದೆ.